HomeFresh Newsಬ್ರಹ್ಮಾವರ ಕೃಷಿ ಮೇಳದಲ್ಲಿ ವಿಜೃಂಭಣೆಯಿಂದ ಆಚರಿಸಲಾದ 'ಕಿಸ್ಸಾನ್ ಮಹಿಳಾ ದಿವಸ'

ಬ್ರಹ್ಮಾವರ ಕೃಷಿ ಮೇಳದಲ್ಲಿ ವಿಜೃಂಭಣೆಯಿಂದ ಆಚರಿಸಲಾದ ‘ಕಿಸ್ಸಾನ್ ಮಹಿಳಾ ದಿವಸ’

ಬ್ರಹ್ಮಾವರ: ವಿಶ್ವಸಂಸ್ಥೆಯು 2026 ನೇ ವರ್ಷವ ನ್ನು ‘ಅಂತರರಾಷ್ಟ್ರೀಯ ಮಹಿಳಾ ರೈತ ವರ್ಷ’ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ, ಕೃಷಿ ಸಂಶೋಧನಾ ಕೇಂದ್ರ ಬ್ರಹ್ಮಾವರ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಅರಣ್ಯ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಬ್ರಹ್ಮಾವರ ಕೃಷಿ ಮೇಳವನ್ನು ‘ಕಿಸ್ಸಾನ್ ಮಹಿಳಾ ದಿವಸ’ವಾಗಿ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕೃಷಿ ಕ್ಷೇತ್ರದಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಿ, ಅವರನ್ನು ಆರ್ಥಿಕವಾಗಿ ಅಭಿವೃದ್ಧಿಪಡಿಸುವ ಹಾಗೂ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮಹಿಳಾ ಸಾಧಕಿಯರ ಮಾರ್ಗದರ್ಶನವನ್ನು ಇತರರಿಗೆ ತಲುಪಿಸುವ ಮಹಾದುದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮೌಲ್ಯವರ್ಧನೆ, ಸಮಗ್ರ ಕೃಷಿ ಸಾಧನೆ, ತಾಂತ್ರಿಕ ಮಾರ್ಗದರ್ಶನ ಹಾಗೂ ಸರ್ಕಾರದ ವಿವಿಧ ಸೌಲಭ್ಯಗಳ ಕುರಿತು ಸಮಗ್ರ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ಒದಗಿಸಲಾಯಿತು
“ತೊಟ್ಟಿಲು ತೂಗುವ ಕೈ, ದೇಶವನ್ನೇ ಆಳಬಲ್ಲದು” ಹಾಗೂ ಮಿಷನ್ ದಾಳಿಯ ನಾಯಕತ್ವ ವಹಿಸುವಷ್ಟು ಪ್ರಬಲೆಯಾದ ಮಹಿಳೆ, “ಅಡುಗೆ ಮನೆಯಿಂದ ಅಂತರಿಕ್ಷದವರೆಗೆ” ನಾನಾ ರಂಗಗಳಲ್ಲಿ ಹಲವು ಪ್ರಥಮಗಳಿಗೆ ಭಾಷ್ಯ ಬರೆಯುತ್ತಾ ಮುಂಚೂಣಿಯಲ್ಲಿದ್ದಾಳೆ. ಇತಿಹಾಸದಲ್ಲಿ ಮಹಿಳೆ ಮೊದಲು ಗುರುತಿಸಿಕೊಂಡದ್ದು ಕೃಷಿ ರಂಗದೊಂದಿಗೆಯೇ. ಕಾಡಿನ ಸಸಿಗಳನ್ನು ಪಳಗಿಸಿ, ಅಧಿಕ ಇಳುವರಿ ನೀಡುವ ನಾಡಿನ ಬೆಳೆಗಳನ್ನಾಗಿ ಮಾಡಿದ ಕೀರ್ತಿ ಸ್ತ್ರೀಯರಿಗೆ ಸಲ್ಲುತ್ತದೆ. ವಿಶಾಲಾರ್ಥದಲ್ಲಿ ಹೇಳುವುದಾದರೆ, ಅವಳೇ ಜಗತ್ತಿನ ಮೊದಲ ತಳಿ ಸಂಶೋಧನಾಕಾರಳೆಂದರೆ ತಪ್ಪಾಗಲಾರದು. ಅವಳ ಪ್ರೀತಿ, ಲಾಲನೆ ಮತ್ತು ಪಾಲನೆಯ ಗುಣಗಳೇ ಹೈನುಗಾರಿಕೆಯಲ್ಲಿ ಸ್ತ್ರೀಯನ್ನು ಮುಖ್ಯಭೂಮಿಕೆಗೆ ತಂದಿದ್ದು, ಅಡುಗೆಮನೆಯೆಂಬ ಮಿನಿಲ್ಯಾಬ್‌ಗಳೇ ಕೃಷಿ ಸಂಸ್ಕರಣೆಯ ಮೊದಲ ಪಾಠಶಾಲೆ. ಸಗಣಿಯಿಂದ ಬೆರಣಿಯಾಗಿಸುವುದು, ಬೆಣ್ಣೆ ಕರಗಿಸಿ ತುಪ್ಪವಾಗಿಸುವುದು ಹಾಗೂ ಮಿಡಿ ಕೊಯ್ದು ಉಪ್ಪಿನಕಾಯಿಯನ್ನಾಗಿ ಪರಿವರ್ತಿಸುವ ಮೂಲಕ ಹೆಂಗಸರು ಮೊದಲಿನಿಂದಲೂ ಸಂಸ್ಕರಣಾ ಪ್ರವೀಣರಾಗಿದ್ದಾರೆ.

ಕೃಷಿ ಉತ್ಪಾದಕತೆ, ಹೈನುಗಾರಿಕೆ, ಕೃಷಿ ಸಂಸ್ಕರಣೆ ಮತ್ತು ಮೌಲ್ಯವರ್ಧನೆಯಲ್ಲಿ ಸ್ತ್ರೀಯರ ಪಾತ್ರ ಹಿರಿದಾಗಿದ್ದರೂ, ಸಾಮಾಜಿಕ-ಸಾಂಸ್ಕೃತಿಕ ಪಾಡುಗಳು, ಅನಕ್ಷರತೆ, ಅಪೌಷ್ಟಿಕತೆ, ಸಾಲ ಹಾಗೂ ತಂತ್ರಜ್ಞಾನದ ಅರಿವಿನ ಕೊರತೆ ಮತ್ತು ಲಿಂಗ ತಾರತಮ್ಯದ ಅಂತರಗಳನ್ನು ಸರಿಪಡಿಸುವ ಗುರಿಯೊಂದಿಗೆ ವಿಶ್ವಸಂಸ್ಥೆಯು 2026ನ್ನು ಅಂತರರಾಷ್ಟ್ರೀಯ ಮಹಿಳಾ ರೈತ ವರ್ಷವನ್ನಾಗಿ ಆಚರಿಸುತ್ತಿದ್ದು, ಇದರ ಭಾಗವಾಗಿ ಬ್ರಹ್ಮಾವರದಲ್ಲಿ ಈ ವಿಶೇಷ ಅಭಿಯಾನ ನಡೆಯಿತು.

ಕಾರ್ಯಕ್ರಮದಲ್ಲಿ ಸುಕನ್ಯಾ ಸಮೃದ್ಧಿ, ಲಖಪತಿ ದೀದಿ, ನಮೋ ಡೋನ್ ದೀದಿ, ಮಿಷನ್ ಇಂದ್ರಧನುಷ್, ಮುದ್ರಾ ಯೋಜನೆ, ಟ್ರೆಡ್, ಉಜ್ವಲ, ರೈತ ಸಮೃದ್ಧಿ, ಪಿಎಂಕೆಎಸ್‌ವೈ (PMKSY), ಬೀಜಗಳ ಪೂರೈಕೆ, ಸಸ್ಯ ಸಂರಕ್ಷಣೆ ಹಾಗೂ ರೈತ ಉತ್ಪಾದಕ ಸಂಸ್ಥೆಗಳ (FPO) ಕುರಿತು ಸಮಗ್ರ ಮಾಹಿತಿ ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ನೂರಾರು ಮಹಿಳಾ ರೈತರು ಪಾಲ್ಗೊಂಡು ಸಾಧನೆಯ ಹಾದಿಯನ್ನು ಹಂಚಿಕೊಂಡರು. ವಿಶೇಷವಾಗಿ ಕೃಷಿಯಲ್ಲಿ A.I. (ಕೃತಕ ಬುದ್ಧಿಮತ್ತೆ) ಯಂತಹ ಆಧುನಿಕ ತಂತ್ರಜ್ಞಾನದೊಂದಿಗೆ ಯುವ ಮಹಿಳೆಯರು ಸಕ್ರಿಯವಾಗಿ ಪಾಲ್ಗೊಂಡು ಮಾಹಿತಿ ಪಡೆದುಕೊಂಡದ್ದು ಕಾರ್ಯಕ್ರಮದ ವಿಶೇಷತೆಯಾಗಿತ್ತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments