ಹಳೆಯಂಗಡಿ: ಸಹಕಾರ ಕ್ಷೇತ್ರದಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಗಣನೀಯ ಸೇವೆ ಸಲ್ಲಿಸಿರುವ ಪ್ರಿಯದರ್ಶಿನಿ ಸಹಕಾರ ಸಂಘದ ಸಂಸ್ಥಾಪಕ ಅಧ್ಯಕ್ಷ ಎಚ್. ವಸಂತ್ ಬೆರ್ನಾಡ್ ಅವರು ಸಹಕಾರ ಕ್ಷೇತ್ರದ ಪ್ರಮುಖ ಸಾಧಕರಾಗಿ ಗುರುತಿಸಿಕೊಂಡಿದ್ದಾರೆ.
ದಿವಂಗತ ಸಹಕಾರಿ ಧುರೀಣ ಎಚ್. ನಾರಾಯಣ ಸನಿಲ್ ಅವರ ಮಾರ್ಗದರ್ಶನದಲ್ಲಿ ಸಹಕಾರ ಕ್ಷೇತ್ರ ಪ್ರವೇಶಿಸಿದ ಅವರು, 1995ರಲ್ಲಿ ಪಡುಪಣಂಬೂರು ಸಹಕಾರಿ ವ್ಯವಸಾಯಿಕ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿ ಸೇವೆ ಆರಂಭಿಸಿದರು.
2021ರಲ್ಲಿ ಹಳೆಯಂಗಡಿಯಲ್ಲಿ ಪ್ರಿಯದರ್ಶಿನಿ ಸಹಕಾರ ಸಂಘವನ್ನು ಸ್ಥಾಪಿಸಿ ಸಂಸ್ಥಾಪಕ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡರು. ಇವರ ನಾಯಕತ್ವದಲ್ಲಿ ಸಂಘವು ಅಲ್ಪಾವಧಿಯಲ್ಲೇ ಬೆಳವಣಿಗೆ ಹೊಂದಿ ಐದಕ್ಕೂ ಹೆಚ್ಚು ಶಾಖೆಗಳನ್ನು ವಿಸ್ತರಿಸಿದೆ.
ಶೈಕ್ಷಣಿಕ ಪ್ರೋತ್ಸಾಹ, ಪ್ರತಿಭಾ ಪುರಸ್ಕಾರ ಹಾಗೂ ಸ್ವಸಹಾಯ ಗುಂಪುಗಳ ಉತ್ತೇಜನದ ಮೂಲಕ ಸಾಮಾಜಿಕ ಮತ್ತು ಗ್ರಾಮೀಣ ಆರ್ಥಿಕ ಅಭಿವೃದ್ಧಿಗೂ ಕೊಡುಗೆ ನೀಡಿದ್ದಾರೆ. ಇವರ ನೇತೃತ್ವದ ಸಂಘಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ವಿಶಿಷ್ಟ ಸಾಧನಾ ಪ್ರಶಸ್ತಿಯೂ ಲಭಿಸಿದೆ.
ಸಹಕಾರ ಕ್ಷೇತ್ರದ ಸುದೀರ್ಘ ಸೇವೆ ಮತ್ತು ಸಾಧನೆಗಾಗಿ ಎಚ್. ವಸಂತ್ ಬೆರ್ನಾಡ್ ಅವರಿಗೆ ಸಹಕಾರ ರತ್ನ ಪ್ರಶಸ್ತಿ ಲಭಿಸಿರುವುದು ಸಹಕಾರಿ ವಲಯದಲ್ಲಿ ಸಂತಸ ಮೂಡಿಸಿದೆ.
31 ವರ್ಷಗಳ ಸಹಕಾರಿ ಸೇವೆ: ಎಚ್. ವಸಂತ್ ಬೆರ್ನಾಡ್ ಅವರಿಗೆ ಸಹಕಾರ ರತ್ನ ಗೌರವ
RELATED ARTICLES

