ಬಂಟ್ವಾಳ: ಹಾಡಹಗಲೇ ನಿರ್ಜನ ಪ್ರದೇಶದಲ್ಲಿ ಬೈಕ್ ಸವಾರನನ್ನು ಅಡ್ಡಗಟ್ಟಿ ನಾಲ್ವರು ಲಕ್ಷಾಂತರ ರೂ. ದರೋಡೆ ನಡೆಸಿದ ಘಟನೆ ಗುರುವಾರ ಬಂಟ್ವಾಳ ತಾಲೂಕಿನ ಮಣಿಹಳ್ಳ-ಕಕ್ಯಪದವು ರಸ್ತೆಯ ಮಣಿನಾಲ್ಕೂರು ಗ್ರಾಮದ ಮುಲ್ಕಾಜೆಮಾಡ ಎಂಬಲ್ಲಿ ಸಂಭವಿಸಿದೆ.
ಸುರತ್ಕಲ್ ನಿವಾಸಿ ಮಯ್ಯದಿ ಎಂಬವರು ವಿವಿಧ ಅಂಗಡಿಗಳಿಗೆ ಹೋಲ್ಸೇಲ್ನಲ್ಲಿ ಹಾಕಿದ್ದ ಸಿಮೆಂಟ್ನ ಹಣವನ್ನು ವಸೂಲಿ ಮಾಡಿಕೊಂಡು ಬೈಕ್ನಲ್ಲಿ ಹಿಂದಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.
ಎರಡು ಬೈಕ್ಗಳಲ್ಲಿ ಬಂದ ನಾಲ್ವರು ಸವಾರನನ್ನು ಅಡ್ಡಗಟ್ಟಿ ತಲವಾರು ತೋರಿಸಿ ಬೆದರಿಸಿ ದರೋಡೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ದರೋಡೆಗೊಳಗಾದ ಬೈಕ್ ಸವಾರನ ಬ್ಯಾಗ್ನಲ್ಲಿ ಸುಮಾರು 8 ಲಕ್ಷ ರೂ.ಗಳಿಗೂ ಅಧಿಕ ಹಣ ಇತ್ತು ಎನ್ನಲಾಗುತ್ತಿದ್ದು, ಆರೋಪಿಗಳು ಹಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮಾಹಿತಿ ತಿಳಿದ ತತ್ ಕ್ಷಣ ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಅನಂತ ಪದ್ಮನಾಭ ಹಾಗೂ ಎಸ್ಐ ಮಂಜುನಾಥ್ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.


