ಮೈರೀಯ ರುಬ್ರಾ ಹಣ್ಣು ಚೀನಾ, ಜಪಾನ್, ತೈವಾನ್, ಫಿಲಿಪ್ಪೀನ್ಸ್ ವಲಯದ್ದು, ಇಂದು ಏಶಿಯಾದಿಂದ ಅಮೆರಿಕ ಖಂಡಕ್ಕೆ ಉದ್ದ ಜಿಗಿತ ಮಾಡಿದೆ.

ಮೈರಿಯ ರುಬ್ರಾವನ್ನು ಯಮ್ ಬೆರಿ, ಬೇ ಬೆರಿ, ರೆಡ್ ಬೇ ಬೆರಿ, ವ್ಯಾಕ್ಸ್ ಬೆರಿ ಎಂದೆಲ್ಲ ಹೇಳುತ್ತಾರೆ. ಚೀನಾದವರು ಯಂಗ್‌ಮೀ ಎಂಬ ಇದರ ಉತ್ಪನ್ನಗಳನ್ನು ೨೦೦೩ರಲ್ಲಿ ಯಂಗ್ ಬೆರಿ ಎಂದು ಬ್ರಾಂಡ್ ಮಾಡಿದ ಮೇಲೆ ಆ ಹೆಸರೇ ಲೋಕಪ್ರಿಯವಾಗಿದೆ.

ಚೀನಾದ ಜನಪದ ಕತೆಗಳಂತೆ ಇದು 2000 ವರುಷಗಳಿಗೂ ಹಿಂದಿನಿಂದ ಬೆಳೆಯಲಾಗುತ್ತಿದೆ. ಅಧಿಕೃತವಾಗಿ 1790 ರಲ್ಲಿ ಜಾವೊಡೆ ಲೌರೀರೊ ಇದರ ವೈಜ್ಞಾನಿಕ ದಾಖಲೆ ಮಾಡಿದ್ದಾರೆ.

ಗುಲಾಬಿಯಿಂದ ಕಡುಗೆಂಪು ಬಣ್ಣದವರೆಗೆ ಇದರ ಹಣ್ಣು ಇರುತ್ತದೆ. ಸಿಹಿ ಮತ್ತು ಸಿಹಿ ಹುಳಿ ಎಂದು ಹಲವು ಜಾತಿಯವು ಇವೆ. ಸಿಹಿಯದನ್ನು ನೇರ ತಿಂದರೆ, ಹುಳಿ ಯಮ್ ಬೆರಿಯನ್ನು ಒಣಗಿಸಿ ಬಳಸುವರು, ಮಾರುಕಟ್ಟೆ ಮಾಡುವರು. ವಿಟಮಿನ್ ಎ, ಸಿ, ಇ ಇನ್ನೂ ಹಲವು ಸತ್ವಗಳ ಹಣ್ಣು ಇದು.

ಈ ಹಣ್ಣಿನ ಮೇಲೆ ಮಂಗಗಳ ದಾಳಿ ಸಾಮಾನ್ಯ. ಈ ಹಣ್ಣನ್ನು ಕ್ಯಾನಿಂಗ್ ಮಾಡಿ ರಫ್ತು ಮಾಡುವರು, ಜ್ಯೂಸ್, ಜೆಲ್ಲಿ ಅಲ್ಲದೆ ವೈನ್, ಬೀರ್, ಕಾಕ್‌ಟೇಲ್ ಮಾಡುವರು. ಚೀನಾ, ವಿಯೆಟ್ನಾಂನಲ್ಲಿ ಇದರ ಉಪ್ಪಿನಕಾಯಿ ಬಗೆಯದೊಂದು ವಿಶೇಷತೆ ಪಡೆದಿದೆ.
