ಮಂಗಳೂರಿನ ಸಂತ ಅಲೋಶಿಯಸ್ ಶಾಲೆಯ ಗೊನ್ಝಾಗಲ್ಲಿ ಮಕ್ಕಳ ದಿನಾಚರಣೆ ಹಾಗೂ ‘ವಿವಾ ಗೊನ್ಝಾಗ – ಒಂದು ಅದ್ಧೂರಿ ಮನರಂಜನಾ ಮೇಳವನ್ನು ನವೆಂಬರ್ 27 ಮತ್ತು 28, 2026ರಂದು ಸಂತ ಅಲೋಶಿಯಸ್ ಕಾಲೇಜಿನ ಮೈದಾನದಲ್ಲಿ ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು.

ಶಾಲಾ ಆಡಳಿತ ಮಂಡಳಿ ಹಾಗೂ ಪೋಷಕ-ಶಿಕ್ಷಕ ಕಾರ್ಯಕಾರಿ ಸಮಿತಿಯ ಸಹಯೋಗದಲ್ಲಿ ಆಯೋಜಿಸಲಾದ ಈ ಎರಡು ದಿನಗಳ ಸಂಭ್ರಮಾಚರಣೆಯು ‘ಸೆರಿನಿಟಿ – ಶಾಂತಿ ಮತ್ತು ಸೌಹಾರ್ದತೆಯ ಪ್ರಸಾರ’ ಎಂಬ ಧ್ಯೇಯವಾಕ್ಯದೊಂದಿಗೆ ನಡೆಯಿತು. ಶಾಂತಿ, ದಯೆ, ಪರಸ್ಪರ ತಿಳುವಳಿಕೆ ಮತ್ತು ಒಗ್ಗಟ್ಟಿನ ಮೌಲ್ಯಗಳನ್ನು ಸಾರುವುದರ ಜೊತೆಗೆ, ಮಕ್ಕಳಲ್ಲಿರುವ ಪ್ರತಿಭೆ, ಸೃಜನಶೀಲತೆ ಹಾಗೂ ಕಲಾತ್ಮಕ ಅಭಿವ್ಯಕ್ತಿಗೆ ಸೂಕ್ತ ವೇದಿಕೆಯನ್ನು ಒದಗಿಸಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಿಸ್ ಕರ್ನಾಟಕ 2026ರ ಕಿರೀಟಧಾರಿ ಕುಮಾರಿ ಅಯೋನ ರಿಯ ಮೆನೆಜಸ್ ಆಗಮಿಸಿದ್ದರು. ಅವರೊಂದಿಗೆ ಯುನೈಟೆಡ್ ಟೊಯೋಟಾದ ಸಹಾಯಕ ಪ್ರಧಾನ ವ್ಯವಸ್ಥಾಪಕಿ ಶ್ರೀಮತಿ ಸರಸ್ವತಿ ಹಾಗೂ ಯುನೈಟೆಡ್ ಟೊಯೋಟಾದ ಕ್ಲಸ್ಟರ್ ಮುಖ್ಯಸ್ಥರಾದ ಶ್ರೀ ಕಿರಣ್ ಸುವರ್ಣ ಅವರು ಉಪಸ್ಥಿತರಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯ ಅತಿಥಿಗಳು, ಈ ಸಂಭ್ರಮದ ಭಾಗವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿಕೊಂಡು, ಹೊಸ ಅನುಭವಗಳನ್ನು ಸ್ವೀಕರಿಸಲು ಹಾಗೂ ತಮ್ಮ ಆತ್ಮವಿಶ್ವಾಸದ ಮಿತಿಯನ್ನು ವಿಸ್ತರಿಸಲು ಕರೆ ನೀಡಿದರು. “ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಲು ಎಂದಿಗೂ ಹಿಂಜರಿಯಬೇಡಿ. ಪ್ರತಿಯೊಂದು ಅವಕಾಶವೂ ಕಲಿಯಲು, ಬೆಳೆಯಲು ಮತ್ತು ನಮ್ಮಲ್ಲಿರುವ ಸಾಮರ್ಥ್ಯವನ್ನು ಅರಿತುಕೊಳ್ಳಲು ನೆರವಾಗುತ್ತದೆ .”ಎಂದು ಪ್ರೇರಣಾದಾಯಕ ಮಾತುಗಳನ್ನಾಡಿದರು. ಆತ್ಮವಿಶ್ವಾಸವು ಸ್ವಯಂ ನಂಬಿಕೆಯಿಂದ ಮೂಡುತ್ತದೆ ಎಂಬುದನ್ನು ತಿಳಿಸುತ್ತಾ, ಹೊಸ ಸವಾಲುಗಳನ್ನು
ಸ್ವೀಕರಿಸಿ ನಿರಂತರವಾಗಿ ಕಲಿಯುತ್ತಿರಲು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಶಾಲೆಯ ಪ್ರಾಂಶುಪಾಲರಾದ ವಂದನೀಯ ಫಾದರ್ ರೋಹನ್ ಡಿ’ಅಲ್ಮೇಡಾ ಎಸ್.ಜೆ. ಅವರು ಮಾತನಾಡಿ, ಈ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಶಿಕ್ಷಕರು, ಸಹಕಾರ ನೀಡಿದ ಪೋಷಕರು ಹಾಗೂ ಉತ್ಸಾಹಭರಿತ ವಿದ್ಯಾರ್ಥಿಗಳ ಸಾಮೂಹಿಕ ಪ್ರಯತ್ನವನ್ನು ಶ್ಲಾಘಿಸಿದರು. ಜೀವನದಲ್ಲಿ ಸಂತೋಷದ ಮಹತ್ವವನ್ನು ತಿಳಿಸುತ್ತಾ, ಪ್ರತಿಯೊಬ್ಬರೂ ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಸಮರ್ಪಣೆ ಮತ್ತು ಬದ್ಧತೆಯಿಂದ ಮುನ್ನಡೆಯಬೇಕೆಂದು ಪ್ರೋತ್ಸಾಹಿಸಿದರು.

ಮುಖ್ಯ ಅತಿಥಿ ಕುಮಾರಿ ಅಯೋನ ರಿಯ ಮೆನೆಜಸ್ ಅವರ ಸಾಧನೆಯ ಪಯಣವನ್ನು ವಿದ್ಯಾರ್ಥಿಗಳಿಗೆ ಮಾದರಿಯಾಗಿ ಪರಿಚಯಿಸಿದ ಅವರು, ಮೂರನೇ ತರಗತಿಯ ಭೂಗೋಳ ಪ್ರತಿಭೆ ಮಾಸ್ಟರ್ ರೋನನ್ ಹಾಗೂ ಎಂಟನೇ ತರಗತಿಯ ವಿದ್ಯಾರ್ಥಿ, ಜೀ ಕನ್ನಡದ ‘ಸರಿಗಮಪ ಲಿಟಲ್ ಚಾಂಪ್ಸ್ 2026’ ವಿಜೇತ ಮಾಸ್ಟರ್ ಅಶ್ಮಿತ್ ಎ.ಜೆ. ಅವರ ಸಾಧನೆಯನ್ನು ಅಭಿನಂದಿಸಿದರು. ಕಾರ್ಯಕ್ರಮಕ್ಕೆ ಉದಾರವಾಗಿ ಸಹಕಾರ ನೀಡಿದ ಪ್ರಾಯೋಜಕರು ಹಾಗೂ ಹಿತೈಷಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿ ಕುಮಾರಿ ಅಯೋನ ರಿಯ ಮೆನೆಜಸ್ ಹಾಗೂ ಮಾಸ್ಟರ್ ರೋನನ್ ಡಿ’ಕೋಸ್ಟಾ ಅವರನ್ನು ಗಣ್ಯರು ಗೌರವಿಸಿ ಅಭಿನಂದಿಸಿದರು.

ಎರಡನೇ ದಿನದ ಕಾರ್ಯಕ್ರಮದಲ್ಲಿ ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ನೂತನ ರೆಕ್ಟರ್ ಆಗಿ ನೇಮಕಗೊಂಡ ವಂದನೀಯ ಫಾದರ್ ರೋನಿ ಪೈಸ್ ಎಸ್.ಜೆ. ಅವರನ್ನು ಶಾಲೆಯ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಿ ಅಭಿನಂದಿಸಲಾಯಿತು. ಪ್ರಾಂಶುಪಾಲರು, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಅವರಿಗೆ ಶುಭಾಶಯಗಳನ್ನು ಕೋರಿ, ನೂತನ ಜವಾಬ್ದಾರಿಯಲ್ಲಿ ಯಶಸ್ಸು ಮತ್ತು ಮುಂದಿನ ಕಾರ್ಯಗಳಿಗೆ ಶುಭ ಹಾರೈಸಿದರು.

ಎರಡು ದಿನಗಳ ಈ ಅದ್ಧೂರಿ ಮೇಳದಲ್ಲಿ ವೈವಿಧ್ಯಮಯ ಆಹಾರ ಮಳಿಗೆಗಳು, ಆಟದ ಮಳಿಗೆಗಳು, ಶಾಪಿಂಗ್ ಮಳಿಗೆಗಳು ಹಾಗೂ ಮಕ್ಕಳಿಗಾಗಿ ಹಲವಾರು ಮನರಂಜನಾ ಚಟುವಟಿಕೆಗಳು ಎಲ್ಲರ ಗಮನ ಸೆಳೆದವು. ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ವಿವಿಧ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ಸಂಸ್ಥೆಯಇಡೀ ವಾತಾವರಣವು ಸಂಭ್ರಮ ಮತ್ತು ಉತ್ಸಾಹದಿಂದ ಕಂಗೊಳಿಸಿತು.

ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲರಾದ ಶ್ರೀಮತಿ ಲಾರೆಲ್ ಡಿಸೋಜಾ ಹಾಗೂ ಶ್ರೀಮತಿ ಅಪರ್ಣಾ ಸುರೇಶ್, ಶೈಕ್ಷಣಿಕ ಸಂಯೋಜಕರಾದ ದೀಪಾ ಕಾರ್ಕಡ ,ಶ್ರೀಮತಿ ದೀಪ್ತಿ ಕರ್ಕಡ, ಮತ್ತು ಶ್ರೀಮತಿ ಕ್ಯಾರೆಲ್ ಟೀನಾ ರೋಡ್ರಿಗಸ್ ಮತ್ತು ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು. ಶ್ಶ್ರೀಮತಿ ಲಾರೆಲ್ ಡಿಸೋಜಾ ಅವರು ಸ್ವಾಗತ ಭಾಷಣ ಮಾಡಿದರು. ಪೋಷಕ-ಶಿಕ್ಷಕ ಕಾರ್ಯಕಾರಿ ಸಮಿತಿಯ ಉಪಾಧ್ಯಕ್ಷರಾದ ಶ್ರೀಮತಿ ರೀನಾ ನೊರೊನ್ಹಾ ಅವರು ವಂದನಾರ್ಪಣೆ ಸಲ್ಲಿಸಿದರು. ಶ್ರೀ ಸ್ಯಾಮ್ಯುಯೆಲ್ ಪೀಟರ್ಸ್
ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.ಹಾಗೂ ಪೋಷಕ ಶಿಕ್ಷಕ ಕಾರ್ಯಕಾರಿ ಸಮಿತಿಯ ಜಂಟಿ ಕಾರ್ಯದರ್ಶಿಯಾದ
ಕ್ವೀನಿ ಫೆರ್ನಾಂಡಿಸ್ ಉಪಸ್ಥಿತರಿದ್ದರು.

ಒಟ್ಟಾರೆಯಾಗಿ, ‘ವಿವಾ ಗೊನ್ಜಾಗ’ಕೇವಲ ಮನರಂಜನೆಯ ಮೇಳವಾಗಿರದೆ, ವಿದ್ಯಾರ್ಥಿಗಳ ಪ್ರತಿಭೆ, ಸೃಜನಶೀಲತೆ, ಉದ್ಯಮಶೀಲತೆ, ಪರಸ್ಪರ ಸಹಕಾರ ಮತ್ತು ಸಾಮುದಾಯಿಕ ಒಗ್ಗಟ್ಟನ್ನು ಬೆಳೆಸುವ ಸುಂದರ ವೇದಿಕೆಯಾಯಿತು. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಹಾಗೂ ಸಂದರ್ಶಕರನ್ನು ಒಂದೇ ಸೂರಿನಡಿ ಸೇರಿಸಿ, ಸಂತೋಷ, ಸೌಹಾರ್ದತೆ ಮತ್ತು ಸಂಭ್ರಮದ ಮರೆಯಲಾಗದ ಕ್ಷಣಗಳನ್ನು ಸೃಷ್ಟಿಸುವ ಮೂಲಕ ಈ ಎರಡು ದಿನಗಳ ಆಚರಣೆಯು ಯಶಸ್ವಿಯಾಗಿ ಸಂಪನ್ನಗೊಂಡಿತು.

