ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ನಲ್ಲಿ ಇಂದು ಮಧ್ಯಾಹ್ನ 12:30ರ ಸುಮಾರಿಗೆ ಭಾರೀ ಸ್ಫೋಟ ಸಂಭವಿಸಿದ್ದು, ಪರಿಸರವಾಸಿಗಳು ಬೆಚ್ಚಿ ಬಿದ್ದಿದ್ದಾರೆ.
ಎಂಆರ್ ಪಿಎಲ್ ನ 3 ನೇ ಹಂತದ CST ಪ್ಲಾಂಟ್ ನಲ್ಲಿ ಈ ಸ್ಫೋಟ ಉಂಟಾಗಿದೆ. ಸ್ಫೋಟದ ಬೆನ್ನಲ್ಲೇ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದು, ಆಕಾಶದೆತ್ತರಕ್ಕೆ ಹೊಗೆ ಆವರಿಸಿದೆ.

ಸ್ಫೋಟದ ಶಬ್ದದಿಂದಾಗಿ ಜೋಕಟ್ಟೆ ಪಂಚಾಯತ್ ಕಟ್ಟಡ ಸಹಿತ ಸುತ್ತಮುತ್ತಲಿನ ಹಲವಾರು ಮನೆಗಳು ಕಂಪಸಿವೆ. ಸ್ಫೋಟದ ತೀವ್ರತೆಗೆ ಎಂಆರ್ ಪಿಎಲ್ ಸುತ್ತಮುತ್ತಲಿನ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಹಲವು ಮನೆಗಳ ಬಾಗಿಲು, ಕಿಟಕಿಗಳ ಗಾಜುಗಳಿಗೆ ಹಾನಿ ಸಂಭವಿಸಿದೆ. ಮಂಗಳೂರು ಲೇಡಿ ಹಿಲ್ ತನಕವೂ ಸ್ಫೋಟದ ಶಬ್ದ ಕೇಳಿಸಿದೆ. ಘಟನೆಯಲ್ಲಿ 35 ಅಧಿಕ ಮಂದಿಗೆ ಗಾಯಗಳಾಗಿದ್ದು, ಆರು ಮಂದಿ ಗಂಭೀರ ಸ್ಥಿತಿಯಲ್ಲಿದ್ದು ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಥಳಕ್ಕೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾ ಪಂಚಾಯತ್ ಸಿಇಓ ನರ್ವಡೆ ವಿನಾಯಕ್ ಕಾರ್ಭಾರಿ ಭೇಟಿ ನೀಡಿದ್ದಾರೆ.

