ಭಾರತೀಯ ಕಿಸಾನ್ ಸಂಘದ ಉಳ್ಳಾಲ ಘಟಕದಿಂದ ಪ್ರತಿಭಟನೆ

ಉಳ್ಳಾಲ: ರೈತರ ತಾಳ್ಮೆಯನ್ನು ಪರೀಕ್ಷಿಸುವ ಕೆಲಸ ಉಳ್ಳಾಲದಲ್ಲಿ ಆಗುತ್ತಿದೆ, ಬಡ ರೈತರ ಕುಮ್ಕಿ ಜಾಗದ ಹಕ್ಕನ್ನು ಒತ್ತಾಯಪೂರ್ವಕವಾಗಿ ಕಸಿಯಲಾಗುತ್ತಿದೆ. ಈ ನಿಟ್ಟಿನಲ್ಲಿ ಉಳ್ಳಾಲದ ರೈತರು ಒಗ್ಗಟ್ಟಾಗಿ ತಮ್ಮ ಹಕ್ಕುಗಳನ್ನು ಪಡೆಯುವ ಹೋರಾಟಕ್ಕೆ ಮುಂದಾಗಬೇಕಿದೆ ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಶಾಂತಿಪ್ರಸಾದ್ ಹೆಗ್ಡೆ ಹೇಳಿದರು.
ಅವರು ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಉಳ್ಳಾಲ ತಾಲೂಕು ಘಟಕದ ವತಿಯಿಂದ ಸರಕಾರದ ರೈತ ವಿರೋಧಿ ಧೋರಣೆ ವಿರೋಧಿಸಿ ಹಾಗೂ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ರೈತರ ಹಕ್ಕೊತ್ತಾಯ ಪ್ರತಿಭಟನಾ ಜಾಥಾ ದೇರಳಕಟ್ಟೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಿಂದ ನಾಟೆಕಲ್ ಉಳ್ಳಾಲ ತಾಲೂಕು ಕಚೇರಿವರೆಗೆ ನಡೆದು ಬಳಿಕ ತಾಲೂಕು ಕಚೇರಿ ಎದುರುಗಡೆ ನಡೆಸಿದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಜಿಲ್ಲಾಧಿಕಾರಿ ಹೇಳಿದ್ದಾರೆ ಅನ್ನುವ ಸುಳ್ಳು ಹೇಳಿ ಮುನ್ನೂರು ಗ್ರಾ.ಪಂ ಅಧ್ಯಕ್ಷರು, ಅಧಿಕಾರಿಗಳ ಜೊತೆಗೆ ಸೇರಿಕೊಂಡು ರೈತರೊಬ್ಬರ ಕುಮ್ಕಿ ಹಕ್ಕಿನಲ್ಲಿದ್ದ ಮರಗಳನ್ನು ಅಕ್ರಮವಾಗಿ ಕಡಿದು ಮಾರಾಟ ಮಾಡಿದ್ದಾರೆ. ತಪ್ಪಿತಸ್ಥ ಅಧಿಕಾರಿ ಹಾಗೂ ಅಧ್ಯಕ್ಷರ ವಿರುದ್ಧ ಪ್ರಕರಣ ದಾಖಲಾಗುವ ಬದಲು ದನಿ ಎತ್ತಿರುವ ಬಡಪಾಯಿ ಕೂಲಿ ಕಾರ್ಮಿಕನ ಮೇಲೆ ಪ್ರಕರಣ ದಾಖಲಾಗಿದೆ.
ಸಂಘದ ಉಳ್ಳಾಲ ತಾಲೂಕು ಸಂಘಟನಾ ಅಝೀಝ್ ಪರ್ತಿಪ್ಪಾಡಿ, ಜಿ.ಪಂ ಮಾಜಿ ಸದಸ್ಯ ವಿನಯ ಎಲ್ ನಾಯ್ಕ್, ಮುನ್ನೂರು ಗ್ರಾಮ ಸಮಿತಿ ಅಧ್ಯಕ್ಷ ಉಮೇಶ್ ಶೆಟ್ಟಿ, ಕಿನ್ಯಾ ಗ್ರಾಮದ ಸಮೀರಾ ರಾವ್, ತಲಪಾಡಿಯ ನಾರಾಯಣ ಕಿಲ್ಲೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
