HomeFresh Newsನೇಪಾಳ–ಟಿಬೆಟ್ ಪ್ರವಾಹ : ಮೃತರ ಸಂಖ್ಯೆ 392ಕ್ಕೆ ಏರಿಕೆ

ನೇಪಾಳ–ಟಿಬೆಟ್ ಪ್ರವಾಹ : ಮೃತರ ಸಂಖ್ಯೆ 392ಕ್ಕೆ ಏರಿಕೆ

ಕಠ್ಮಂಡು: ನೇಪಾಳ ಮತ್ತು ಟಿಬೆಟ್ ಗಡಿಭಾಗದಲ್ಲಿ ಸಂಭವಿಸಿದ ಹಠಾತ್ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 392ಕ್ಕೆ ಏರಿಕೆಯಾಗಿದೆ. 290 ಭಾರತೀಯರು ಸೇರಿದಂತೆ 1,500ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದು, ರಕ್ಷಣಾ ತಂಡಗಳು ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸುತ್ತಿವೆ.

ಮೃತರ ಪೈಕಿ 389 ಮಂದಿ ನೇಪಾಳದಲ್ಲಿ, ಮೂವರು ನೆರೆಯ ಟಿಬೆಟ್‌ನಲ್ಲಿ ಅಸುನೀಗಿದ್ದಾರೆ ಎಂದು ವರದಿಯಾಗಿದೆ.

ನೇಪಾಳದ ಭೋಟೆ ಕೋಶಿ ಮತ್ತು ತ್ರಿಶೂಲಿ ನದಿಯ ದಡದಲ್ಲಿರುವ ಗ್ರಾಮಗಳು ಹಾಗೂ ಪಟ್ಟಣಗಳ ಮೇಲೆ ಬುಧವಾರ ಸುನಾಮಿಯಂತೆ ಅಪ್ಪಳಿಸಿದ ಕೆಸರುಮಿಶ್ರಿತ ನೀರು ಹಲವಾರು ಕಟ್ಟಡಗಳು, ಮನೆಗಳನ್ನು ನುಂಗಿಹಾಕಿದೆ.

ಪ್ರವಾಹ ಪೀಡಿತ ಪ್ರದೇಶಗಳಿಂದ ಹೆಲಿಕಾಪ್ಟರ್‌ಗಳ ಮೂಲಕ 50 ವಿದೇಶಿಯರು ಸೇರಿದಂತೆ 796 ಜನರನ್ನು ರಕ್ಷಿಸಲಾಗಿದೆ. ಭೂಮಾರ್ಗದ ಮೂಲಕ 796 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ನೇಪಾಳ ಪೊಲೀಸರು ತಿಳಿಸಿದ್ದಾರೆ.

‘ಅವಶೇಷಗಳ ಅಡಿಯಿಂದ ಇನ್ನಷ್ಟು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಚಿತ್ವಾನ್‌ ಜಿಲ್ಲೆಯಲ್ಲಿ ಅತಿಹೆಚ್ಚು, ಅಂದರೆ 132 ಮೃತದೇಹಗಳು ದೊರಕಿವೆ’ ಎಂದು ನೇಪಾಳ ಪೊಲೀಸರು ತಿಳಿಸಿದ್ದಾರೆ.

ನೇಪಾಳದಲ್ಲಿ ಸಂಭವಿಸಿದ ದಿಢೀರ್‌ ಪ್ರವಾಹಕ್ಕೆ ಭೂಕಂಪ ಕಾರಣವಲ್ಲ, ದೊಡ್ಡ ಪ್ರಮಾಣದಲ್ಲಿ ಹಿಮಬಂಡೆಗಳು ಕುಸಿದು ಪ್ರವಾಹ ಉಂಟಾಗಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆ (ಯುಎಸ್‌ಜಿಎಸ್‌) ಹೇಳಿದೆ.

ಪ್ರವಾಹದಿಂದಾಗಿ ಮನೆಗಳು, ವಾಹನಗಳು, ರಸ್ತೆಗಳು ಹಾಗೂ ಸೇತುವೆಗಳನ್ನು ಕೊಚ್ಚಿಕೊಂಡು ಹೋಗಿವೆ ಮತ್ತು ಜಲವಿದ್ಯುತ್ ಯೋಜನೆಗಳಿಗೆ ಹಾನಿ ಉಂಟಾಗಿದೆ.

ಭೋಟೆ ಕೋಶಿ ನದಿಯ ಮೂಲದ ಬಳಿ ಹೊಸದಾಗಿ ಕೃತಕ ಸರೋವರ ರೂಪುಗೊಂಡಿದ್ದು, ನದಿಯ ಕೆಳಭಾಗದ ಪ್ರದೇಶಗಳಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಿದೆ. ಈ ಸರೋವರ ಒಡೆದರೆ ನದಿ ಪಾತ್ರದಲ್ಲಿ ಮತ್ತೊಮ್ಮೆ ಭಾರಿ ಪ್ರವಾಹ ಉಂಟಾಗಬಹುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ನಿರ್ಮಾಣ ಹಂತದಲ್ಲಿರುವ ತ್ರಿಶೂಲಿ-I ಜಲವಿದ್ಯುತ್ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 63 ಕಾರ್ಮಿಕರು ಮತ್ತು ತಮಿಳುನಾಡಿನ 21 ಜನರು ಸೇರಿದಂತೆ ಒಟ್ಟು 84 ಭಾರತೀಯರನ್ನು ರಕ್ಷಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಟಿಬೆಟ್ ಭಾಗದಲ್ಲಿದ್ದ ಸುಮಾರು 200 ಭಾರತೀಯರು ಸ್ಥಳಾಂತರಕ್ಕೆ ನೆರವು ಕೋರಿದ್ದಾರೆ.

ಭಾರತವು ನೇಪಾಳಕ್ಕೆ ನೀಡುತ್ತಿರುವ ಪರಿಹಾರ ನೆರವನ್ನು ಹೆಚ್ಚಿಸಿದೆ. ಬುಧವಾರ 10 ಟನ್ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ಸಾಮಗ್ರಿಗಳನ್ನು ಕಳುಹಿಸಿತ್ತು. ಗುರುವಾರವೂ ಸೇನಾ ವಿಮಾನದ ಮೂಲಕ ಔಷಧಗಳು ಮತ್ತು ಆಹಾರ ಪದಾರ್ಥಗಳು ಸೇರಿದಂತೆ 37.5 ಟನ್ ಮಾನವೀಯ ನೆರವು ರವಾನಿಸಲಾಗಿದೆ.

ಪ್ರವಾಹದ ಭೀಕರತೆಗೆ ಕಟ್ಟಡಗಳು ಕೊಚ್ಚಿಹೋಗಿದ್ದು, ರಸ್ತೆಗಳು, ಸೇತುವೆಗಳು ಸಂಪೂರ್ಣ ನಾಶವಾಗಿವೆ. ರಸುವಾ ಮತ್ತು ನುವಾಕೋಟ್ ಜಿಲ್ಲೆಗಳ ನದಿ ತೀರದ ಗ್ರಾಮಗಳು ಕೆಸರು ಮತ್ತು ಅವಶೇಷಗಳಿಂದ ಮುಚ್ಚಿಹೋಗಿವೆ.

ನಾಪತ್ತೆಯಾದವರಲ್ಲಿ ನೇಪಾಳ ಸೇನೆಯ 44 ಯೋಧರು, 28 ನೇಪಾಳ ಪೋಲಿಸರು ಮತ್ತು 13 ಸಶಸ್ತ್ರ ಪೊಲೀಸ್ ಪಡೆಯ ಸಿಬ್ಬಂದಿ ಸೇರಿದ್ದಾರೆ. ಜಲವಿದ್ಯುತ್ ಯೋಜನೆ ಮತ್ತು ಸುಂಕದ ಕಚೇರಿಗಳಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 160 ಸಿಬ್ಬಂದಿ ಕೂಡ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments