ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ನೆಕ್ಕರೆ ಪೆಟ್ರೋಲ್ ಪಂಪ್ ಬಳಿ ಕಾರು ಹಾಗೂ ಜಿತೋ ಗೂಡ್ಸ್ ಟೆಂಪೋ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಒರ್ವ ಸಾವನ್ನಪ್ಪಿದ್ದು ಇನ್ನೋರ್ವ ಗಂಭೀರ ಗಾಯಗೊಂಡ ಘಟನೆ ಶನಿವಾರ ನಡದಿದೆ.
ಮೃತಪಟ್ಟ ಯುವಕನನ್ನು ಕಡಬ ತಾಲೂಕಿನ ಕೊಡಿಂಬಾಳ ಗ್ರಾಮದ ಮಾಲೇಶ್ವರ ಪೊರಂತು ನಿವಾಸಿ ಮಹಮ್ಮದ್ ರಫೀಕ್ ಎಂಬವರ ಪುತ್ರ ತಮೀಮ್(೨೬ವ) ಎಂದು ಗುರುತಿಸಲಾಗಿದೆ. ಜಿತೋ ಟೊಂಪೋ ಚಾಲಕ ಕಡಬ ಕಳಾರ ನಿವಾಸಿ ಖಲೀಲ್ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಡಬದಲ್ಲಿ ಹಣ್ಣಿನ ವ್ಯಾಪಾರಿಗಳಾದ ಇವರುಗಳು ಮಂಗಳೂರಿನಿoದ ಹಣ್ಣುಗಳನ್ನು ಲೋಡ್ ಮಾಡಿಕೊಂಡು ಕಡಬ ಕಡೆಗೆ ತೆರಳುತಿದ್ದರು. ಈ ವೇಳೆ ನೆಕ್ಕರೆ ಪೆಟ್ರೋಲ್ ಪಂಪಿನಲ್ಲಿ ಡಿಸೇಲ್ ತುಂಬಿಸಿ ಕಡಬ ಕಡೆಗೆ ತೆರಳುತ್ತಿದ್ದ ವೇಳೆ ಆಲಂಕಾರು ಕಡೆಯಿಂದ ವೇಗವಾಗಿ ಹಾಗೂ ನಿರ್ಲಕ್ಷತನದಿಂದ ಬಂದ ನೆಕ್ಸಾನ್ ಇವಿ ಕಾರು ವಿರುದ್ದ ದಿಕ್ಕಿನಿಂದ ಬಂದು ನೇರವಾಗಿ ಜಿತೋ ಟೆಂಪೋಗೆ ಡಿಕ್ಕಿ ಹೊಡೆದಿದೆ. ಮತ್ತೋಂದು ವಾಹನವನ್ನು ಓವರ್ ಟೇಕ್ ಮಾಡುವ ಭರದಲ್ಲಿ ಈ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದು ಕಾರು ಚಾಲಕ ಕಾರನ್ನು ಬಿಟ್ಟು ಪರಾರಿಯಾಗಿದ್ದಾನೆ. ಕಾರನ್ನು ರಾಮಕುಂಜ ಗ್ರಾಮದ ಕುಂಡಾಜೆ ನಿವಾಸಿಯೊಬ್ಬರಿಗೆ ಸೇರಿದ್ದು ಎನ್ನಲಾಗಿದೆ.
ಡಿಕ್ಕಿಯ ರಭಸಕ್ಕೆ ಜಿತೋ ವಾಹನ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ಇದರಲ್ಲಿ ಸಿಲುಕಿದ್ದ ಇಬ್ಬರನ್ನು ಹೊರ ತೆಗೆಯಲು ಸ್ಥಳಿಯರು ಹರಸಾಹಸ ಪಟ್ಟರು. ಜೆಸಿಬಿ ಯಂತ್ರವನ್ನು ತಂದು ಎಳೆದಾಡಿದರು ಗಾಯಾಳುಗಳನ್ನು ಹೊರತೆಗೆಯಲು ಅಸಾಧ್ಯವಾದಾಗ ಕೊನೆಗೆ ಗ್ಯಾಸ್ಕಟ್ಟರ್ ಮೂಲಕ ವಾಹನದ ಬಿಡಿ ಭಾಗಗಳನ್ನು ತುಂಡರಿಸಿ ಗಾಯಾಳುಗಳನ್ನು ಹೊರ ತೆಗೆಯಲಾಯಿತು. ಆದರೆ ಆ ವೇಳೆಗಾಗಲೇ ತಮೀಮ್ ಕೊನೆಯುಸಿರೆಳೆದಿದ್ದರು.

ವಿದೇಶಕ್ಕೆ ತೆರಳಬೇಕಾದ ಯುವಕ ಮಸಣ ಸೇರುವಂತಾಯಿತು:
ದುರಾದೃಷ್ಟವೆ ಹಾಗೆ, ಮೃತಪಟ್ಟ ಯುವಕ ತಮೀಮ್ ಇನ್ನೆರಡು ದಿನಗಳಲ್ಲಿ ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳುವವನಿದ್ದ. ಆತನಿಗೆ ಈ ಹಿಂದೆ ನವೆಂಬರ್ ೧೫ ರಂದು ವಿದೇಶಕ್ಕೆ ಹೋಗವವನಿದ್ದ. ಆದರೆ ಕಾರಣಾಂತರದಿoದ ಪ್ರಯಾಣ ರದ್ದಾಗಿತ್ತು. ಬಳಿಕ ೧೯ಕ್ಕೆ ಟಿಕೆಟ್ ನಿಗದಿಯಾಗಿತ್ತು. ವಿದೇಶಕ್ಕೆ ಹೋಗಲು ಇನ್ನೂ ಸಮಯ ಇರುವ ಹಿನ್ನೆಲೆಯಲ್ಲಿ ಆತ ಹಣ್ಣು ತರುವ ಗೂಡ್ಸ್ ಟೆಂಪೋದಲ್ಲಿ ತೆರಳಿದ್ದ, ವಾಪಾಸ್ಸು ಬರುವಾಗ ಈ ದುರ್ಘಟನೆ ನಡೆಯಿತು. ವಿದೇಶಕ್ಕೆ ತೆರಳಿ ಉದ್ಯೋಗ ಮಾಡಬೇಕಾದ ಮನೆಯ ಒಬ್ಬ ಮಗ ಮಸಣ ಸೇರುವಂತಾಗಿರುವುದು ವಿರ್ಯಾಸ. ಆಲಂಕಾರು ಗ್ರಾಮದ ನೆಕ್ಕರೆ ನಿವಾಸಿ ಎನ್.ಎ. ಅಬೂಬಕ್ಕರ್ ನೀಡಿರುವ ದೂರಿನಂತೆ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

