ಉಡುಪಿ: ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಸರಣಿ ಕಳ್ಳತನ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದು, ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಮಾರು ₹23.56 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಇತರೆ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಅರುಣ್ ಎಸ್.ವಿ. ಅಲಿಯಾಸ್ ಅರುಣ್ ಆಚಾರಿ (43) ಮತ್ತು ಕೌಶಿಕ್ (19) ಎಂದು ಗುರುತಿಸಲಾಗಿದೆ.

ಉಡುಪಿ ಪುತ್ತೂರು ಗ್ರಾಮದ ಭಗವತಿ ಲೇಔಟ್ ನಿವಾಸಿ ಸನಂ ಅವರು ಆ.12ರಂದು ನೀಡಿದ ದೂರಿನಂತೆ, ಆ.8ರಂದು ಸಂಬಂಧಿಕರ ಮನೆಗೆ ತೆರಳಿದ್ದ ಅವರು ಆ.11ರಂದು ಮನೆಗೆ ಮರಳಿದಾಗ ಟೆರೇಸ್ ಬಾಗಿಲನ್ನು ಯಾರೋ ಕಳ್ಳರು ಆಯುಧ ಬಳಸಿ ಬಲವಂತವಾಗಿ ತೆರೆದಿರುವುದು ಕಂಡುಬಂದಿದೆ. ಮನೆಯ ಕಪಾಟಿನ ಡ್ರಾವರ್ನಲ್ಲಿದ್ದ 10 ಸಾವಿರ ಎಇಡಿ ದಿರ್ಹಾಮ್ ಹಾಗೂ ₹14 ಸಾವಿರ ನಗದು ಸೇರಿದಂತೆ ಒಟ್ಟು ₹2.14 ಲಕ್ಷ ಮೌಲ್ಯದ ಹಣ ಕಳುವಾಗಿತ್ತು. ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಗಾಗಿ ಉಡುಪಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಪಿಎಸ್ಐ ಪ್ರಕಾಶ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಆ.23ರಂದು ಪೆರಂಪಳ್ಳಿ ಸಂತೋಷ ನಗರದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ವಶಕ್ಕೆ ಪಡೆದು ತನಿಖೆ ನಡೆಸಿದಾಗ, ವಿದೇಶಿ ಕರೆನ್ಸಿ, 1 ಕೆಜಿ 360 ಗ್ರಾಂ ಬೆಳ್ಳಿ ಆಭರಣ, ಚಿನ್ನದ ನಾಣ್ಯಗಳು, 88.400 ಗ್ರಾಂ ಚಿನ್ನಾಭರಣ, ನಗದು, ಎರಡು ಮೊಬೈಲ್, ವಿದೇಶಿ ಕೈಗಡಿಯಾರ, ಆಟೋರಿಕ್ಷಾ ಹಾಗೂ ಕೃತ್ಯಕ್ಕೆ ಬಳಸಿದ ಪಲ್ಸರ್ ಬೈಕ್ ಸೇರಿದಂತೆ ಒಟ್ಟು ₹23,56,230 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಕಳವು ನಡೆಸುತ್ತಿದ್ದು, ಕಳವು ಮಾಡಿದ ಬೈಕ್ ಬಳಸಿ ಕೃತ್ಯ ಎಸಗುತ್ತಿದ್ದರು ಎನ್ನಲಾಗಿದೆ. ಇವರ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಎರಡು ಹಾಗೂ ಮಲ್ಪೆ ಠಾಣಾ ವ್ಯಾಪ್ತಿಯಲ್ಲಿ ಮೂರು ಸೇರಿದಂತೆ ಒಟ್ಟು ಐದು ಪ್ರಕರಣಗಳು ದಾಖಲಾಗಿವೆ.

ಮೊದಲ ಆರೋಪಿ ಅರುಣ್ ಆಚಾರಿ ಈ ಹಿಂದೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪೋಕ್ಸೋ ಪ್ರಕರಣದಲ್ಲಿ 9 ವರ್ಷಗಳ ಜೈಲು ಶಿಕ್ಷೆ ಅನುಭವಿಸಿ, 2025ರ ಜುಲೈನಲ್ಲಿ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯ್ಕ ಹಾಗೂ ಡಿವೈಎಸ್ಪಿ ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ, ಉಡುಪಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದ ತಂಡ ಆರೋಪಿಗಳ ಪತ್ತೆ ಮತ್ತು ತನಿಖೆ ನಡೆಸಿದೆ. ಪಿಎಸ್ಐ ಪ್ರಕಾಶ್ ಹಾಗೂ ಉಡುಪಿ ಮತ್ತು ಮಣಿಪಾಲ ಠಾಣೆಗಳ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


