ಮಂಗಳೂರು: ಪಂಜಿಮೊಗರು ಮಾಲಾಡಿ ರಸ್ತೆಯ ಬಳಿಯ ನಿವಾಸಿ ರಾಕೇಶ್ ಎಂಬವರನ್ನು ತಲವಾರ್ನಿಂದ ಕಡಿದು ಕೊಲೆ ಮಾಡಿ ಪ್ರಕರಣದ ಆರೋಪಿಗಳಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.
ಸುನೀಲ್ ಕುಮಾರ್ ಯಾನೆ ಕೌಟಿ, ಪ್ರವೀಣ್ ಪೂಜಾರಿ ಯಾನೆ ಚೋಟು, ಪ್ರೀತಮ್ ಯಾನೆ ಅಭಿ ಜೀವಾವಧಿ ಶಿಕ್ಷೆಗೊಳಗಾದ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. 2019ರ ಜ.3ರಂದು ಸುನಿಲ್ ಕುಮಾರ್ ಕೌಟಿ ಎಂಬಾತನ ತಂಗಿಯನ್ನು ರಾಕೇಶ್ ಪ್ರೀತಿಸುತಿದ್ದನು ಎಂಬ ಕಾರಣಕ್ಕೆ ಆತನನ್ನು ಕೊಲೆಗೈಯಲಾಗಿತ್ತು.
ಸುನೀಲ್ ಕುಮಾರ್ ಯಾನೆ ಕೌಟಿ, ಪ್ರವೀಣ್ ಪೂಜಾರಿ ಯಾನೆ ಚೋಟು, ಪ್ರೀತಮ್ ಯಾನೆ ಅಭಿ, ರೋಹಿತ್ ಕುಮಾರ್ ಯಾನೆ ಶೂಟರ್ ಎಂಬವರು ಸೇರಿಕೊಂಡು ರಾಕೇಶ್ನನ್ನು ತಲವಾರ್ ಗಳಿಂದ ಕೊಲೆ ಮಾಡಿರುವುದಾಗಿ ಇವರ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಾವೂರು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಕೆ.ಆರ್ ನಾಯ್ಕ್ ತನಿಖಾಧಿಕಾರಿಯಾಗಿದ್ದರು.
ಪೊಲೀಸರು ತನಿಖೆ ನಡೆಸಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು. ನಗರದ 6ನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯವು ಸುದೀರ್ಘ ವಿಚಾರಣೆ ನಡೆಸಿ 4 ಮಂದಿ ಆರೋಪಿತರನ್ನು ದೋಷಿಗಳೆಂದು ಘೋಷಿಸಿದೆ.
ಒಟ್ಟು ರೂ 70,000 ದಂಡದಲ್ಲಿ ರೂ 20,000 ಸರಕಾರಕ್ಕೆ ಮತ್ತು 50,000 ಮೃತನ ತಂದೆಗೆ ಕೊಡಬೇಕು ಎಂದು 6 ನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ನ್ಯಾಯಾಧೀಶ ರಾಜೇಶ್ ಮಾರುತಿ ಕಮಟೆ ತೀರ್ಪು ವಿಧಿಸಿದ್ದಾರೆ. ಸರಕಾರಿ ಅಭಿಯೋಜಕರಾದ ಮೋತೀಲಾಲ್ ಚೌದರಿ ವಾದಿಸಿದ್ದರು.

