ಸ್ಕಾಟ್ಲೆಂಡ್‌ನ ಗ್ಲಾಸ್ಗೊದಲ್ಲಿ ನಡೆದ 2026ರ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆ ಬಿದ್ದಿದೆ. ಈ ಸಮಾರಂಭದಲ್ಲಿ 2030ರಲ್ಲಿ ಆತಿಥ್ಯ ವಹಿಸಲಿರುವ ಭಾರತದ ಅಹಮದಾಬಾದ್ ನಗರಕ್ಕೆ ಕಾಮನ್‌ವೆಲ್ತ್ ಕ್ರೀಡಾಕೂಟದ ಧ್ವಜ ಹಾಗೂ ದಂಡ (ಬ್ಯಾಟನ್) ಅಧಿಕೃತವಾಗಿ ಹಸ್ತಾಂತರಗೊಂಡಿದೆ.

ಭಾರತದ ಪ್ರಾಚೀನ ತತ್ವಶಾಸ್ತ್ರ, ವೈವಿಧ್ಯಮಯ ಕಲೆ ಮತ್ತು ಸಾಂಸ್ಕೃತಿಕ ವೈಭವವನ್ನು ಪರಿಚಯಿಸುವ ಮೂಲಕ, 2030ರ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಭಾರತವು ಜಗತ್ತಿಗೆ ಭಾವಪೂರ್ಣ ಆಹ್ವಾನವನ್ನು ನೀಡಿತು.

ಭಾರತೀಯ ಸಂಪ್ರದಾಯ, ಸಂಸ್ಕೃತಿಯನ್ನು ಬಿಂಬಿಸುವ ನೃತ್ಯ ರೂಪಕ ಮತ್ತು ಸಂಗೀತ ಕಾರ್ಯಕ್ರಮಗಳು ಪ್ರೇಕ್ಷಕರ ಮನಸೊರೆಗೊಂಡವು. ಭಾರತವು ‘ವಸುಧೈವ ಕುಟುಂಬಕಂ’ ಎಂಬ ಸಂದೇಶವನ್ನು ಸಾರಿತು. ಇದೇ ವೇಳೆ ಅಹಮದಾಬಾದ್ ನಗರದ ಪರಂಪರೆ ಮತ್ತು ಕ್ರೀಡಾ ಸಂಸ್ಕೃತಿಯನ್ನು ಜಾಗತಿಕ ವೇದಿಕೆಯಲ್ಲಿ ಬಿಂಬಿಸಲಾಯಿತು.
ಮಹಿಳೆಯರ 57 ಕೆ.ಜಿ ವಿಭಾಗದ ಬಾಕ್ಸಿಂಗ್‌ನಲ್ಲಿ ಚಿನ್ನದ ಪದಕ ಗೆದ್ದ ಜೈಸ್ಮಿನ್ ಲಂಬೋರಿಯಾ ಸಮಾರೋಪ ಸಮಾರಂಭದಲ್ಲಿ ಭಾರತದ ತ್ರಿವರ್ಣ ಧ್ವಜಧಾರಿಯಾಗಿದ್ದರು.


