HomeFresh Newsಹೊಸ ಕಾರ್ಮಿಕ ಸಂಹಿತೆಗಳು ಕಟ್ಟಡ ಕಾರ್ಮಿಕರ ಹಕ್ಕುಗಳಿಗೆ ಮಾರಕ : ಯೋಗೀಶ್ ಜಪ್ಪಿನಮೊಗರು

ಹೊಸ ಕಾರ್ಮಿಕ ಸಂಹಿತೆಗಳು ಕಟ್ಟಡ ಕಾರ್ಮಿಕರ ಹಕ್ಕುಗಳಿಗೆ ಮಾರಕ : ಯೋಗೀಶ್ ಜಪ್ಪಿನಮೊಗರು

ಕೇಂದ್ರ ಸರ್ಕಾರದ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳು ಕಾರ್ಮಿಕರು ದಶಕಗಳ ಹೋರಾಟದ ಮೂಲಕ ಗಳಿಸಿಕೊಂಡಿರುವ ಹಕ್ಕುಗಳು ಮತ್ತು ಸಾಮಾಜಿಕ ಭದ್ರತೆಯನ್ನು ದುರ್ಬಲಗೊಳಿಸಲಿವೆ ಎಂದು ಕಟ್ಟಡ ಕಾರ್ಮಿಕರ ಜಿಲ್ಲಾ ಖಜಾಂಚಿ ಯೋಗೀಶ್ ಜಪ್ಪಿನಮೊಗರು ಹೇಳಿದರು.
ಹೊಸ ಕಾರ್ಮಿಕ ಸಂಹಿತೆಗಳು ಮತ್ತು ಕಟ್ಟಡ ಕಾರ್ಮಿಕರ ಮೇಲಿನ ಪರಿಣಾಮಗಳ ಕುರಿತು ಸಮಾವೇಶದಲ್ಲಿ ಮಾತನಾಡಿದ ಅವರು, ₹50 ಲಕ್ಷಕ್ಕಿಂತ ಕಡಿಮೆ ವೆಚ್ಚದ ಖಾಸಗಿ ನಿರ್ಮಾಣ ಕಾಮಗಾರಿಗಳನ್ನು ಕಾನೂನಿನ ವ್ಯಾಪ್ತಿಯಿಂದ ಹೊರಗಿಡುವುದು, ಕಲ್ಯಾಣ ಮಂಡಳಿಗಳ ಸ್ವಾಯತ್ತತೆ ಕುಗ್ಗಿಸುವುದು, ಅಪಘಾತ ಪರಿಹಾರ, ವಸತಿ ಮತ್ತು ಮಕ್ಕಳ ಶಿಕ್ಷಣ ನೆರವು ದುರ್ಬಲಗೊಳಿಸುವುದು ಕಾರ್ಮಿಕರಿಗೆ ದೊಡ್ಡ ಹಿನ್ನಡೆಯಾಗಲಿದೆ ಎಂದರು. ವಲಸೆ ಕಾರ್ಮಿಕರ ಹಕ್ಕುಗಳು, ಕೆಲಸದ ಸ್ಥಳದ ಸುರಕ್ಷತೆ ಮತ್ತು ಹೆಚ್ಚುವರಿ ಕೆಲಸದ ದ್ವಿಗುಣ ವೇತನದ ಹಕ್ಕುಗಳಿಗೂ ಧಕ್ಕೆಯಾಗಲಿದೆ ಎಂದು ಎಚ್ಚರಿಸಿದರು

ಜಿಲ್ಲೆಯ ಕಾರ್ಮಿಕ ಮುಖಂಡರಾದ ಸದಾಶಿವದಾಸ್ ಅವರು ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕಾರ್ಮಿಕರ ಹಕ್ಕುಗಳನ್ನು ಒಂದೊಂದಾಗಿ ಮೊಟಕುಗೊಳಿಸುವ ನೀತಿಗಳನ್ನು ಕೈಬಿಡಬೇಕು. ಕಾರ್ಮಿಕರ ಹಿತಾಸಕ್ತಿ ಮತ್ತು ಸಾಮಾಜಿಕ ಭದ್ರತೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಕಾರ್ಮಿಕ ಸಂಘಟನೆಗಳು ಒಗ್ಗಟ್ಟಿನ ಹೋರಾಟ ನಡೆಸಬೇಕು ಎಂದು ಆಗ್ರಹಿಸಿದರು.
ನಾಲ್ಕೂ ಕಾರ್ಮಿಕ ಸಂಹಿತೆಗಳನ್ನು ಸಂಪೂರ್ಣವಾಗಿ ಹಿಂಪಡೆಯಬೇಕೆಂದು ಆಗ್ರಹಿಸಿ ಡಿಸೆಂಬರ್ 1, 2 ಮತ್ತು 3ರಂದು ದೆಹಲಿಯಲ್ಲಿ ದೇಶವ್ಯಾಪಿ ಹೋರಾಟ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ನವೆಂಬರ್ 16ರಂದು ದೇಶಾದ್ಯಂತ ಪ್ರತಿಭಟನೆಗಳು ನಡೆಯಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಹಾಗೂ ಕಾರ್ಮಿಕ ಇಲಾಖೆಯ ಕಚೇರಿಗಳ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಈ ಹೋರಾಟದಲ್ಲಿ ಕಟ್ಟಡ ಕಾರ್ಮಿಕರು ಸೇರಿದಂತೆ ಎಲ್ಲಾ ವಿಭಾಗದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕರೆ ನೀಡಲಾಯಿತು.
ಸಭೆಯ ಅಧ್ಯಕ್ಷತೆಯನ್ನು ದಿನೇಶ್ ಇರುವೈಲ್ ವಹಿಸಿದ್ದರು. ಕಾರ್ಯದರ್ಶಿ ವಸಂತಿ ಕುಪ್ಪೆಪದವು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರ್ವಹಿಸಿದರು. ಆನಂದ ಇರುವೈಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments