ಎಂಆರ್‌ಪಿಎಲ್‌ನ ಕೋಕರ್ ಹೈಡ್ರೋಟ್ರೀಟರ್ ಯುನಿಟ್ (ಸಿಎಚ್‌ಟಿಯು)ನಲ್ಲಿ ಬುಧವಾರ ಸಂಭವಿಸಿದ ದುರಂತದಲ್ಲಿ ಮೃತಪಟ್ಟ ಮನೀಶ್ ಕರ್ಕಡ (23) ಅವರ ಕುಟುಂಬಕ್ಕೆ ಒಟ್ಟು 1.20 ಕೋಟಿ ರೂ. ಮೊತ್ತದ ಪರಿಹಾರವನ್ನು ನೀಡುವುದಾಗಿ ಎಂಆರ್‌ಪಿಎಲ್ ಪ್ರಕಟನೆ ತಿಳಿಸಿದೆ.
ಮನೀಶ್ ಕರ್ಕಡ ಸಾವಿಗೆ ಸಂತಾಪ ಸೂಚಿಸುವುದಾಗಿ ಹೇಳಿರುವ ಎಂಆರ್‌ಪಿಎಲ್ ಆಡಳಿತ ಮಂಡಳಿ, ಅವರ ಕುಟುಂಬದ ಕಷ್ಟದ ಸಂದರ್ಭದಲ್ಲಿ ಕುಟುಂಬದೊಂದಿಗೆ ಇರುವುದಾಗಿ ಹೇಳಿದೆ.

ಅಮೂಲ್ಯವಾದ ಜೀವದ ನಷ್ಟವನ್ನು ಯಾವುದೇ ಆರ್ಥಿಕ ನೆರವಿನಿಂದ ಭರಿಸಲು ಸಾಧ್ಯವಿಲ್ಲವಾದರೂ, ಮೃತರ ಕುಟುಂಬಕ್ಕೆ ಎಂಆರ್‌ಪಿಎಲ್‌ನಿಂದ 90 ಲಕ್ಷ ರೂ. ಆರ್ಥಿಕ ನೆರವು ಜತೆಗೆ ಗ್ರೂಪ್ ಟರ್ಮ್ ಲೈಫ್ ಇನ್ಶೂರೆನ್ಸ್‌ನಡಿ 10 ಲಕ್ಷ ರೂ. ಹಾಗೂ ವರ್ಕ್‌ಮೆನ್ ಕಾಂಪೆನ್ಸೇಷನ್ ಪಾಲಿಸಿ ಅಡಿಯಲ್ಲಿ ಸುಮಾರು 20 ಲಕ್ಷ ರೂ. ಸೇರಿದಂತೆ ಒಟ್ಟು ಸುಮಾರು 1.20 ಕೋಟಿ ರೂ. ಪರಿಹಾರವನ್ನು ಒದಗಿಸಲಿದೆ.

