HomeFresh Newsಪಿಲಿಕುಳ ಲೇಕ್ ಗಾರ್ಡನ್‌ನಲ್ಲಿ ಪಿಲಿಕುಳ ಮತ್ಸ್ಯೋತ್ಸವ ಹಾಗೂ ಮೀನು ಆಹಾರ ಮೇಳ

ಪಿಲಿಕುಳ ಲೇಕ್ ಗಾರ್ಡನ್‌ನಲ್ಲಿ ಪಿಲಿಕುಳ ಮತ್ಸ್ಯೋತ್ಸವ ಹಾಗೂ ಮೀನು ಆಹಾರ ಮೇಳ

ಮಂಗಳೂರಿನ ಪಿಲಿಕುಳ ಲೇಕ್ ಗಾರ್ಡನ್‌ನಲ್ಲಿ ಪಿಲಿಕುಳ ಮತ್ಸ್ಯೋತ್ಸವ ಹಾಗೂ ಮೀನು ಆಹಾರ ಮೇಳಕ್ಕೆ ಅದ್ಧೂರಿ ಚಾಲನೆ ದೊರೆತಿದೆ. ಮೇಳದಲ್ಲಿ ಬೃಹತ್ ಗಾತ್ರದ ಸಿಹಿನೀರಿನ ಮೀನುಗಳು ಗ್ರಾಹಕರ ಗಮನ ಸೆಳೆದಿದ್ದು, ಮೀನುಪ್ರಿಯರು ಮುಗಿಬಿದ್ದು ಮೀನು ಖರೀದಿಸಿದರು.

ದೊಡ್ಡ ದೊಡ್ಡ ಗಾತ್ರದ ಮೀನುಗಳು… ಬಲೆ ಬೀಸಿ ಮೀನು ಹಿಡಿಯುವ ದೃಶ್ಯ… ಜೀವಂತ ಮೀನುಗಳ ಮಾರಾಟ… ಇವೆಲ್ಲವೂ ಪಿಲಿಕುಳ ಮತ್ಸ್ಯೋತ್ಸವದ ಪ್ರಮುಖ ಆಕರ್ಷಣೆ.

ಪಿಲಿಕುಳ ಲೇಕ್ ಗಾರ್ಡನ್‌ನ ಕೊಳದಲ್ಲಿ ರೋಹು, ಕಾಟ್ಲಾ, ತೆಲಪಿಯ ಸೇರಿದಂತೆ ವಿವಿಧ ಜಾತಿಯ ಸಿಹಿನೀರಿನ ಮೀನುಗಳನ್ನು ಬಲೆ ಬೀಸಿ ಹಿಡಿಯಲಾಯಿತು. ಈಗಾಗಲೇ ಸುಮಾರು 1,000 ಕೆಜಿ ಮೀನುಗಳನ್ನು ಹಿಡಿಯಲಾಗಿದ್ದು, ಈ ಬಾರಿ ಒಟ್ಟು 1,500 ಕೆಜಿ ಮೀನು ಹಿಡಿಯುವ ಗುರಿ ಹೊಂದಲಾಗಿದೆ.

ಏಳೆಂಟು ಕೆಜಿ ತೂಕದ ಬೃಹತ್ ಮೀನುಗಳು ಕೂಡ ಬಲೆಗೆ ಬಿದ್ದಿದ್ದು, ಜೀವಂತ ಮೀನುಗಳನ್ನು ಕೆಜಿಗೆ 160 ರೂಪಾಯಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಬೆಳಗ್ಗೆಯಿಂದಲೇ ನೂರಾರು ಮಂದಿ ಮೇಳಕ್ಕೆ ಆಗಮಿಸಿ ಮೀನು ಖರೀದಿಯಲ್ಲಿ ತೊಡಗಿಸಿಕೊಂಡಿದ್ದರು.

ಮೀನು ಮರಿಗಳನ್ನು ಪಿಲಿಕುಳದ ಕೊಳಕ್ಕೆ ಬಿಟ್ಟು, ಬಳಿಕ ಬಲೆ ಬೀಸಿ ಮೀನುಗಳನ್ನು ಹಿಡಿದು ಬುಟ್ಟಿಗೆ ತುಂಬುವ ಮೂಲಕ ಸ್ಥಳೀಯ ಶಾಸಕ ಉಮಾನಾಥ ಕೋಟ್ಯಾನ್ ಅವರು ಮೇಳಕ್ಕೆ ಚಾಲನೆ ನೀಡಿದರು.
ಕಳೆದ ವರ್ಷವೂ ಸಾರ್ವಜನಿಕರಿಂದ ಹೆಚ್ಚಿನ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಈ ಬಾರಿ ಟೋಕನ್ ವ್ಯವಸ್ಥೆಯ ಮೂಲಕ ಮೀನು ಮಾರಾಟ ಮಾಡಲಾಗುತ್ತಿದೆ. ಪ್ರತಿಯೊಬ್ಬ ಗ್ರಾಹಕರಿಗೂ ಗರಿಷ್ಠ 5 ಕೆಜಿ ಮೀನು ಖರೀದಿಸಲು ಅವಕಾಶ ಕಲ್ಪಿಸಲಾಗಿದ್ದು, ಎಲ್ಲರಿಗೂ ಮೀನು ದೊರೆಯುವಂತೆ ವ್ಯವಸ್ಥೆ ಮಾಡಲಾಗಿದೆ.
ಕರಾವಳಿಯ ಸಂಸ್ಕೃತಿ ಹಾಗೂ ಮೀನುಗಾರಿಕಾ ಪರಂಪರೆಯನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಪ್ರತಿವರ್ಷ ಪಿಲಿಕುಳ ಮತ್ಸ್ಯೋತ್ಸವ ಆಯೋಜಿಸಲಾಗುತ್ತಿದೆ.

ಪಿಲಿಕುಳಕ್ಕೆ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವ ನಿಟ್ಟಿನಲ್ಲಿಯೂ ಈ ಮೇಳ ಮಹತ್ವ ಪಡೆದುಕೊಂಡಿದೆ. ಕರಾವಳಿ ಭಾಗದ ಪ್ರಮುಖ ಕಸುಬುಗಳಲ್ಲಿ ಒಂದಾಗಿರುವ ಮೀನುಗಾರಿಕೆಯ ಬಗ್ಗೆ ಸಾರ್ವಜನಿಕರಿಗೆ ನೇರ ಅನುಭವ ನೀಡುವುದರ ಜೊತೆಗೆ, ಮೀನು ಹಿಡಿಯುವ ಪ್ರಕ್ರಿಯೆಯನ್ನು ಕಣ್ತುಂಬಿಕೊಳ್ಳಲು ಹಾಗೂ ಜೀವಂತ ಮೀನುಗಳನ್ನು ಖರೀದಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ (ಪ್ರಭಾರ) ಡಾ. ಅರುಣ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ಇನ್ನು ಮೇಳಕ್ಕೆ ಆಗಮಿಸಿದ ಗ್ರಾಹಕರು ಕೂಡ ಮೀನು ಖರೀದಿಸಿ ಸಂತಸ ವ್ಯಕ್ತಪಡಿಸಿದ್ದಾರೆ. ಹಲವು ವರ್ಷಗಳಿಂದ ಪಿಲಿಕುಳ ಮತ್ಸ್ಯೋತ್ಸವಕ್ಕೆ ಭೇಟಿ ನೀಡುತ್ತಿದ್ದು, ಪ್ರತಿಬಾರಿಯೂ ಇಲ್ಲಿನ ಮೀನುಗಳ ಗಾತ್ರ ಹಾಗೂ ಮೇಳದ ವೈಶಿಷ್ಟ್ಯ ಆಕರ್ಷಿಸುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಪಿಲಿಕುಳ ಅಭಿವೃದ್ಧಿ ಉಪ ಸಮಿತಿಯ ಅಧ್ಯಕ್ಷ ಡಾ. ಶ್ರೀನಿಕೇತನ್, ಕೆಎಫ್‌ಡಿಸಿಯ ಪ್ರಧಾನ ವ್ಯವಸ್ಥಾಪಕ ಮಹೇಶ್ ಕುಮಾರ್, ಪಿಲಿಕುಳದ ಹಿರಿಯ ವೈಜ್ಞಾನಿಕ ಅಧಿಕಾರಿ ರಾಮಕೃಷ್ಣ, ಗುತ್ತುಮನೆ ಮತ್ತು ಸಂಸ್ಕೃತಿ ಗ್ರಾಮದ ಸೆಕ್ಷನ್ ಹೆಡ್ ನಿತಿನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮಂಗಳೂರು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ, ಪ್ರವಾಸೋದ್ಯಮ ಇಲಾಖೆ, ಮೀನುಗಾರಿಕಾ ಇಲಾಖೆ ಹಾಗೂ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಸಂಯುಕ್ತ ಆಶ್ರಯದಲ್ಲಿ ಮತ್ಸ್ಯೋತ್ಸವ ಮತ್ತು ಮೀನು ಆಹಾರ ಮೇಳ ಆಯೋಜಿಸಲಾಗಿದೆ.

ಭಾನುವಾರದ ರಜೆಯ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಿಲಿಕುಳಕ್ಕೆ ಆಗಮಿಸಿ, ಮೀನು ಹಿಡಿಯುವ ದೃಶ್ಯವನ್ನು ಕಣ್ತುಂಬಿಕೊಂಡು, ತಮಗೆ ಬೇಕಾದ ಮೀನುಗಳನ್ನು ಖರೀದಿಸಿ ಮೇಳದ ಸವಿಯನ್ನು ಸವಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments