ಕಾಸರಗೋಡು : ಅಡ್ಕ ಶ್ರೀ ಭಗವತಿ ಕ್ಷೇತ್ರದ ಮಾಜಿ ಅಧ್ಯಕ್ಷರು, ಧಾರ್ಮಿಕ ಚಟುವಟಿಕೆಗಳ ಮುಂಚೂಣಿ ವ್ಯಕ್ತಿ ಹಾಗೂ ಅಪಾರ ಜನಮೆಚ್ಚುಗೆ ಪಡೆದ ಸಮಾಜ ಸೇವಕರಾದ ಶ್ರೀ ಎಂ. ಗೋಪಾಲ ಬಂದ್ಯೋಡ್ ಅವರು ಇಂದು ದೈವಾದೀನರಾಗಿದ್ದಾರೆ. ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ನೇಹಿತರು ಹಾಗೂ ಸಾರ್ವಜನಿಕ ವಲಯದಲ್ಲಿ ಆಳವಾದ ದುಃಖದ ವಾತಾವರಣ ನಿರ್ಮಾಣವಾಗಿದೆ.
ಸರಳ ವ್ಯಕ್ತಿತ್ವ, ಮೃದು ಸ್ವಭಾವ ಮತ್ತು ಸಹಾಯ ನೀಡುವ ಗುಣದಿಂದ ಎಲ್ಲರಿಗೂ ಆತ್ಮೀಯರಾಗಿದ್ದ ಗೋಪಾಲ ಬಂದ್ಯೋಡ್ ಅವರು, ಬದುಕಿನ ತುಂಬಾ ಸಮಾಜ ಸೇವೆಯನ್ನೇ ತಮ್ಮ ಧರ್ಮವನ್ನಾಗಿ ಮಾಡಿಕೊಂಡಿದ್ದರು. ಅಡ್ಕ ಶ್ರೀ ಭಗವತಿ ಕ್ಷೇತ್ರದ ಬೆಳವಣಿಗೆಗೆ ಅವರು ನೀಡಿದ ಕೊಡುಗೆ ಅಪಾರವಾಗಿದ್ದು, ಅನೇಕ ಬ್ರಹ್ಮಕಲಶೋತ್ಸವ, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ದೇವಾಲಯದ ಅಭಿವೃದ್ಧಿ ಕಾರ್ಯಗಳಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಅವರು ಕೇವಲ ದೇವಸ್ಥಾನದ ಆಡಳಿತಗಾರರಾಗಿರದೆ , ಸಮಾಜದ ನೋವಿಗೆ ಸ್ಪಂದಿಸುವ ಹೃದಯವಂತರಾಗಿದ್ದರು. ಸಂಕಷ್ಟದಲ್ಲಿದ್ದ ಅನೇಕ ಬಡ ಕುಟುಂಬಗಳಿಗೆ, ಅಶಕ್ತರಿಗೆ ಹಾಗೂ ಸಹಾಯಕ್ಕಾಗಿ ಎದುರು ನೋಡುತ್ತಿದ್ದವರಿಗೆ ಮೌನವಾಗಿ ನೆರವಾಗುತ್ತಿದ್ದರು. ಯಾರಿಗೂ ತಿಳಿಯದಂತೆ ಅನೇಕ ಜನರ ಬದುಕಿನಲ್ಲಿ ಬೆಳಕಾಗಿದ್ದ ಅವರು, ನಿಜಾರ್ಥದಲ್ಲಿ “ಕೊಟ್ಟು ಬದುಕಿದ ಮಹಾನುಭಾವ” ಎಂದು ಜನರಿಂದ ಗೌರವಿಸಲ್ಪಟ್ಟಿದ್ದರು.
ಯಾವುದೇ ಸಾಮಾಜಿಕ ಕಾರ್ಯಕ್ರಮವಾಗಲಿ, ಧಾರ್ಮಿಕ ಸೇವೆಯಾಗಲಿ ಅಥವಾ ಜನೋಪಯೋಗಿ ಕಾರ್ಯವಾಗಲಿ, ಗೋಪಾಲ ಬಂದ್ಯೋಡ್ ಅವರ ಸಾನ್ನಿಧ್ಯ ಇದ್ದೇ ಇರುತ್ತಿತ್ತು. ಜನರೊಂದಿಗೆ ಬೆರೆತು ಬದುಕಿದ ಅವರು, ಎಲ್ಲ ವರ್ಗದ ಜನರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿದ್ದರು. ಅವರ ಮಾತಿನ ಸೌಮ್ಯತೆ, ನಡೆ-ನುಡಿಗಳ ವಿನಯ ಹಾಗೂ ಸಮಾಜದ ಮೇಲಿನ ಕಾಳಜಿ ಅನೇಕರಿಗೆ ಪ್ರೇರಣೆಯಾಗಿತ್ತು.
ಅವರ ಅಗಲಿಕೆ ಅಡ್ಕ ಭಾಗಕ್ಕೆ ಮಾತ್ರವಲ್ಲ, ಧಾರ್ಮಿಕ ಹಾಗೂ ಸಾಮಾಜಿಕ ವಲಯಕ್ಕೂ ತುಂಬಲಾರದ ನಷ್ಟವಾಗಿದೆ. “ಒಳ್ಳೆಯ ಮನಸ್ಸಿನ ವ್ಯಕ್ತಿಯನ್ನು ಸಮಾಜ ಕಳೆದುಕೊಂಡಿದೆ” ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ.
ಮೃತರ ಅಂತ್ಯ ಸಂಸ್ಕಾರ ಇಂದು ಮಧ್ಯಾಹ್ನ ನಡೆಯಲಿದ್ದು, ಅಪಾರ ಬಂಧು-ಬಳಗ ಹಾಗೂ ಸಾರ್ವಜನಿಕರು ಅಂತಿಮ ದರ್ಶನ ಪಡೆಯಲಿದ್ದಾರೆ.
ಸಮಾಜ ಸೇವೆಯನ್ನೇ ಧರ್ಮವಾಗಿ ಬದುಕಿದ ದಾನಶೂರ ಎಂ. ಗೋಪಾಲ ಬಂದಿಯೋಡು ಇನ್ನಿಲ್ಲ
RELATED ARTICLES
