HomeFresh Newsಪಡುಬಿದ್ರಿಯಲ್ಲಿ ಪ್ರಜಾಸೇವಾ ಆಂದೋಲನ ಸಭೆ 29 ವಿವಿಧ ಸಮಸ್ಯೆಗಳ ಕುರಿತು ಸಾರ್ವಜನಿಕರಿಂದ ಅರ್ಜಿ

ಪಡುಬಿದ್ರಿಯಲ್ಲಿ ಪ್ರಜಾಸೇವಾ ಆಂದೋಲನ ಸಭೆ 29 ವಿವಿಧ ಸಮಸ್ಯೆಗಳ ಕುರಿತು ಸಾರ್ವಜನಿಕರಿಂದ ಅರ್ಜಿ

ಪಡುಬಿದ್ರಿ, ಸೆ. 26: ಸರಕಾರ ಮತ್ತು ಸಮಾಜದ ನಡುವಿನ ಕೊಂಡಿಯಾಗಿ ಜನರ ಬಳಿಗೆ ತೆರಳಿ, ಅವರ ಸಮಸ್ಯೆಗಳನ್ನು ಕುಟುಂಬದ ಸಮಸ್ಯೆಗಳಂತೆ ಪರಿಗಣಿಸಿ ಪರಿಹರಿಸುವ ಉದ್ದೇಶದಿಂದ ಪ್ರಜಾಸೇವಾ ಆಂದೋಲನ ಆರಂಭಿಸಲಾಗಿದೆ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಪಡುಬಿದ್ರಿ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ನಡೆದ ಪ್ರಜಾಸೇವಾ ಆಂದೋಲನ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರತಿವರ್ಷ ಸುಮಾರು 40 ಸಾವಿರ ಎಂಜಿನಿಯರ್‌ಗಳು ಹೊರಬರುತ್ತಿದ್ದರೂ, ಕೇವಲ 4 ಸಾವಿರ ಮಂದಿಗೆ ಮಾತ್ರ ಉದ್ಯೋಗ ದೊರೆಯುತ್ತಿದೆ. ಇಂತಹ ಸಂದರ್ಭದಲ್ಲಿ ಸರಕಾರಿ ವ್ಯವಸ್ಥೆಯೇ ಜನರ ಬಳಿಗೆ ಬಂದು ಸಹಾಯಹಸ್ತ ಚಾಚಬೇಕೆಂಬ ನಿರೀಕ್ಷೆ ಜನರಲ್ಲಿದೆ ಎಂದರು.
ಸಭೆಯಲ್ಲಿ ಬೆಳಪು ಹಿಂದೂ ರುದ್ರಭೂಮಿಯ ಮೂಲಸೌಕರ್ಯ ಅಭಿವೃದ್ಧಿ, ಪಡುಬಿದ್ರಿ ಮೀನುಗಾರಿಕಾ ರಸ್ತೆ ಸೇರಿದಂತೆ ವಿವಿಧ ರಸ್ತೆಗಳ ಅಭಿವೃದ್ಧಿ, ಮನೆ ನಿವೇಶನ, ಶುದ್ಧ ಕುಡಿಯುವ ನೀರಿನ ಘಟಕ, ಜೈನ್ ಟ್ಯೂಬ್ಸ್ ಕಂಪೆನಿಯ ವಿಷಕಾರಿ ಹೊಗೆ, ಹಕ್ಕುಪತ್ರ, ಕಂಚಿನಡ್ಕದಲ್ಲಿ ಕುಡುಕರ ಹಾವಳಿ, ನಡ್ಸಾಲು–ಬೇಂಗ್ರೆ–ಪಾಂದೆತೋಟ ಪ್ರದೇಶಗಳ ಕುಡಿಯುವ ನೀರಿನ ಪೂರೈಕೆ, ವಿದ್ಯುತ್ ಸಂಪರ್ಕ, ಪಡುಬಿದ್ರಿ ಜಂಕ್ಷನ್‌ನಲ್ಲಿ ಸಿಗ್ನಲ್ ಲೈಟ್ ಹಾಗೂ ಫ್ಲೈಓವರ್ ನಿರ್ಮಾಣ ಸೇರಿದಂತೆ ಒಟ್ಟು 29 ವಿವಿಧ ಸಮಸ್ಯೆಗಳ ಕುರಿತು ಸಾರ್ವಜನಿಕರು ಅರ್ಜಿ ಸಲ್ಲಿಸಿದರು.
ಸಭೆಯಲ್ಲಿ ಪಿಡಿಒ ಮಂಜುನಾಥ ಶೆಟ್ಟಿ, ತಹಶೀಲ್ದಾರ್ ಅನಂತ ಶಂಕರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಿಜಯಕುಮಾರ್, ಕಾಪು ಪುರಸಭಾ ಮುಖ್ಯಾಧಿಕಾರಿ ಎನ್.ಎಂ. ಮೇಸ್ತ, ಕಾಪು ವೃತ್ತ ನಿರೀಕ್ಷಕ ಅಜ್ಮತ್ ಅಲಿ, ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ರಾಜಶ್ರೀ ಕಿಣಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಗ್ರಾಮಾಡಳಿತ ಅಧಿಕಾರಿ ಶ್ರೀನಿವಾಸ ಆರ್.ಟಿ. ಕಾರ್ಯಕ್ರಮ ನಿರ್ವಹಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments