ಬಂಟ್ವಾಳ: ಕೆಲಸ ಬಿಟ್ಟು ಮನೆಗೆ ತೆರಳಲು ಬಸ್ಸಿನಲ್ಲಿ ಕುಳಿತಿದ್ದ ಯುವತಿಯನ್ನು, ದುಷ್ಕರ್ಮಿಯೋರ್ವ ಬಸ್ಸಿನಿಂದ ಅಟ್ಟಾಡಿಸಿ ತಲವಾರಿನಿಂದ ಮಾರಣಾಂತಿಕವಾಗಿ ಕೊಚ್ಚಿ ಹತ್ಯೆಗೈದ ಘಟನೆ ಬಿ.ಸಿ.ರೋಡಿನ ಕೆಎಸ್ ಆರ್ ಟಿಸಿ ಬಸ್ಸು ನಿಲ್ದಾಣದಲ್ಲಿ ಗುರುವಾರ ಸಂಜೆ ನಡೆದಿದೆ.
ಬಂಟ್ವಾಳ ತಾಲೂಕಿನ ಕಡೇಶಿವಾಲಯ ನಿವಾಸಿ ಬಾಳಪ್ಪ ಗೌಡ ಎಂಬವರ ಮಗಳು ಲಾವಣ್ಯ ಗೌಡ (27) ತಲವಾರು ದಾಳಿಯಿಂದ ಹತ್ಯೆಗೀಡಾದ ಯುವತಿಯಾಗಿದ್ದು ಮೃತದೇಹವನ್ನು ಬಂಟ್ವಾಳದ ಆಸ್ಪತ್ರೆಯಲ್ಲಿ ಇರಿಸಲಾಗಿದೆ.
ಹತ್ಯೆಗೈದ ಆರೋಪಿ ತಾನು ಬಂದಿರುವ ಕಾರಿನಲ್ಲಿ ಪರಾರಿಯಾಗಿದ್ದು ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ. ಆರೋಪಿ ಯುವತಿಯನ್ನು ಕೊಚ್ಚಿ ಕೊಲೆಗೈಯ್ಯುವ ದೃಶ್ಯವನ್ನು ಬಸ್ಸು ನಿಲ್ದಾಣದಲ್ಲಿದ್ದ ಪ್ರಯಾಣಿಕರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗುತ್ತಿದೆ. ಘಟನಾ ಸ್ಥಳದಲ್ಲಿ ರಕ್ತದ ಕೋಡಿ ಹರಿದ್ದಿದ್ದು ಯುವತಿಯ ಬ್ಯಾಗ್, ಮೊಬೈಲ್, ಹಾಗೂ ತಲವಾರು ಪತ್ತೆಯಾಗಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಎಸ್ಪಿ ಅರುಣ್ ಕುಮಾರ್, ಎಎಸ್ಪಿ ಯಶ್ ಕುಮಾರ್ ಶರ್ಮ, ನಗರ ಠಾಣಾ ವೃತ್ತ ನಿರೀಕ್ಷಕ ಅನಂತ ಪದ್ಮನಾಭ, ಎಸೈ ಸಂದೀಪ್ ಶೆಟ್ಟಿ, ಟ್ರಾಫಿಕ್ ಎಸೈ ಆದರ್ಶ್ ಹಾಗೂ ಪೊಲೀಸ್ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ


