ಮಂಗಳೂರು: ಮಲ್ಟಿ ಲೆವೆಲ್ ಕಾರು ಪಾರ್ಕಿಂಗ್ ಯೋಜನೆ: ಆಮೆ ಗತಿಯಲ್ಲಿ ಕಾಮಗಾರಿ: ಮೇಯರ್ ಭೇಟಿ, ಪರಿಶೀಲನೆ

ನಗರದಲ್ಲಿ ಪಾರ್ಕಿಂಗ್ ಸಮಸ್ಯೆಗೆ ಮುಕ್ತಿ ದೊರಕಿಸುವ ನಿಟ್ಟಿನಲ್ಲಿ ಕೈಗೆತ್ತಿಕೊಳ್ಳಲಾಗಿರುವ ಬಹು ನಿರೀಕ್ಷೆಯ ಮಲ್ಟಿ ಲೆವೆಲ್ ಕಾರು ಪಾರ್ಕಿಂಗ್ ಯೋಜನೆ ಆರಂಭಿಕ ಹಂತದಲ್ಲಿಯೇ ನೆನೆಗುದಿಗೆ ಬಿದ್ದಿದ್ದು, ನೂತನ ಮೇಯರ್ ಮನೋಜ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.

ಸ್ಥಳೀಯ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿಕೊಂಡ ಮೇಯರ್ ಅವರು ಯೋಜನೆ ಬಗ್ಗೆ ಸ್ಮಾರ್ಟ್‌ಸಿಟಿ ಅಧಿಕಾರಿ ಹಾಗೂ ಗುತ್ತಿಗೆದಾರರಿಂದ ಮಾಹಿತಿ ಪಡೆದುಕೊಂಡರು. ಸ್ಥಳೀಯರಿಗೆ ಸಮಸ್ಯೆ ಆಗದಂತೆ ಯೋಜನೆಯನ್ನು ತುರ್ತಾಗಿ ನಡೆಸುವ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮೇಯರ್ ಅವರು ಸ್ಮಾರ್ಟ್‌ಸಿಟಿ ಅಧಿಕಾರಿಗಳಿಗೆ ಸೂಚಿಸಿದರು.

ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಮೇಯರ್ ಮನೋಜ್ ಕುಮಾರ್ ‘ಒಂದೂವರೆ ಎಕರೆ ಜಾಗದಲ್ಲಿ ೯೦ ಕೋಟಿ ರೂ. ಹಣವನ್ನು ಗುತ್ತಿಗೆದಾರರೇ ಭರಿಸಿಕೊಂಡು ಮಾಡುವ ಯೋಜನೆ ಇದಾಗಿದ್ದು, ಗುತ್ತಿಗೆದಾರರಿಂದ ಕೆಲಸ ಆರಂಭಿಸ ಲಾಗಿತ್ತು. ಕಾರಣಾಂತರ ಕಾಮಗಾರಿ ಸ್ಥಗಿತಗೊಂಡಿದ್ದು, ಇದೀಗ ಗುತ್ತಿಗೆದಾರರ ಪತ್ನಿ ಅನುರಾಧಾ ಯೋಜನೆ ಮುಂದು ವರಿಸುವ ಭರವಸೆ ನೀಡಿದ್ದಾರೆ. ಡಿಸೆಂಬರ್ ನಲ್ಲಿ ಮತ್ತೆ ಕಾಮಗಾರಿ ಆರಂಭಿಸಲು ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ ಎಂದು ಹೇಳಿದರು.

‘ಕಾಮಗಾರಿ ನಡೆಸುವ ಬದಿಯಲ್ಲಿ ಕಾಲುದಾರಿಯಾಗಿ ಬಳಕೆಯಲ್ಲಿರುವ ಸಣ್ಣ ರಸ್ತೆಯಲ್ಲಿ ನಡೆದಾಡಲು ಕಷ್ಟವಾಗುತ್ತಿದೆ. ನಿತ್ಯ ನೂರಾರು ಮಂದಿ ಈ ರಸ್ತೆಯನ್ನು ಆಶ್ರಯಿಸಿದ್ದಾರೆ. ಅದನ್ನು ಡಾಮರೀಕರಣ ಮಾಡಬೇಕಿದೆ’ ಎಂದು ಸ್ಥಳೀಯರು ಮೇಯರ್ ಅವರಲ್ಲಿ ಮನವಿ ಮಾಡಿದರು.

ತಾತ್ಕಾಲಿಕ ರಸ್ತೆ ಡಾಮರೀಕರಣ ನಡೆಸುವಂತೆ ಮೇಯರ್ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು. ಮನಪಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ವೀಣಾಮಂಗಳ, ಮನಪಾ ಸ್ಥಳೀಯ ಸದಸ್ಯೆ-ಮಾಜಿ ಉಪಮೇಯರ್ ಪೂರ್ಣಿಮಾ, ಸ್ಮಾರ್ಟ್‌ಸಿಟಿ ಅಧಿಕಾರಿ ಅರುಣ್ ಪ್ರಭ, ಗುತ್ತಿಗೆದಾರರಾದ ಅನುರಾಧಾ ಪ್ರಭು ಉಪಸ್ಥಿತರಿದ್ದರು.

Related Posts

Leave a Reply

Your email address will not be published.