ಬ್ರಹ್ಮಾವರ ಹಲಸು ಮೇಳ : ವಿವಿಧ ಬಗೆಯ ಹಲಸಿನ ಖಾದ್ಯಗಳ ಕೂಟ

ಉಡುಪಿ : ಉಡುಪಿ ಜಿಲ್ಲೆಯ ಬ್ರಹ್ಮಾವರದ ಎಸ್ ಎಮ್ ಎಸ್ ಸಮುದಾಯ ಭವನದಲ್ಲಿ ಬ್ರಹ್ಮಾವರ ಕೃಷಿ ಇಲಾಖೆಯ ವತಿಯಿಂದ ಹಲಸು ಮೇಳವನ್ನು ಜೂನ್ 10 ರಂದು ಆಯೋಜಿಸಲಾಗಿತ್ತು. ಬ್ರಹ್ಮಾವರ ಕೃಷಿ ಇಲಾಖೆಯಿಂದ ಪ್ರತೀ ವರ್ಷದಂತೆ ನಡೆಸಿಕೊಂಡು ಬರುವ ಹಲಸು ಮೇಳವನ್ನು ಈ ಬಾರಿ ಎಸ್ ಎಮ್ ಎಸ್ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದು ಹಲಸು ಹಣ್ಣುಗಳು, ಹಲಸಿನ ಹಪ್ಪಳ, ಹಲಸಿನ ಸಂಡಿಗೆ, ಸೇರಿದಂತೆ ವಿವಿಧ ಬಗೆಯ ಹಲಸಿನ ಖಾದ್ಯಗಳು ಜನರನ್ನ ಕೈ ಬೀಸಿ ಕರೆಯುತ್ತಿತ್ತು. ಕೇವಲ ಹಲಸಿನ ಹಣ್ಣುಗಳಲ್ಲದೆ ವಿವಿಧ ಬಗೆಯ ಹೂವಿನ ಗಿಡ, ಹಣ್ಣು, ಹಣ್ಣಿನ ಹಪ್ಪಳ-ಸಂಡಿಗೆ, ಜೇನುತುಪ್ಪ, ಆರೋಗ್ಯಕ್ಕೆ ಸಂಬಂಧಪಟ್ಟ ಔಷಧಿಗಳು ಸಹ ಮಾರಟಕ್ಕಿದ್ದವು. ಈ ಸಂದರ್ಭದಲ್ಲಿ ಮೇಳದ ಆಯೋಜಕರಾದ ಹಾಗೂ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಧನಂಜಯ ಅವರು ಹಲಸು ಮೇಳದ ಕುರಿತು ಮಾತನಾಡಿ, ಈ ಹಲಸಿನ ಮೇಳ ಪ್ರಾರಂಭವಾದದ್ದು ಗ್ರಾಹಕರು ಮತ್ತು ಉತ್ಪಾದಕರ ಬೇಡಿಕೆಯಿಂದಾಗಿ. ಇಲ್ಲಿ ಗ್ರಾಹಕ ಮತ್ತು ರೈತನ ಮಧ್ಯೆ ಮಧ್ಯವರ್ತಿಗಳಿಲ್ಲ. ಆದ್ದರಿಂದ 2009 ರಿಂದ ಪ್ರತೀ ವರ್ಷ ನಡೆಯುತ್ತಿರುವ ಈ ಮೇಳದಲ್ಲಿ ನಾನಾ ಕಡೆಗಳಿಂದ ಬಂದಂತಹ ಹಲಸಿನ ಹಣ್ಣುಗಳಿಗೆ ಇಲ್ಲಿ ಬಹಳ ಬೇಡಿಕೆಯಿದ್ದು ಇಲ್ಲಿನ ಜನರು ಇದರ ಉಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆಂದು ಹಲಸಿನ ಮೇಳದಲ್ಲಿ ಲಭ್ಯವಿರುವ ಉತ್ಪನ್ನಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರು. ಈ ಹಲಸು ಮೇಳದಲ್ಲಿ ಹಲವಾರು ಜನರು ಪಾಲ್ಗೊಂಡು ಪ್ರಯೋಜನವನ್ನು ಪಡೆದುಕೊಂಡರು ಹಾಗೂ ತಮ್ಮ ಅಭಿಪ್ರಾಯವನ್ನು ತಿಳಿಸಿದರು.

Related Posts

Leave a Reply

Your email address will not be published.