ಪುತ್ತೂರು: ಕಂಪೌಂಡರ್ ನರಸಿಂಹ ಭಟ್ ಅಸ್ತಂಗತ

ಪುತ್ತೂರು: ‘ದಾಲ ಪೊಡ್ಯೋರ್ಚಿ ಪೂರ ಕಮ್ಮಿ ಆಪುಂಡು ಹಹಹ’ ಎಂದೇ ಪುತ್ತೂರು ಸಹಿತ ಹತ್ತೂರಿನ ಜನಮನ ಗೆದ್ದ ನಗುಮೊಗದ ಕಂಪೌಂಡರ್ ಡಾಕ್ಟರ್ ಎಂದೇ ಖ್ಯಾತರಾದ ಹಾರಾಡಿ ನಿವಾಸಿ ಕಂಪೌಂಡರ್ ನರಸಿಂಹ ಭಟ್ (82ವ) ಅವರು ಫೆ.3 ರ ರಾತ್ರಿ ಅಸ್ತಂಗತರಾಗಿದ್ದಾರೆ.
ತನ್ನ 16ನೇ ವಯಸ್ಸಿನಿಂದ ಪುತ್ತೂರಿನ ಚಿಕಿತ್ಸಾಲಯವೊಂದರಲ್ಲಿ ಕಾಂಪೌಂಡರ್ ಆಗಿ 68 ವರ್ಷ ಸೇವೆ ಸಲ್ಲಿಸಿದ ನರಸಿಂಹ ಭಟ್ ಅವರು ನಿವೃತ್ತಿಗೊಂಡು ಮನೆಯಲ್ಲಿದ್ದರು. ಮೃತರು ಪತ್ನಿ ಕಾವೇರಮ್ಮ, ಪುತ್ರ ವಿದೇಶದಲ್ಲಿರುವ ಕಾರ್ತಿಕ್, ಇಬ್ಬರು ಸಹೋದರರನ್ನು ಅಗಲಿದ್ದಾರೆ.
ಡಾ.ಶಿವರಾಮ ಭಟ್ ಜೊತೆ ಕಾಂಪೌಂಡರ್ ಆಗಿ ಕೆಲಸ ಮಾಡಿದ ನರಸಿಂಹ ಭಟ್ ಅವರು ಎಲ್ಲರಿಗೂ ಚಿರಪರಿಚಿತರು. ಬಸ್ ಸ್ಟ್ಯಾಂಡ್ ಬಳಿಯ ದಿನೇಶ್ ಭವನ ಕಟ್ಟಡದಲ್ಲಿ ವೈದ್ಯಕೀಯ ಚಿಕಿತ್ಸೆಯ ಜೊತೆಯಲ್ಲಿ ಆತ್ಮೀಯವಾಗಿ ಮಾತನಾಡುವ ಮೂಲಕ ರೋಗಿಯಲ್ಲಿ ನವಚೇತನ ತುಂಬಬಹುದು ಎಂದು ತೋರಿಸಿಕೊಟ್ಟಿದ್ದರು.
ಕಡಿಮೆ ದರಕ್ಕೆ ಕೆಲವೇ ಹೊತ್ತಿಗೆ ಇವರು ಕೊಡುವ ಔಷಧಿಗೆ ಪುತ್ತೂರು ಸಹಿತ ಸುತ್ತಮುತ್ತಲಿನ ತಾಲೂಕುಗಳಿಂದ ಬಡವರು ಆಗಮಿಸುತ್ತಿದ್ದರು. 90ರ ದಶಕದಲ್ಲಿ ಸೋಮವಾರವಂತು ಸಾವಿರಾರು ಜನ ಆಗಮಿಸುತ್ತಿದ್ದರು.
ಮೃತರ ಅಂತ್ಯ ಸಂಸ್ಕಾರ ಫೆ.4 ರ ಸಂಜೆ ಚಿಕ್ಕಪುತ್ತೂರು ರುದ್ರಭೂಮಿಯಲ್ಲಿ ನಡೆಸಲಾಗಯವುದು ಎಂದು ಮೃತರ ಸಂಬಂಧಿಕರು ತಿಳಿಸಿದ್ದಾರೆ.