ಮುಂಬೈನಿಂದ ಕುಟುಂಬದ ಜೊತೆಗೆ ಕಾರಿನಲ್ಲಿ ಬರುತ್ತಿದ್ದ ಕೇರಳ ಮೂಲದ ಚಿನ್ನದ ವ್ಯಾಪಾರಿಯನ್ನು ಅಡ್ಡಗಟ್ಟಿ ಲಕ್ಷಾಂತರ ಮೌಲ್ಯದ ಚಿನ್ನ ಮತ್ತು ನಗದು ಹಣವನ್ನು ಅಪಹರಿಸಿದ ಘಟನೆ ಪಣಂಬೂರು ಬಳಿಯ ಬೈಕಂಪಾಡಿ ಜಂಕ್ಷನ್ನಲ್ಲಿ ಇಂದು ನಸುಕಿನ ವೇಳೆಗೆ ನಡೆದಿದೆ.
ನಸುಕಿನ 3 ಗಂಟೆ ವೇಳೆಗೆ ಎರಡು ಇನೋವಾ ಮತ್ತು ಇನ್ನೊಂದು ಸ್ವಿಫ್ಟ್ ಕಾರಿನಲ್ಲಿ ಬಂದಿದ್ದ ಏಳೆಂಟು ಮಂದಿಯಿದ್ದ ತಂಡ ಏಕಾಏಕಿ ಚಿನ್ನದ ವ್ಯಾಪಾರಿಯ ಕಾರನ್ನು ಅಡ್ಡಗಟ್ಟಿ, ಪತ್ನಿ ಹಾಗೂ ಮಗನ ಸಮೇತ ಕಾರಿನೊಂದಿಗೆ ಪರಾರಿಯಾದ ಸಿನಿಮಾ ಶೈಲಿಯ ದರೋಡೆ ನಡೆದಿದೆ. ಕೇರಳದ ಪಯ್ಯನ್ನೂರಿನ ನಿವಾಸಿ ಹಾಗೂ ಚಿನ್ನದ ವ್ಯಾಪಾರಿ ವಿಕಾಸ್ (42) ಅವರು ತನ್ನ ಪತ್ನಿ ಹಾಗೂ ಪುತ್ರನ ಜೊತೆಗೆ ಬಿಳಿ ಬಣ್ಣದ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಮುಂಬೈನಿಂದ ಕೇರಳಕ್ಕೆ ಹಿಂದಿರುಗುತ್ತಿದ್ದರು
ವಿಕಾಸ್ ಅವರನ್ನು ಕಾರಿನಿಂದ ಕೆಳಗಿಳಿಸಿದ ದುಷ್ಕರ್ಮಿಗಳು, ಅವರ ಪತ್ನಿ ಮತ್ತು ಮಗನ ಸಮೇತ ಕಾರನ್ನು ಒಯ್ದಿದ್ದಾರೆ. ನಂತರ ಕುಳೂರು ಬಳಿ ಪತ್ನಿ, ಮಗನನ್ನು ಕೆಳಗಿಳಿಸಿ, ಆರೋಪಿಗಳು ಕಾರಿನೊಂದಿಗೆ ಪರಾರಿಯಾಗಿದ್ದಾರೆ. ವಿಕಾಸ್ ಕೇರಳದ ಪಯ್ಯನ್ನೂರಿನಲ್ಲಿ ಚಿನ್ನದ ವ್ಯಾಪಾರ ನಡೆಸುತ್ತಿದ್ದು, ಮುಂಬೈ ಬಳಿಯ ಸಾಂಗ್ಲಿಯಲ್ಲಿ ಪರಿಚಯಸ್ಥರ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ವಾಪಸಾಗುತ್ತಿದ್ದರು. ಘಟನೆ ಸಂಬಂಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದ್ದು, 180 ಗ್ರಾಮ್ ಚಿನ್ನ ಮತ್ತು ನಗದು ಸಹಿತ ಸುಮಾರು 20 ಲಕ್ಷ ರು. ಮೌಲ್ಯದ ಸೊತ್ತು ಹೊತ್ತೊಯ್ದಿದ್ದಾರೆ ಎಂದು ವಿಕಾಸ್ ದೂರು ನೀಡಿದ್ದಾರೆ.
ಆದರೆ ಕೇರಳದ ಚಿನ್ನದ ವ್ಯಾಪಾರಿಗಳು ಮುಂಬೈನಲ್ಲಿ ಗಟ್ಟಿಗಳ ರೂಪದಲ್ಲಿ ಚಿನ್ನ ಖರೀದಿಸಿ ಒಯ್ಯುವುದು ಸಾಮಾನ್ಯವಾಗಿದ್ದು ದೊಡ್ಡ ಮೊತ್ತದ ಚಿನ್ನ ಕಳವಾಗಿರುವ ಸಾಧ್ಯತೆ ಇದೆ. ಆರೋಪಿಗಳ ಪತ್ತೆಗಾಗಿ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

