HomeFresh Newsಅಕ್ರಮವಾಗಿ ನೆಲೆಸಿರುವ ಆರೋಪ; ಇಬ್ಬರು ಬಾಂಗ್ಲಾ ಪ್ರಜೆಗಳ ಬಂಧನ

ಅಕ್ರಮವಾಗಿ ನೆಲೆಸಿರುವ ಆರೋಪ; ಇಬ್ಬರು ಬಾಂಗ್ಲಾ ಪ್ರಜೆಗಳ ಬಂಧನ

ಪಣಂಬೂರು: ಮಂಗಳೂರು: ಮಂಗಳೂರು ನಗರದ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ನೆಲೆಸಿದ್ದ ಇಬ್ಬರು ಬಾಂಗ್ಲಾದೇಶಿ ಪ್ರಜೆಗಳನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ.

ಪಣಂಬೂರು ಬೀಚ್ ಸಮೀಪದ ರೆಸ್ಟೋರೆಂಟ್ ಒಂದರಲ್ಲಿ ಬಾಂಗ್ಲಾದೇಶದ ಇಬ್ಬರು ಪ್ರಜೆಗಳು ಕೆಲಸ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.ಪಣಂಬೂರು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸಲೀಂ ಅಬ್ಬಾಸ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಇಬ್ಬರನ್ನು ವಶಕ್ಕೆ ಪಡೆದಿದೆ.

ಬಂಧಿತರನ್ನು ಅಶಿಕುಲ್ ಇಸ್ಲಾಂ ಮತ್ತು ಎಂಡಿ ಅಮೀನ್ ಎಂದು ಗುರುತಿಸಲಾಗಿದೆ. ಅಕ್ರಮವಾಗಿ ಭಾರತದಲ್ಲಿ ನೆಲೆಸಿರುವ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಬಂಧಿತ ಇಬ್ಬರನ್ನೂ ವಿಚಾರಣೆ ನಡೆಸಿದ ಪೊಲೀಸರು, ಅವರಲ್ಲಿ ಯಾವುದೇ ಅಧಿಕೃತ ದಾಖಲಾತಿಗಳಿಲ್ಲದೆ ಅಕ್ರಮವಾಗಿ ಭಾರತದಲ್ಲಿ ನೆಲೆಸಿರುವುದು ಕಂಡು ಬಂದಿದ್ದು, ಮುಂದಿನ ಕಾನೂನು ಪ್ರಕ್ರಿಯೆ ಬಗ್ಗೆ ಅವರನ್ನು ಅಕ್ರಮ ವಲಸಿಗರ ಬಂಧನ ಕೇಂದ್ರದಲ್ಲಿರಿಸಿ ನಂತರ FRRO ಅವರ ಮುಂದೆ ಹಾಜರುಪಡಿಸಿ ಬಾಂಗ್ಲಾದೇಶಕ್ಕೆ ಗಡಿಪಾರು ಮಾಡುವ ಬಗ್ಗೆ ಕಾನೂನು ಪ್ರಕ್ರಿಯೆ ನಡೆಯುತ್ತಿದೆ ಎಂದು ಪಣಂಬೂರು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಪತ್ತೆ ಕಾರ್ಯದಲ್ಲಿ ಪಣಂಬೂರು ಠಾಣಾ ಪೊಲೀಸ್ ನಿರೀಕ್ಷಕ ಸಲೀಂ ಅಬ್ಬಾಸ್ ನೇತೃತ್ವದಲ್ಲಿ ಪಿಎಸ್ಐಗಳಾದ ಶ್ರೀಕಲಾ ಕೆ .ಟಿ., ಜ್ಞಾನಶೇಖರ ಮತ್ತು ಸಿಬ್ಬಂದಿ ಇಮ್ತಿಯಾಝ್, ಫಕ್ಕಿರೇಶ್, ರಾಕೇಶ್ ಎಲ್. ಎಮ್. ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments