ಮಂಗಳೂರು: ಪ್ರೀತಿ ಮತ್ತು ಸೇವೆಯ ಸಣ್ಣ ಕಾರ್ಯಗಳ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಬಲ್ಲನು. ದೊಡ್ಡ ಕನಸುಗಳನ್ನು ಕಾಣುವವರಾಗಿರಿ, ಸವಾಲುಗಳನ್ನು ಧೈರ್ಯದಿಂದ ಎದುರಿಸುವಂತಾಗಿ ಎಂದು ಬೆಂಗಳೂರು ಸಂತ ಜೋಸೆಫರ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ. ಕ್ಲೆಮೆಂಟ್ ಡಿಸೋಜಾ ಅಭಿಪ್ರಾಯಪಟ್ಟರು.

ಅವರು “ಹೃದಯಗಳಿಗೆ ಪ್ರೇರಣೆ – ಬದುಕುಗಳಿಗೆ ಪರಿವರ್ತನೆ” ಎಂಬ ಧ್ಯೇಯದಡಿ ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯಲ್ಲಿ ಜರುಗಿದ ಸಂತ ಇಗ್ನೇಷಿಯಸ್ ಲೊಯಲಾ ಅವರ ಹಬ್ಬದ ಆಚರಣೆಯಲ್ಲಿ “ಸಂತ ಇಗ್ನೇಷಿಯಸ್ ಇಂದಿನ ಯುಗದಲ್ಲಿ ಗೊನ್ಝಾಗ ಶಾಲೆಗೆ ಬಂದಿದ್ದರೆ?” ಎಂಬ ವಿಚಾರವನ್ನು ಉದ್ದೇಶಿಸಿ ಮಾತನಾಡಿದರು.
ಸ್ನೇಹ, ನಗು, ಕಲಿಕೆ ಹಾಗೂ ಕನಸುಗಳಲ್ಲಿಯೂ ದೇವರನ್ನು ಕಾಣಬಹುದು. ಕೃತಜ್ಞತೆಯ ಮನೋಭಾವವನ್ನು ಬೆಳೆಸಿಕೊಳ್ಳುತ್ತಾ ಅತ್ಯುತ್ತಮ ವ್ಯಕ್ತಿತ್ವವನ್ನು ರೂಪಿಸಿವಂತಾಗಿರಿ. ಈ ಮೂಲಕ ಉತ್ತಮ ಸಮಾಜವನ್ನು ನಿರ್ಮಿಸುವವರಾಗಿರಿ ಎಂದು ಆಶಿಸಿದರು. ಶಾಲೆಯ ಪ್ರಾಂಶುಪಾಲರಾದ ವಂ ಫಾ. ರೋಹನ್ ಡಿ’ಅಲ್ಮೇಡಾ ಎಸ್. ಜೆ ಮಾತನಾಡಿ, ನಂಬಿಕೆ, ಶ್ರೇಷ್ಠತೆ ಮತ್ತು ಸೇವೆಯ ಇಗ್ನೇಷಿಯನ್ ಮೌಲ್ಯಗಳನ್ನು ಜೀವನದಲ್ಲಿ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಿ. ಮ್ಯಾಜಿಸ್ ತತ್ವದಂತೆ ತಮ್ಮ ಅತ್ಯುತ್ತಮ
ವ್ಯಕ್ತಿತ್ವವನ್ನು ನಿರ್ಮಿಸಿಕೊಳ್ಳುವ ಮೂಲಕ ಶ್ರೇಷ್ಠತೆಯತ್ತ ಸಾಗಬೇಕು . ಸಂತ ಇಗ್ನೇಷಿಯಸ್ ಅವರ ಆದರ್ಶಗಳನ್ನು ಅನುಸರಿಸಿ ಶಿಸ್ತುಬದ್ಧ ಹಾಗೂ ಪ್ರೇರಣಾದಾಯಕ ಜೀವನ ನಡೆಸಿರಿ ಎಂದರು.

ಕಾರ್ಯಕ್ರಮದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಕನ್ನಡ ಚಲನಚಿತ್ರ ಮಿಥ್ಯ ದಲ್ಲಿ ಬಾಲನಟನಾಗಿ ಅಭಿನಯಿಸಿದ ಶಾಲೆಯ ವಿದ್ಯಾರ್ಥಿ ಅವಿಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಅವಿಶ್ ಶೆಟ್ಟಿ ಅವರ ಪೋಷಕರಾದ ಸತೀಶ್ ಶೆಟ್ಟಿ ಮತ್ತು ಭಾರತಿ ಶೆಟ್ಟಿ , ಪ್ರಾಂಶುಪಾಲರು, ಉಪ ಪ್ರಾಂಶುಪಾಲರು, ಶೈಕ್ಷಣಿಕ ಸಂಯೋಜಕರು, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮನೋನಿಬಂಧನೆ, ಆತ್ಮಾವಲೋಕನ ಮತ್ತು ವಿವೇಕಪೂರ್ಣ ನಿರ್ಧಾರಗಳ ಮಹತ್ವವನ್ನು ಪ್ರತಿಬಿಂಬಿಸುವ ನೃತ್ಯ ನಾಟಕವನ್ನು ಪ್ರದರ್ಶಿಸಿದರು. ಗಾಯನ ತಂಡದ ಗಾಯನಗಳು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿತು. ಸಂತ ಇಗ್ನೇಷಿಯಸ್ ಹಬ್ಬದ ಅಂಗವಾಗಿ ಆಯೋಜಿಸಲಾದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಟ್ರೋಫಿಗಳನ್ನು ವಿತರಿಸಲಾಯಿತು.

