ದಿಲ್ಲಿಯಲ್ಲಿ ಚುನಾವಣಾ ಆಯೋಗದ ಕಚೇರಿಯತ್ತ ತೆರಳುತ್ತಿದ್ದ INDIA ಮೈತ್ರಿಕೂಟದ ಸಂಸದರ ಮೆರವಣಿಗೆಯನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬ್ಯಾರಿಕೇಡ್ ಮೇಲೆ ಹತ್ತಿ ತ್ರಿವರ್ಣ ಧ್ವಜವನ್ನು ಬೀಸಿದ್ದಾರೆ.
ಎಸ್‌ಐಆರ್‌ಗೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕರು ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ನಾಗರಿಕರ ಮತದಾನದ ಹಕ್ಕನ್ನು ದುರ್ಬಲಗೊಳಿಸುತ್ತಿದೆ. ಚುನಾವಣಾ ಆಯೋಗವು ಸರಕಾರದ ನಿರ್ದೇಶನದಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಜನರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ದುರ್ಬಲಗೊಳಿಸಿದರೆ ಜನರು ಮೌನವಾಗಿರುವುದಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಎಚ್ಚರಿಸಿದ್ದಾರೆ. ಕಾಂಗ್ರೆಸ್ ಸಂಸದರಾದ ರಾಜೀವ್ ಶುಕ್ಲಾ ಹಾಗೂ ಸಯ್ಯದ್ ನಾಸಿರ್ ಹುಸೇನ್ ಕೂಡ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ.

