ಬೆಂಗಳೂರಿನಲ್ಲಿ ನಾಪತ್ತೆಯಾದ ಬಾಲಕ : ಮಗನನ್ನು ಹುಡುಕುತ್ತ ಕಡಲತೀರಕ್ಕೆ ಬಂದ ಹೆತ್ತವರು
ಬೆಂಗಳೂರಿನ ಯಲಹಂಕದ ನ್ಯೂ ಟೌನ್ ನ್ಯಾಶನಲ್ ಪಬ್ಲಿಕ್ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಯಾಗಿರುವ ಆದಿತ್ಯ ಟಿ. (15), ಒಂದು ವಾರದ ಹಿಂದೆ ನಾಪತ್ತೆಯಾಗಿದ್ದಾನೆ. ಮೇ 29, 2023ರ ಸೋಮವಾರದಂದು ತನ್ನ ಪೋಷಕರಾದ ತಂದೆ ತಿಮ್ಮ ರಾಯಪ್ಪ ಮತ್ತು ತಾಯಿ ಅನಿತಾರಲ್ಲಿ ಕೂದಲು ಕಟ್ಟಿಂಗ್ ಮಾಡಿಸಿಕೊಂಡು ಬರುತ್ತೇನೆಂದು ಮಧ್ಯಾಹ್ನದ ಹೊತ್ತಿಗೆ ಹೋದವನು ಮರಳಿ ಮನೆಗೆ ಬಂದಿಲ್ಲ. ಈ ಬಗ್ಗೆ ಹೆತ್ತವರು ಬೆಂಗಳೂರಿನ ಆರ್.ಟಿ. ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನಂತರ ಮನೆಯವರು ಕಾಣೆಯಾದ ಬಾಲಕನ ಮೊಬೈಲ್ ಪರೀಕ್ಷಿಸಿದಾಗ, ಆತ ಮಂಗಳೂರು, ಉಡುಪಿ ನಗರದ ಮಾಹಿತಿಯನ್ನು ಹೆಚ್ಚಾಗಿ ಕಲೆಹಾಕಿರುವುದನ್ನು ಅರಿತುಕೊಂಡರು. ಆದ್ದರಿಂದ ಆತ ಉಡುಪಿ, ಮಂಗಳೂರು ಕಡೆ ಹೋಗಿರಬಹುದೆಂಬ ಸಂದೇಹದೊಂದಿಗೆ ಜೂನ್ 4ರ ಭಾನುವಾರದಂದು ಉಡುಪಿ ಜಿಲ್ಲೆಯ ಮಲ್ಪೆಗೆ ಬಂದು ತಲುಪುತ್ತಾರೆ. ತಮ್ಮ ಮಗ ಕಾಣೆಯಾಗಿರುವ ಮಾಹಿತಿಯನ್ನು ಮಲ್ಪೆ ಪೊಲೀಸ್ ಠಾಣೆಗೂ ದೂರು ನೀಡಿದ್ದು, ಪೊಲೀಸರು ಆತನ ಹೆಚ್ಚಿನ ಮಾಹಿತಿಯನ್ನು ಕಲೆಹಾಕಲು ಮಲ್ಪೆಯ ಹೆಸರಾಂತ ಸಮಾಜ ಸೇವಕ, ತನ್ನ ಜೀವವನ್ನೇ ಪಣಕಿಟ್ಟು ಇನ್ನೊಬ್ಬರ ಜೀವ ಉಳಿಸಿದ ಕೀರ್ತಿಯನ್ನು ಪಡೆದಿರುವ ಈಶ್ವರ್ ಮಲ್ಪೆ ಅವರನ್ನು ಸಂಪರ್ಕಿಸುವಂತೆ ತಿಳಿಸಿದ್ದರು. ಅಂತೆಯೇ ಈಶ್ವರ್ ಮಲ್ಪೆಯವರನ್ನು ಸಂಪರ್ಕಿಸಿದ ಹೆತ್ತವರು, ಈಶ್ವರ್ ಮಲ್ಪೆಯವರ ಜೊತೆಗೂಡಿ ನಾಪತ್ತೆಯಾದ ತಮ್ಮ ಮಗನ ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ.