HomeFresh Newsಲೀಲಾವತಿ ಬೈಪಾಡಿತ್ತಾಯ ಯಕ್ಷಗಾನದಲ್ಲಿ ಹೊಸಬೆಳಕು ಮೂಡಿಸಿದ ಮೇರು ವ್ಯಕ್ತಿತ್ವ- ಡಾ.ಪ್ರಭಾಕರ ಜೋಶಿ

ಲೀಲಾವತಿ ಬೈಪಾಡಿತ್ತಾಯ ಯಕ್ಷಗಾನದಲ್ಲಿ ಹೊಸಬೆಳಕು ಮೂಡಿಸಿದ ಮೇರು ವ್ಯಕ್ತಿತ್ವ- ಡಾ.ಪ್ರಭಾಕರ ಜೋಶಿ

ಮಂಗಳೂರು,ಅ.12; ಭಾಗವತರಾದ ಲೀಲಾವತಿ ಬೈಪಾಡಿತ್ತಾಯ ಅವರು ಯಕ್ಷಗಾನದಲ್ಲಿ ಹೊಸಬೆಳಕು ಮೂಡಿಸಿದ ಮೇರು ವ್ಯಕ್ತಿತ್ವ ವನ್ನು ಹೊಂದಿದ್ದರು ಎಂದು ಯಕ್ಷಗಾನ ವಿದ್ವಾಂಸ ಡಾ.ಪ್ರಭಾಕರ ಜೋಶಿ ಅವರು ಹೇಳಿದರು.


ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಶ್ರೀ ಮಹಾಗಣಪತಿ ಮಹಿಳಾ ಯಕ್ಷಗಾನ ಸಂಘದ ಸಹಯೋಗದೊಂದಿಗೆ ಮಂಗಳೂರಿನ ತುಳು ಭವನದಲ್ಲಿ ರವಿವಾರ ಹಮ್ಮಿಕೊಂಡ ಮಹಿಳಾ ಭಾಗವತೆ ದಿ.ಲೀಲಾವತಿ ಬೈಪಾಡಿತ್ತಾಯ ಸಂಸ್ಮರಣಾ ಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.


ಮಧೂರು ಯಕ್ಷಗಾನ ಪರಿಸರದಲ್ಲಿ ಬೆಳೆದ ಲೀಲಾವತಿ ಬೈಪಾಡಿತ್ತಾಯರು ಹಲವು ಸವಾಲುಗಳ ಮಧ್ಯೆ ಪೂರ್ಣಾವಧಿಯಾಗಿ ವೃತ್ತಿ ಪರ ಯಕ್ಷಗಾನ ಮೇಳದಲ್ಲಿ ಪ್ರಥಮವಾಗಿ ತೊಡಗಿಸಿಕೊಂಡ ಮಹಿಳಾ ಭಾಗವತರಾಗಿದ್ದಾರೆ.


ಲೀಲಾವತಿ ಬೈಪಾಡಿತ್ತಾಯರ ಮೊದಲು ಯಕ್ಷಗಾನ ರಂಗಕ್ಕೆ ಹವ್ಯಾಸಿ ಕಲಾವಿದರಾಗಿ ಮಹಿಳೆಯರ ಪ್ರವೇಶವಾಗಿದೆ ಆದರೆ ಲೀಲಾವತಿ ಬೈಪಾಡಿತ್ತಾಯ ಅವರು ವೃತ್ತಿಪರ ಯಕ್ಷಗಾನ ರಂಗದಲ್ಲಿ ಅಚ್ಚಳಿಯದ ನೆನಪು ಉಳಿಯುವಂತೆ ಸಾಧನೆ ಮಾಡಿದ್ದಾರೆ ಎಂದರು.
ಲೀಲಾವತಿ ಅವರು ವ್ಯವಸಾಯಿ ಪೂರ್ಣಾ ಕಲಾವಿದೆಯಾಗಿ 25 ವರ್ಷ ತಿರುಗಾಟ ನಡೆಸಿರುವುದು ಅಸಾಧಾರಣ ದಾಖಲೆ.ಅವರು ವೃತ್ತಿಪರ ಮಹಿಳಾ ಭಾಗವತರಾಗಿ ಮೇಳದ ತಿರುಗಾಟ ನಡೆಸಿದಾಗ ಅವರ ಬಗ್ಗೆ ಸಹಾನುಭೂತಿ, ನಿರೀಕ್ಷೆ ಇತ್ತು. ಯಕ್ಷಗಾನ ಭಾಗವತರಾಗಿ ಯಾವುದೇ ಕಪ್ಪುಚುಕ್ಕೆ ಇಲ್ಲದ ವ್ಯಕ್ತಿತ್ವ ಅವರದ್ದು ಎಂದು ಡಾ.ಎಂ. ಪ್ರಭಾಕರ ಜೋಶಿ ಬಣ್ಣಿಸಿದರು.


ಲೀಲಾವತಿ ಅವರು ಸೇರಿದಂತೆ ಯಕ್ಷಗಾನ ಕಲಾವಿದರ ಮಾಹಿತಿಯನ್ನು ದಾಖಲೀಕರಿಸುವ ಕೆಲಸ ತುಳು ಅಕಾಡೆಮಿಯಿಂದ ಆಗಬೇಕಾಗಿದೆ ಎಂದು ಪ್ರಭಾಕರ ಜೋಷಿ ಹೇಳಿದರು.


ಲೀಲಾವತಿ ಅವರ ಶಿಷ್ಯ ಭಾಗವತ ಹಾಗೂ ಸಂಗೀತ ಕಲಾವಿದ ನಾದ ಮಣಿನಾ ಲ್ಕೂರು ಮಾತನಾಡುತ್ತಾ, ಲೀಲಾವತಿ ಬೈಪಡಿತ್ತಾಯರು ನನ್ನನ್ನು ಸೇರಿದಂತೆ ಸಾಕಷ್ಟು ಕಲಾವಿದರ ಬೆಳವಣಿಗೆಗೆ ಕಾರಣರಾಗಿದ್ದಾರೆ. ಅವರಿಂದಾಗಿ ನಾನು ಭಾಗವತಿಕೆಯ ಅನೇಕ ವಿಷಯಗಳ ಬಗ್ಗೆ ಸ್ಪಷ್ಟತೆಯನ್ನು ಪಡೆದುಕೊಂಡೆ ಎಂದರು.


ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಲೀಲಾವತಿ ಬೈಪಾಡಿತ್ತಾಯ ಅವರ ಪತಿ ಹರಿನಾರಾಯಣ ಬೈಪಾಡಿತ್ತಾಯ, ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಎಸ್. ‌ಸುರೇಂದ್ರರಾವ್, ಮಾಜಿ ಮೇಯರ್ ಶಶಿಧರ ಹೆಗ್ಡೆ, ಕಲಾವಿದ ನಾದ ಮಣಿನಾಲ್ಕೂರು,ಅವಿನಾಶ್ ಬೈಪಾಡಿತ್ತಾಯ, ಶ್ರೀ ಮಹಾ ಗಣಪತಿ ಮಹಿಳಾ ಯಕ್ಷಗಾನ ಸಂಘದ ನಿರ್ದೇಶಕಿ ಪೂರ್ಣಿಮಾ ಯತೀಶ್ ರೈ ಉಪಸ್ಥಿತರಿದ್ದರು.


ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಸಂತೋಷ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments