ಹರೇಕಳದಲ್ಲಿ ಸ್ವರಾಜ್ ಶೆಟ್ಟಿ ಅಭಿನಯದ ಸಿನಿಮಾಕ್ಕೆ ಮುಹೂರ್ತ

ಉಳ್ಳಾಲ: ಕಾಂತಾರ ಚಿತ್ರದಲ್ಲಿ ನಟಿಸಿರುವ ಅನೇಕ ಕಲಾವಿದರುಗಳನ್ನು ಒಳಗೊಂಡು , ಪ್ರಮುಖ ಗುರುವ ಪಾತ್ರ ಮಾಡಿದ್ದ ಸ್ವರಾಜ್ ಶೆಟ್ಟಿ ನಾಯಕನಟನಾಗಿ ನಟಿಸಲಿರುವ , ಮ್ಯಾಕ್ಸ್ ಕ್ರಿಯೇಷನ್ಸ್ ಸಂಸ್ಥೆ ನಿರ್ಮಿಸುತ್ತಿರುವ ಇನ್ನೇನು ಹೆಸರು ಇಡಲಿರುವ ‘ಪ್ರೊಡಕ್ಷನ್ ನಂ–೧ ಕನ್ನಡ ಚಲನಚಿತ್ರದ ಮುಹೂರ್ತ ಹರೇಕಳದ ಅರ್ಧನಾರೀಶ್ವರ ದೇವಸ್ಥಾನದಲ್ಲಿ ಭಾನುವಾರ ನಡೆಯಿತು.

ಹಿರಿಯ ರಂಗಕರ್ಮಿ ವಿಜಯಕುಮಾರ್ ಕೊಡಿಯಾಲ್ ಬೈಲ್ ಕ್ಲಾಪ್ ಮಾಡಿದರು. ಚಿತ್ರೀಕರಣಕ್ಕೆ ಚಲನಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕ ಪ್ರಕಾಶ್ ಪಾಂಡೇಶ್ವರ್ ಚಾಲನೆ ನೀಡಿದರು.
ಬಳಿಕ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತಾಡಿದ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರು, “ಸ್ವರಾಜ್ ಶೆಟ್ಟಿ ಉತ್ತಮ ಕಲಾವಿದ. ಮೊದಲ ಬಾರಿ ಕಥೆ ಚಿತ್ರಕತೆ ನಿರ್ದೇಶನದ ಜೊತೆಗೆ ನಾಯಕರಾಗಿ ಅಭಿನಯಿಸುತ್ತಿದ್ದಾರೆ. ಅವರಿಗೆ ಎಲ್ಲರ ಹಾರೈಕೆ ಇರಲಿ. ಕನ್ನಡ ಧಾರವಾಹಿ ರಾಧಾಕಲ್ಯಾಣ, ಕೃಷ್ಣ ತುಳಸಿ ಹಾಗೂ ಓಂಪ್ರಕಾಶ್ ರಾವ್ ಅವರ ಎರಡು ಚಿತ್ರಗಳಲ್ಲಿ ನಟಿಸಿ ಇನ್ನೇನು ತೆರೆಕಾಣಲಿರುವ ಬಹುನಿರೀಕ್ಷಿತ ಬಿರ್ದ್ದ ಕಂಬುಲ ಚಿತ್ರದಲ್ಲಿ ನಿರ್ದೇಶಕ ಹಾಗೂ ನಾಯಕನಟನಾಗಿ ನಟಿಸಿ, ಶಿವದೂತೆ ಗುಳಿಗೆಯಲ್ಲೂ ನಾಟಕದಲ್ಲಿ ಒಂದು ದಿನಕ್ಕೆ ಮೂರು ಪ್ರದರ್ಶನವಿದ್ದರೂ ಅದೇ ಹುಮ್ಮಸ್ಸಿನಲ್ಲಿ ನಟಿಸುವ ಅದ್ಭುತ ಕಲಾವಿದೆ. ೩೭ ವರ್ಷದ ನನ್ನ ರಂಗ ಪ್ರಯಾಣದಲ್ಲಿ ಸಹಕರಿಸಿ ಬೆಂಬಲಿಸಿದ ಎಲ್ಲರೂ ಸ್ವರಾಜ್ ಶೆಟ್ಟಿಯವರಿಗೂ ಪ್ರೋತ್ಸಾಹಿಸಬೇಕಿದೆ ಎಂದರು.

ಪ್ರಕಾಶ್ ಪಾಂಡೇಶ್ವರ್ ಮಾತನಾಡಿ , “ಸ್ವರಾಜ್ ಅನ್ನುವ ಪ್ರತಿಭೆ ಪೂರ್ಣ ಪ್ರಮಾಣದಲ್ಲಿ ಈ ಚಿತ್ರದ ಮೂಲಕ ಪಯಣ ಆರಂಭಿಸಿದ್ದಾರೆ. ಭಾರೀ ಪ್ರಶಂಸೆ ಪಡೆದುಕೊಂಡ ನಟ ಸ್ವರಾಜ್ ಶೆಟ್ಟಿ , ಕಾಂತಾರ ಚಿತ್ರದಲ್ಲಿ ಕಂಡ ಯಶಸ್ಸು ಸೇರಿದಂತೆ ಶಿವದೂತೆ ಗುಳಿಗೆ ನಾಟಕದಲ್ಲೂ ಅದ್ಭುತ ನಟನೆಯನ್ನು ಮಾಡಿ ಖ್ಯಾತಿ ಗಳಿಸಿದವರು. ತಾವಾಗಿಯೇ ನಟಿಸಿ, ನಿರ್ದೇಶಿಸಿ, ಚಿತ್ರಕಥೆ ನೀಡಿ ತಯಾರಾಗುತ್ತಿರುವ ಸಿನಿಮಾವಿದು. ಚಿತ್ರತಂಡಕ್ಕೆ ಶುಭಹಾರೈಕೆಗಳು ಎಂದರು.
ನಾಯಕನಟ ಸ್ವರಾಜ್ ಶೆಟ್ಟಿ ಮಾತನಾಡಿ, ಕಾಂತಾರ ಚಿತ್ರದಲ್ಲಿ ನಟಿಸಿರುವ ಪ್ರತಿಮಾ ನಾಯ್ಕ್, ಸತೀಶ್ ಆಚಾರ್ಯ, ರಾಧಾಕೃಷ್ಣ ನಾಯ್ಕ್ ಸೇರಿದಂತೆ ಅನೇಕ ಕಲಾವಿದರು ಚಿತ್ರದಲ್ಲಿ ನಟಿಸಲಿದ್ದಾರೆ. ಜನವರಿ ಶೂಟಿಂಗ್ ಸಂದರ್ಭ ಸ್ಟಾರ್ ಕಾಸ್ಟಿಂಗ್ ನಡೆಯಲಿದೆ. ಕನ್ನಡದಲ್ಲಿ ಚಿತ್ರೀಕರಣಗೊಳ್ಳಲಿರುವ ಚಿತ್ರ ನಂತರ ತುಳು ಭಾಷೆಯಲ್ಲೂ ತೆರೆಕಾಣಲಿದೆ. ಚಿತ್ರಕ್ಕೆ ಈಗಾಗಲೇ ಹೆಸರನ್ನು ಇಡಲಾಗಿದೆ. ಅದನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸಲಿದ್ದೇವೆ. ಪ್ರೇiಕಥೆಯನ್ನು ಒಳಗೊಂಡ ಚಿತ್ರ ಇದಾಗಿದ್ದು, ಮಂಗಳೂರಿನಾದ್ಯಂತ ೨೫ ದಿನಗಳ ಕಾಲ ಶೂಟಿಂಗ್ ನಡೆಯಲಿದೆ. ಈಗಾಗಲೇ ನಟಿಸಿರುವ ಅಭಿರಾಮ ಹಾಗೂ ಬಿರ್ದ್ದ ಕಂಬುಲ ತಾನು ಕಾಂತಾರ ಚಿತ್ರದ ಬಳಿಕ ನಟಿಸಿರುವ ಚಿತ್ರಗಳು ಶೀಘ್ರದಲ್ಲೇ ತೆರೆಕಾಣಲಿವೆ ಎಂದರು.

ಚಿತ್ರದ ನಿರ್ಮಾಪಕ ಭಾಗ್ಯರಾಜ್ ಶೆಟ್ಟಿ ಮಾತನಾಡಿ, “ಕನ್ನಡಿಗರು ಸಹಕಾರ ನೀಡಬೇಕು ಎಂದರು.
ನಟಿ ಶಿವಾನಿ ರೈ ಮಾತಾಡುತ್ತಾ, “ಇದು ನನ್ನ ಎರಡನೇ ಸಿನಿಮಾ ಆಗಿದ್ದು ನಾನು ತುಂಬಾ ಇಷ್ಟಪಟ್ಟು ಚಿತ್ರತಂಡ ಸೇರಿದ್ದೇನೆ. ಚಿತ್ರದ ಕಥೆ ತುಂಬಾ ಚೆನ್ನಾಗಿದೆ” ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹಿರಿಯ ರಂಗಕರ್ಮಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕ ಪ್ರಕಾಶ್ ಪಾಂಡೇಶ್ವರ್, ನಾಯಕ ನಟ ಸ್ವರಾಜ್ ಶೆಟ್ಟಿ, ನಾಯಕಿ ನಟಿ ಶಿವಾನಿ ರೈ, ಭಾಗ್ಯರಾಜ್ ಶೆಟ್ಟಿ, ನಿರ್ಮಾಪಕಿ ರಕ್ಷಾ ರಾಜ್ ಶೆಟ್ಟಿ , ಪ್ರವೀಣ್ ಶೆಟ್ಟಿ, ಗಣೇಶ್ ನೀರ್ಚಾಲ್ ಉಪಸ್ಥಿತರಿದ್ದರು.
ಕ್ಯಾಮರಾಮೆನ್ ಆಗಿ ರೂಪೇಶ್ ಷಾಜಿ, ಸಂಗೀತ ನಿರ್ದೇಶಕರಾಗಿ ವಿನೋದ್ ರಾಜ್ ಕೋಕಿಲ, ಆರ್ಟ್ ಡೈರೆಕ್ಟರ್ ಆಗಿ ರಾಜೇಶ್ ಬಂದ್ಯೋಡ್ , ಸ್ಕ್ರಿಪ್ಟ್ ಸುಪರ್ವೈಸರ್ ಆಗಿ ವಿಘ್ನೇಶ್ ಶೆಟ್ಟಿ, ಎಡಿಟಿಂಗ್ ವಿಭಾಗದಲ್ಲಿ ಗಣೇಶ್ ನೀರ್ಚಾಲು, ಪ್ರಾಡಕ್ಷನ್ ಮ್ಯಾನೇಜರ್ ಆಗಿ ರಾಜೇಶ್ ಕುಡ್ಲ, ಅಸಿಸ್ಟೆಂಟ್ ಡೈರೆಕ್ಟರಾಗಿ ಮಹಾನ್ ಶೆಟ್ಟಿ ಪ್ರವೀಣ್ ಶೆಟ್ಟಿ ಚಿತ್ರ ತಂಡದಲ್ಲಿ ಇದ್ದಾರೆ .