ಉಚ್ಚಿಲ, ಆ. 2 ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಕಾಪು ತಾಲೂಕು ಘಟಕದ ವತಿಯಿಂದ ಕಾಪು ಕಂದಾಯ ತಾಲೂಕು ವ್ಯಾಪ್ತಿಯ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳ 2025–26ನೇ ಸಾಲಿನ ರಾಜ್ಯಮಟ್ಟದ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಪೂರ್ಣ ಅಂಕ ಗಳಿಸಿದ ಹಾಗೂ ರಾಜ್ಯಮಟ್ಟದಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭವು ಶನಿವಾರ ಉಚ್ಚಿಲ ಮಹಾಲಕ್ಷ್ಮೀ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರು, ನಾಡು-ನುಡಿ-ಸಂಸ್ಕೃತಿಯ ಉಳಿವಿನಲ್ಲಿ ಉಡುಪಿ ಜಿಲ್ಲೆಯ ಕೊಡುಗೆ ಅಪಾರವಾಗಿದೆ. ಧಾರ್ಮಿಕ, ಪ್ರವಾಸೋದ್ಯಮ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಜಿಲ್ಲೆಯ ಸಾಧನೆಗಳು ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಿಗೆ ಪ್ರೇರಣೆಯಾಗಿವೆ. ಕಾಪು ತಾಲೂಕು ಘಟಕವು ತನ್ನ ವೈಶಿಷ್ಟ್ಯಪೂರ್ಣ ಸಾಹಿತ್ಯ ಕಾರ್ಯಕ್ರಮಗಳ ಮೂಲಕ ವಿಶೇಷ ಛಾಪು ಮೂಡಿಸಿದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ದಕ್ಷಿಣ ಕನ್ನಡ ಮೊಗವೀರ ಹಿತಸಾಧನಾ ವೇದಿಕೆ ಉಚ್ಚಿಲ ಅಧ್ಯಕ್ಷ ಸತೀಶ್ ಆರ್. ಸಾಲಿಯಾನ್ ಅವರು, ಪ್ರತಿಯೊಬ್ಬರಲ್ಲೂ ಕನ್ನಡ ಭಾಷಾಭಿಮಾನ ಬೆಳೆಸುವುದು ಅಗತ್ಯವಾಗಿದ್ದು, ಕನ್ನಡ ಭಾಷೆಯ ಉಳಿವು-ಬೆಳವಣಿಗೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ, ಶಾಲು, ಪುಸ್ತಕ ಹಾಗೂ ಸ್ಮರಣಿಕೆ ನೀಡಿ, ಅವರ ಕನ್ನಡ ಭಾಷಾ ಶಿಕ್ಷಕರೊಂದಿಗೆ ಗೌರವಿಸಲಾಯಿತು. ರಾಜ್ಯಮಟ್ಟದಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳನ್ನೂ ವಿಶೇಷವಾಗಿ ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಶಾಲಾ ಸಂಚಾಲಕ ಎಚ್. ಗಂಗಾಧರ ಕರ್ಕೇರ, ಪ್ರಧಾನ ಕಾರ್ಯದರ್ಶಿ ಸುಧಾಕರ ಕರ್ಕೇರ (ಹೆಜಮಾಡಿ), ಮುಖ್ಯ ಶಿಕ್ಷಕಿ ನವ್ಯಾ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಜಿಲ್ಲಾ ಕೋಶಾಧ್ಯಕ್ಷ ಮನೋಹರ ಪಿ. ಉಪಸ್ಥಿತರಿದ್ದು ಶುಭ ಹಾರೈಸಿದರು.
ಕಾಪು ತಾಲೂಕು ಘಟಕದ ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಿತಿ ಪ್ರತಿನಿಧಿ ನರಸಿಂಹಮೂರ್ತಿ, ತಾಲೂಕು ಕೋಶಾಧ್ಯಕ್ಷ ವಿದ್ಯಾಧರ ಪುರಾಣಿಕ್, ಸಂಘಟನಾ ಕಾರ್ಯದರ್ಶಿ ದೀಪಕ್ ಕೆ. ಬೀರ, ಸದಸ್ಯರಾದ ಪ್ರಜ್ಞಾ ಮಾರ್ಪಳ್ಳಿ, ಮಧುಕರ ಎಸ್. ಕಲ್ಯಾ, ರಾಕೇಶ್ ಕುಂಜೂರು, ಮಾಜಿ ಸಂಚಾಲಕ ಎನ್.ಡಿ. ಬಂಗೇರ, ಭಾಸ್ಕರ ಆಚಾರ್ಯ ಬಿಳಿಯಾರು, ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು.
ಕಸಾಪ ಸಹಕಾರ್ಯದರ್ಶಿ ಕೃಷ್ಣಕುಮಾರ್ ರಾವ್ ಮಟ್ಟು ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ನೀಲಾನಂದ ನಾಯ್ಕ್ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಕೆ.ಆರ್. ಪಾಟ್ಕರ್ ವಂದಿಸಿದರು.
ಈ ಸಮಾರಂಭದಲ್ಲಿ ತಾಲೂಕು ವ್ಯಾಪ್ತಿಯ ಕನ್ನಡ ವಿಷಯದಲ್ಲಿ ಪೂರ್ಣ ಅಂಕ ಪಡೆದ 46 ವಿದ್ಯಾರ್ಥಿಗಳು ಹಾಗೂ ರಾಜ್ಯಮಟ್ಟದ ರ್ಯಾಂಕ್ ವಿಜೇತ 4 ವಿದ್ಯಾರ್ಥಿಗಳನ್ನು ಅಭಿನಂದಿಸಿ ಗೌರವಿಸಲಾಯಿತು.


