HomeFresh Newsಅಮೇರಿಕಾದ ಬಾನಾ ಮಹಾ ಅಧಿವೇಶನದಲ್ಲಿ ರಾಜರ್ಷಿ ಕೆ. ವಾಸುದೇವ ಶೆಟ್ಟಿ ಭಾಗಿ

ಅಮೇರಿಕಾದ ಬಾನಾ ಮಹಾ ಅಧಿವೇಶನದಲ್ಲಿ ರಾಜರ್ಷಿ ಕೆ. ವಾಸುದೇವ ಶೆಟ್ಟಿ ಭಾಗಿ

ಕಾಪು: ಕಾಪುವಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ನವನಿರ್ಮಾಣದ ರೂವಾರಿ ಹಾಗೂ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಜರ್ಷಿ ಕೆ. ವಾಸುದೇವ ಶೆಟ್ಟಿ ಅವರು ಜುಲೈ 30ರಿಂದ ಆಗಸ್ಟ್ 2ರವರೆಗೆ ಅಮೇರಿಕಾದಲ್ಲಿ ನಡೆದ ಬಾನಾ (ಬಂಟ್ಸ್ ಅಸೋಸಿಯೇಷನ್ ಆಫ್ ನಾರ್ತ್ ಅಮೇರಿಕಾ) 47ನೇ ವಾರ್ಷಿಕೋತ್ಸವದ 25ನೇ ಸಮ್ಮೇಳನ “ದಿಬ್ಬಣ” ಮಹಾ ಅಧಿವೇಶನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ಸುಮಾರು 250 ಬಂಟ ಕುಟುಂಬಗಳ 600ಕ್ಕೂ ಅಧಿಕ ಸದಸ್ಯರು ಪಾಲ್ಗೊಂಡಿದ್ದ ಈ ಸಮ್ಮೇಳನದಲ್ಲಿ ಅಮೇರಿಕಾದ ಕನ್ನಡ ಹಾಗೂ ತುಳು ಸಂಘಟನೆಗಳ ಪ್ರಮುಖರು, ಭಾರತ ಹಾಗೂ ವಿದೇಶಗಳ ಗಣ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಪ್ರತಿನಿಧಿಯಾಗಿ ಮಾತನಾಡಿದ ರಾಜರ್ಷಿ ಕೆ. ವಾಸುದೇವ ಶೆಟ್ಟಿ ಅವರು, ದೇವಳದ ದ್ವಿತೀಯ ಹಂತದ ಕಾಮಗಾರಿಗಳಾದ ನೂತನ ಭೋಜನಶಾಲೆ, ವಿಶೇಷ ಅತಿಥಿಗೃಹ, ವಾಣಿಜ್ಯ ಸಂಕೀರ್ಣ, ಯಾಗಶಾಲೆ ಹಾಗೂ ವಸ್ತು ಸಂಗ್ರಹಾಲಯ ನಿರ್ಮಾಣದ ಕುರಿತು ಮಾಹಿತಿ ನೀಡಿದರು. ಜೊತೆಗೆ ಘಂಟಾನಾದ ಸೇವೆ, ನವದುರ್ಗಾ ಲೇಖನ ಯಜ್ಞ, ಶಿಲಾಸೇವೆ, ನಿತ್ಯಾನ್ನದಾನ ಹಾಗೂ ಚಂಡಿಕಾಯಾಗ ಸೇರಿದಂತೆ ದೇವಳದಲ್ಲಿ ಲಭ್ಯವಿರುವ ವಿವಿಧ ಸೇವೆಗಳ ಪರಿಚಯ ಮಾಡಿಕೊಟ್ಟರು.
ಕಾಪು ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಯೋಜನೆ ರೂಪಿಸುತ್ತಿದೆ. ಅಮೇರಿಕಾದಲ್ಲಿ ನೆಲೆಸಿರುವವರು ಕಾಪುವಿನಲ್ಲಿ ರೆಸಾರ್ಟ್, ಹೋಮ್‌ಸ್ಟೇ, ಹೋಟೆಲ್ ಅಥವಾ ಕೈಗಾರಿಕೆಗಳಿಗೆ ಹೂಡಿಕೆ ಮಾಡಲು ಮುಂದಾದರೆ, ಕಾಪು ಚಾರಿಟೇಬಲ್ ಟ್ರಸ್ಟ್ ಅಗತ್ಯ ಸಹಕಾರ ನೀಡಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನವದುರ್ಗಾ ಲೇಖನ ಯಜ್ಞದ ಪುಸ್ತಕ ಹಾಗೂ ಅಮ್ಮನ ಪ್ರಸಾದವನ್ನು ಒಂಬತ್ತು ಮಂದಿಗೆ ವಿತರಿಸಿ, ಅವರನ್ನು *”ಕಾಪು ಕ್ಷೇತ್ರ ಮಾತೃ ವೈಭವ – ಸೇವಾ ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಯಿತು. ಇದೇ ವೇಳೆ ಸಿಯಾಟಲ್‌ನಲ್ಲಿ ಕಾಪು ಕ್ಷೇತ್ರ ಮಾತೃ ವೈಭವ – ಸೇವಾ ಸಮಿತಿಗೆ ಚಾಲನೆ ನೀಡಲಾಯಿತು. ಅಮೇರಿಕಾದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದ ಸಮಿತಿಯನ್ನು “ಕಾಪು ಕ್ಷೇತ್ರ ಮಾತೃ ವೈಭವ ಸೇವಾ ಸಮಿತಿ – ಅಮೇರಿಕಾ ಘಟಕ” ಎಂದು ಮರುನಾಮಕರಣ ಮಾಡಲಾಯಿತು.
ದೇವಳದ ದ್ವಿತೀಯ ಹಾಗೂ ತೃತೀಯ ಹಂತದ ಕಾಮಗಾರಿಗಳಿಗೆ ವಿಶ್ವದಾದ್ಯಂತ ಇರುವ ಸಮಿತಿಗಳನ್ನು ಕಾಪು ಚಾರಿಟೇಬಲ್ ಟ್ರಸ್ಟ್ ಮೂಲಕ ಮತ್ತಷ್ಟು ಬಲಪಡಿಸುವ ಯೋಜನೆ ಇದೆ ಎಂದು ರಾಜರ್ಷಿ ಕೆ. ವಾಸುದೇವ ಶೆಟ್ಟಿ ಹೇಳಿದರು.
ಸಮ್ಮೇಳನದಲ್ಲಿ ಬಾನಾ ಅಧ್ಯಕ್ಷ ಮಂಜುನಾಥ್ ಆರ್. ಶೆಟ್ಟಿ, ಉಪಾಧ್ಯಕ್ಷರಾದ ಹಿತೇಶ್ ಶೆಟ್ಟಿ, ರಘು ಶೆಟ್ಟಿ ಹಾಗೂ ಸೀಮಾ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅಮೀತ್ ಶೆಟ್ಟಿ, ಸದಸ್ಯರಾದ ಸುಮನಾ ನಟರಾಜ್ ಶೆಟ್ಟಿ, ಶಾಮ್ ಶೆಟ್ಟಿ, ಕಾಪು ದೇವಿಪ್ರಸಾದ್ ಕನ್ಸ್ಟ್ರಕ್ಷನ್ ಪ್ರೈ. ಲಿ. ಆಡಳಿತ ನಿರ್ದೇಶಕಿ ಬೀನಾ ವಿ. ಶೆಟ್ಟಿ, ಅನನ್ಯ ಶೆಟ್ಟಿ, ಲಕ್ಷ್ಮಿ ಶೆಟ್ಟಿ, ಪವಿತ್ರ ಶೆಟ್ಟಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

Sudha Interior new 1
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments