ಯುವಜನರಿಗೆ ಉದ್ಯೋಗದ ಭರವಸೆ ನೀಡದ ನಿರಾಶದಾಯಕ ಬಜೆಟ್: ಡಿವೈಎಫ್ಐ ಖಂಡನೆ

ಮುಖ್ಯಮಂತ್ರಿ ಮಾನ್ಯ ಬಸವರಾಜ ಬೊಮ್ಮಾಯಿಯವರು ತಮ್ಮ ಅಧಿಕಾರವಧಿಯಲ್ಲಿ ಎರಡನೇ ಬಾರಿಗೆ ಇಂದು ಸದನದಲ್ಲಿ ಮಂಡಿಸಿದ ಆಯವ್ಯಯವು ರಾಜ್ಯದ ಯುವಜನರ ಬದುಕಿನ ಕುರಿತು ಯಾವುದೆ ಸ್ಪಷ್ಟ ಕಣ್ಣೋಟ ಹೊಂದಿಲ್ಲ. ಉದ್ಯೋಗಕ್ಕಾಗಿ ಹಂಬಲಿಸುತ್ತಿರುವ ನಿರುದ್ಯೋಗಿ ಯುವಕರಿಗೆ ಈ ಬಜೆಟ್ ನಿರಾಸೆ ಮೂಡಿಸಿದೆ. ಯುವಜನರ ಬದುಕಿಗೆ ಭದ್ರತೆ ನೀಡದ ಈ ಬಜೆಟ್ ಅನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಕರ್ನಾಟಕ ರಾಜ್ಯ ಸಮಿತಿ ಖಂಡಿಸುತ್ತದೆ.

ಮುಖ್ಯಮಂತ್ರಿಗಳು ತಮ್ಮ ಬಜೆಟ್ ನಲ್ಲಿ ಭವ್ಯ ಕರ್ನಾಟಕ, ಸ್ವಾವಲಂಬಿ, ಸ್ವಾಭಿಮಾನಿ ಸಮಾಜ ನಿರ್ಮಾಣದ ಮೂಲಕ ಅಭಿವೃದ್ಧಿಯ ಅಮೃತ ಎಲ್ಲರೂ ಸವಿಯುವಂತಾಗಬೇಕು ಎಂದು ಹೇಳಿದ್ದಾರೆ. ಆದರೆ ದುಡಿಯುವ ಕೈಗಳಿಗೆ ಕೆಲಸದ ಅವಕಾಶ ಒದಗಿಸದೇ ಸ್ವಾವಲಂಬಿ, ಸ್ವಾಭಿಮಾನಿ ಸಮಾಜ ನಿರ್ಮಾಣ ಹೇಗೆ ಸಾಧ್ಯ? ಈ ಬಜೆಟ್ ಕೆಲಸ ಸಿಗದೇ ಹತಾಶಗೊಂಡಿರುವ ಯುವಜನರನ್ನು ಅಣಕಿಸುವಂತಿದೆ.

ಇದೇ ಮುಖ್ಯಮಂತ್ರಿಗಳು ಕಳೆದ ಸಲ ಮಂಡಿಸಿದ ಬಜೆಟ್ ಅನ್ನು ಸಮರ್ಪಕವಾಗಿ ಜಾರಿಗೊಳಿಸಿದ್ದಾರೆಯೆ ಎಂಬುದನ್ನು ನೋಡಿದರೆ ನಿರಾಸೆಯಾಗುತ್ತದೆ. ರಾಜಕೀಯ ಕಣ್ಸೆಳೆಯುವ ಇಂತಹ ಬಜೆಟ್ ಗಳಿಂದ ಜನರಿಗಂತೂ ಯಾವುದೇ ಪ್ರಯೋಜನವಿಲ್ಲ.

ನಿರುದ್ಯೋಗಿ ಯುವತಿ/ಯುವಕರಿಗೆ ಕೌಶಲ್ಯ ತರಭೇತಿ ಕುರಿತು ಪ್ರಸ್ತಾಪವಿದೆ. ಈಗಾಗಲೇ ಲಕ್ಷಾಂತರ ಸಂಖ್ಯೆಯಲ್ಲಿ ಕೌಶಲ್ಯ ತರಭೇತಿ ಪಡೆದಿರುವವರಿಗೆ ಉದ್ಯೋಗದ ಭರವಸೆ ಮೂಡಿಸುವಲ್ಲಿ ವಿಫಲವಾಗಿದೆ.

ಬಡಜನರಿಗೆ ಅಗತ್ಯ ಮೂಲ ಸೌಕರ್ಯಗಳಾದ ಶಿಕ್ಷಣ, ಉದ್ಯೋಗ, ಆರೋಗ್ಯ, ವಸತಿ ಯಂತಹ ಅಗತ್ಯತೆಗಳನ್ನು ಇಂದಿಗೂ ಪೂರೈಸಲಾಗದ ಜನ ವಿರೋಧಿ ಸರಕಾರದ ಈ ಬಜೆಟ್, ಮಠಗಳಿಗೆ ಅನುದಾನ ನೀಡುತ್ತಿರುವುದು ಖಂಡನೀಯ.

ರಾಜ್ಯದ ಯುವಜನತೆ ಸರಕಾರದ ಈ ಯುವಜನ ಹಾಗೂ ಜನಸಾಮನ್ಯರ ವಿರೋಧಿ ಬಜೆಟ್ ನ್ನು ತಿರಸ್ಕರಿಸಿ ಉದ್ಯೋಗ ಭದ್ರತೆ ಖಾತ್ರಿಪಡಿಸುವ ಕೆಲಸಕ್ಕೆ ಸರಕಾರ ಮುಂದಾಗುವಂತೆ ಒತ್ತಾಯಿಸಿ ಪ್ರತಿಭಟಿಸಲು ಮುಂದಾಗಬೇಕೆಂದು ಡಿವೈಎಫ್ಐ ರಾಜ್ಯ ಸಮಿತಿಯು ಕರೆ ನೀಡುತ್ತದೆ.

Related Posts

Leave a Reply

Your email address will not be published.