ಪಡುಬಿದ್ರಿ: ಸಹಕಾರ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆ ಹಾಗೂ ಸಾಧನೆಯನ್ನು ಗುರುತಿಸಿ ಕರ್ನಾಟಕ ಸರಕಾರ ನೀಡುವ ಪ್ರತಿಷ್ಠಿತ ‘ಸಹಕಾರ ರತ್ನ ಪ್ರಶಸ್ತಿ-2026’ ಈ ಬಾರಿ ಉಡುಪಿ ಜಿಲ್ಲೆಯ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಅಧ್ಯಕ್ಷ ವೈ. ಸುಧೀರ್ ಕುಮಾರ್ ಅವರಿಗೆ ಲಭಿಸಿದೆ.
ನವೆಂಬರ್ 14ರಂದು ಬೆಂಗಳೂರಿನಲ್ಲಿ ನಡೆಯಲಿರುವ ಅಖಿಲ ಭಾರತ ಸಹಕಾರಿ ಸಪ್ತಾಹದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.
ಹಲವು ದಶಕಗಳಿಂದ ಸಹಕಾರ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ವೈ. ಸುಧೀರ್ ಕುಮಾರ್ ಅವರು, ಸಹಕಾರಿ ಸಂಸ್ಥೆಯನ್ನು ಜನಸಾಮಾನ್ಯರ ಹಾಗೂ ರೈತರ ಅಭಿವೃದ್ಧಿಗೆ ಪೂರಕವಾಗಿ ಮುನ್ನಡೆಸುವಲ್ಲಿ ತಮ್ಮದೇ ಆದ ಕಾರ್ಯವೈಖರಿಯನ್ನು ರೂಪಿಸಿಕೊಂಡಿದ್ದಾರೆ. ರೈತರು, ಗ್ರಾಹಕರು ಹಾಗೂ ಖಾತೆದಾರರ ಹಿತದೃಷ್ಟಿಯಿಂದ ವರ್ಷಂಪ್ರತಿ ವಿವಿಧ ಜನಪರ ಮತ್ತು ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದಾರೆ.
ಸಹಕಾರ ಕ್ಷೇತ್ರದ ಮೂಲಕ ಸಮಾಜಮುಖಿ ಚಟುವಟಿಕೆಗಳಿಗೆ ಆದ್ಯತೆ ನೀಡಿರುವ ಅವರ ಕಾರ್ಯನಿರ್ವಹಣೆಗೆ ಈಗಾಗಲೇ ಹಲವು ಪ್ರಶಸ್ತಿ-ಪುರಸ್ಕಾರಗಳು ಸಂದಿವೆ. ಇದೀಗ ರಾಜ್ಯ ಸರಕಾರದ ಪ್ರತಿಷ್ಠಿತ ಸಹಕಾರ ರತ್ನ ಪ್ರಶಸ್ತಿ ಒಲಿದಿರುವುದು ಅವರ ಸುದೀರ್ಘ ಸೇವೆಗೆ ಸಂದ ಮತ್ತೊಂದು ಮಹತ್ವದ ಗೌರವವಾಗಿದೆ.
ಅಧ್ಯಕ್ಷರ ನೇತೃತ್ವದಲ್ಲಿ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಸಾಧಿಸಿರುವ ಪ್ರಗತಿಗೆ ಈ ಪ್ರಶಸ್ತಿ ಮತ್ತೊಂದು ಹೆಮ್ಮೆಯ ಗರಿಯಾಗಿದ್ದು, ಸಂಸ್ಥೆಯ ಗೌರವವನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಚ್ಚಿಸಿದಂತಾಗಿದೆ.
ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಗೆ ಮತ್ತೊಂದು ಗರಿ: ಅಧ್ಯಕ್ಷ ವೈ. ಸುಧೀರ್ ಕುಮಾರ್ಗೆ ಪ್ರತಿಷ್ಠಿತ ‘ಸಹಕಾರ ರತ್ನ’ ಪ್ರಶಸ್ತಿ
RELATED ARTICLES

