ಬಂಟ್ವಾಳದ ಅಮ್ಟಾಡಿಯಲ್ಲಿ ಸಾಂಪ್ರದಾಯಿಕ ನೇಜಿ ನಾಟಿ : ಸಂಧಿ, ಪಾಡ್ದನ ಹಾಡುವ ಮೂಲಕ ಗಮನ ಸೆಳೆದ ಮಹಿಳೆಯರು
ಬಂಟ್ವಾಳ: ಕಾರ್ಮಿಕರ ಕೊರತೆಯಿಂದ ಭತ್ತದ ಸಾಗುವಳಿಯೂ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದ್ದು ಅಳಿದುಳಿದಿರುವ ಗದ್ದೆಗಳು ಬಹುತೇಕ ಬರಡಾಗಿದ್ದರೆ ಕೆಲವೊಂದು ಗದ್ದೆಗಳಲ್ಲಿ ಯಾಂತ್ರೀಕ ವಿಧಾನದಲ್ಲಿ ಕೃಷಿ ಕಾರ್ಯಗಳು ನಡೆಯುತ್ತಿವೆ. ಕೃಷಿ ಚಟುವಟಿಕೆಗಳು ಅವನತಿಗೆ ಸಾಗುತ್ತಿದ್ದಂತೆಯೇ ಅದರೊಂದಿಗೆ ಮಿಳಿತವಾಗಿರುವ ಅನೇಕ ಕೃಷಿ ಸಂಬಂಧಿ ಆಚರಣೆಗಳು, ಜಾನಪದೀಯವಾದ ಪಾಡ್ದನ, ಸಂಧಿ ಮೊದಲಾದ ಹಾಡು ಪ್ರಾಕಾರಗಳು ಕಣ್ಮರೆಯಾಗುತ್ತಿದೆ.
ಬಲು ಅಪುರೂಪವೆಂಬಂತೆ ಬಂಟ್ವಾಳ ತಾಲೂಕಿ ಅಮ್ಟಾಡಿ ಗ್ರಾಮದ ಏರ್ಯಬೀಡು ಆನಂದಿ ಆಳ್ವ ಅವರ ಗದ್ದೆಯಲ್ಲಿ ಮಹಿಳೆಯರು ಸಾಂಪ್ರಾದಯಿಕ ವಿಧಾನದಲ್ಲಿ ನೇಜಿ ನಾಟಿ ಮಾಡುವ ದೃಶ್ಯ ಬುಧವಾರ ಕಂಡು ಬಂತು. ನೇಜಿ ನಾಟಿ ಮಾಡುತ್ತಿದ್ದಂತೆಯೇ ಮಹಿಳೆಯರು ಸಂಧಿ, ಪಾಡ್ದನ ಹಾಡುವ ಮೂಲಕ ಗಮನ ಸೆಳೆದರು. ಹೊಟೇಲ್ ಉದ್ಯಮಿ ಸದಾನಂದ ಬಂಗೇರ ಕಳೆದ ಹಲವಾರು ವರ್ಷಗಳಿಂದ ಏರ್ಯಬೀಡುವಿನ ಗದ್ದೆಯಲ್ಲಿ ಭತ್ತದ ಸಾಗುವಳಿ ಮಾಡುತಿದ್ದು ಈ ವರ್ಷ 10 ಎಕರೆ ಭೂಮಿಯಲ್ಲಿ ಕೃಷಿ ಕಾರ್ಯ ಮಾಡಿದ್ದಾರೆ.