HomeFresh Newsಜಿಲ್ಲೆಯ ಸರಕಾರಿ ಆಸ್ಪತ್ರೆಗಳನ್ನು ರಾಜ್ಯ ಸರಕಾರವೆ ಬಲಗೊಳಿಸಲು ಆಗ್ರಹ:ಸಿಪಿಐಎಂ ನಿಂದ ಜಿಲ್ಲೆಯಾದ್ಯಂತ ಹೋರಾಟ, ಮೇ 14...

ಜಿಲ್ಲೆಯ ಸರಕಾರಿ ಆಸ್ಪತ್ರೆಗಳನ್ನು ರಾಜ್ಯ ಸರಕಾರವೆ ಬಲಗೊಳಿಸಲು ಆಗ್ರಹ:ಸಿಪಿಐಎಂ ನಿಂದ ಜಿಲ್ಲೆಯಾದ್ಯಂತ ಹೋರಾಟ, ಮೇ 14 ರಂದು ಮಂಗಳೂರಿನಲ್ಲಿ ಬೃಹತ್ ಮೆರವಣಿಗೆ

ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಹಿತ ಎಲ್ಲಾ ಹಂತದ ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಹಸ್ತಾಂತರಿಸಲು, ಪ್ರಥಮ ಹಂತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ಸರಕಾರಿ ಆಸ್ಪತ್ರೆಗಳನ್ನು ಅದಕ್ಕಾಗಿ ಗುರುತಿಸಿ, ಒಪ್ಪಂದದ ಆದೇಶ ಹೊರಡಿಸಿರುವುದನ್ನು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ. ಇದು ಸಾರ್ವಜನಿಕ‌ ಆರೋಗ್ಯ ರಂಗವನ್ನು ಪೂರ್ಣ ಪ್ರಮಾಣದಲ್ಲಿ ಖಾಸಗೀಕರಣಗೊಳಿಸುವ ಸರಕಾರದ ಪ್ರತಿಗಾಮಿ ನಡೆಯಾಗಿದೆ. ರಾಜ್ಯ ಸರಕಾರವು ಖಾಸಗಿ ವೈದ್ಯಕೀಯ ಕಾಲೇಜುಗಳೊಂದಿಗೆ ಮಾಡಿಕೊಂಡಿರುವ ಈ ಒಪ್ಪಂದವನ್ನು ತಕ್ಷಣ ಕೈ ಬಿಡಬೇಕು, ವೈದ್ಯರು, ಔಷಧಿ ಸಹಿತ ಮೂಲಭೂತ ಸೌಲಭ್ಯಗಳನ್ನು ರಾಜ್ಯ ಸರಕಾರದ ವತಿಯಿಂದಲೆ ಒದಗಿಸಿ ಸರಕಾರಿ ಆಸ್ಪತ್ರೆಗಳನ್ನು ಬಲಗೊಳಿಸಬೇಕು ಎಂದು ಸಿಪಿಐಎಂ ಆಗ್ರಹಿಸುತ್ತದೆ. ಒಪ್ಪಂದ ಆದೇಶ ರದ್ದುಗೊಳಿಸುವ ವರೆಗೂ ತೀವ್ರ ಹೋರಾಟವನ್ನು ಸಂಘಟಿಸಲಿದೆ. ಮೇ 14 ರಂದು ಬೆಳಿಗ್ಗೆ 10.30 ಕ್ಕೆ ಇದರ ಭಾಗವಾಗಿ ಅಂಬೆಡ್ಕರ್ ವೃತ್ತದಿಂದ ಕ್ಲಾಕ್ ಟವರ್ ವರಗೆ ಬೃಹತ್ ಪ್ರತಿಭಟ‌ನಾ ಮೆರವಣಿಗೆಯ ಮೂಲಕ ಹೋರಾಟಕ್ಕೆ ಚಾಲನೆ ನೀಡಲಾಗುವುದು ಎಂದು ಸಿಪಿಐಎಂ ದ.ಕ. ಜಿಲ್ಲಾ ಸಮಿತಿ ತಿಳಿಸಿದೆ.

ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಒಪ್ಪಿಸುವ ಈ ಆದೇಶ ಭವಿಷ್ಯದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಬಿಕ್ಕಟ್ಟಿಗೆ ಕಾರಣವಾಗಲಿದೆ. ಆರೋಗ್ಯ ಕ್ಷೇತ್ರ ಮುಂಬರುವ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಖಾಸಗೀರಣಗೊಳ್ಳುತ್ತದೆ. ವ್ಯಾಪಾರೀಕರಣ ತೀವ್ರಗೊಳ್ಳುತ್ತದೆ. ಇದರಿಂದಾಗಿ ಜನಸಾಮಾನ್ಯರು, ಕಡಿಮೆ ಆದಾಯದವರು, ಕೆಳಮದ್ಯಮ ವರ್ಗಗಳು ಆರೋಗ್ಯ ಸೇವೆಯಿಂದ ಪೂರ್ಣಪ್ರಮಾಣದಲ್ಲಿ ವಂಚಿತರಾಗಲಿದ್ದಾರೆ. ಖಾಸಗಿಯವರ ಏಕಸ್ಬಾಮ್ಯಕ್ಕೆ ಇದು ಕಾರಣ ಆಗಲಿದೆ. ರಾಜ್ಯ ಸರಕಾರವು ವೈದ್ಯಕೀಯ ಶಿಕ್ಷಣ, ಆಸ್ಪತ್ರೆಗಳ ಕಾರ್ಪೊರೇಟ್ ಲಾಭಿಗಳ ಹಿತಾಸಕ್ತಿಗೆ ಮಣಿದಿರುವುದು ಎದ್ದು ಕಾಣುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಂತು ಖಾಸಗಿ ವೈದ್ಯಕೀಯ ಸಂಸ್ಥೆಗಳು, ಮೆಡಿಕಲ್ ಕಾಲೇಜುಗಳು ಆರೋಗ್ಯ ರಂಗದಲ್ಲಿ‌ ಪೂರ್ತಿ ಹಿಡಿತ ಸಾದಿಸಿವೆ. ಖಾಸಗಿ ಆಸ್ಪತ್ರೆಗಳು, ಮೆಡಿಕಲ್ ಕಾಲೇಜುಗಳ ವ್ಯಾಪಾರಿ‌ ನೀತಿಯಿಂದ ಜನತೆ ಪರಿತಪಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸರಕಾರಿ ಆಸ್ಪತ್ರೆಗಳಿಗೆ ಕನಿಷ್ಟ ಔಷಧಿ, ವೈದ್ಯರನ್ನು ಒದಗಿಸದೆ ಪಾಲು ಬಿಡಲಾಗಿದೆ. ಇದು ಜಿಲ್ಲೆಯ ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಸರಕಾರಿ ಆಸ್ಪತ್ರೆಗಳನ್ನು ಹಸ್ತಾಂತರಿಸಲು ನೆಲ ಹದಗೊಳಿಸುವ ಯತ್ನ ಅಲ್ಲದೆ ಮತ್ತೇನಲ್ಲ. ಅದರಂತೆ ಈಗ ಜಿಲ್ಲೆಯ ಮೂಡುಬಿದಿರೆ, ವಿಟ್ಲ ಸಮುದಾಯ ಆಸ್ಪತ್ರೆ, ಬಂಟ್ವಾಳ, ಬೆಳ್ತಂಗಡಿ ತಾಲೂಕು ಆಸ್ಪತ್ರೆಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಹಸ್ತಾಂತರಿಸುವ ಒಪ್ಪಂದ ಅಂತಿಮಗೊಂಡಿದೆ. ಖಾಸಗಿ ಗುಣಮಟ್ಟದ ಉತ್ತಮ ಸೇವೆ ಒದಗಿಸುವ ನೆಪಗಳನ್ನು ಮುಂದಿಡಲಾಗುತ್ತಿದೆ.
ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ತಾಲೂಕು ಆಸ್ಪತ್ರೆ ಒದಗಿಸುವುದು, ಜಯದೇವ ಹೃದಯದ ಆಸ್ಪತ್ರೆ, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ಘಟಕಗಳನ್ನು ತೆರೆಯುವುದು ಸಹಿತ ಸರಕಾರಿ ಆಸ್ಪತ್ರೆಗಳನ್ನು ಬಲಗೊಳಿಸುವ ಆಗ್ರಹಕ್ಕೆ ಹೆಚ್ಚಿನ ಬೆಂಬಲ ದೊರಕುತ್ತಿರುವ ಸಂದರ್ಭದಲ್ಲಿ ಇರುವ ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಆಸ್ಪತ್ರೆಗಳ ಮಡಿಲಿಗೆ ಹಾಕುವುದು ಅತ್ಯಂತ ಕೆಟ್ಟ ನಿರ್ಧಾರವಾಗಿದೆ.

ರಾಜ್ಯ ಸರಕಾರ ತಕ್ಷಣವೆ ಪಿ.ಪಿ.ಪಿ ಮಾದರಿ ಈ ಖಾಸಗೀಕರಣದ ಒಪ್ಪಂದವನ್ನು ರದ್ದುಗೊಳಿಸಬೇಕು ಎಂಬ ಬೇಡಿಕೆ ಇಟ್ಟುಕೊಂಡು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಪ್ರಬಲ ಜನ ಹೋರಾಟ ಸಂಘಟಿಸಲು ನಿರ್ಧರಿಸಿದೆ. ಅದರ ಭಾಗವಾಗಿ ಮೇ 14 ರಂದು ಬೃಹತ್ ಮೆರವಣಿಗೆ ಹಮ್ಮಿಕೊಂಡಿದೆ. ಈ ಹೋರಾಟ ಒಪ್ಪಂದದ ಆದೇಶವನ್ನು ಸರಕಾರ ಹಿಂಪಡೆಯುವವರಗೆ ಮುಂದುವರಿಯಲಿದೆ. ಮುಂದಿನ ಹಂತದಲ್ಲಿ ಜಿಲ್ಲೆಯ ತಾಲೂಕು, ಹೋಬಳಿ ಮಟ್ಟದಲ್ಲಿ ಪ್ರತಿಭಟನೆಗಳನ್ನು ಸಂಘಟಿಸಲಿದೆ. ಜನಪರ ಸಂಘಟನೆ, ಸಮಾನ ಮನಸ್ಕ ಪಕ್ಷಗಳನ್ನು ಜೊತೆ ಸೇರಿಸಿ ತೀವ್ರತರದ ಹೋರಾಟವನ್ನು ನಡೆಸಲಿದೆ. ಸಾರ್ವಜನಿಕ ಆರೋಗ್ಯ ಸೇವೆಯ ಉಳಿವಿಗಾಗಿ ನಡೆಯುತ್ತಿರುವ ಹೋರಾಟವನ್ನು ಬೆಂಬಲಿಸಬೇಕಾಗಿ ಬೇಕಾಗಿ ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಜನತೆಯಲ್ಲಿ ಮನವಿ ಮಾಡುತ್ತದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments