ಬೆಂಗಳೂರು:ಸಂಗೀತ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಖ್ಯಾತ ಡ್ರಮ್ಮರ್ ದೇವ ವಿಧಿವಶರಾಗಿದ್ದಾರೆ. ಆರ್ಸಿಬಿ ಪಂದ್ಯಗಳಲ್ಲಿ ಡ್ರಮ್ ಬಾರಿಸಿ ಅಭಿಮಾನಿಗಳನ್ನು ರಂಜಿಸುತ್ತಿದ್ದ ಡ್ರಮ್ಮರ್ ದೇವ ಇಂದು ಕೊನೆಯುಸಿರೆಳೆದಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಡ್ರಮ್ಮರ್ ದೇವ ಬೆಂಗಳೂರಿನ ಆರ್ ಆರ್ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 64 ವರ್ಷ ವಯಸ್ಸಾಗಿತ್ತು.
ಕಳೆದ ಜೂನ್ ತಿಂಗಳಿನಲ್ಲಿ ಡ್ರಮ್ಮರ್ ದೇವ ಸ್ಟ್ರೋಕ್ಗೆ ಒಳಗಾಗಿದ್ದರು. ಆನಂತರ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು. ಗ್ಯಾಂಗ್ರೀನ್ ನಿಂದಾಗಿ ಡ್ರಮ್ಮರ್ ದೇವ ಅವರ ಬಲಗಾಲನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯಲಾಗಿತ್ತು. ನಂತರ ಸ್ಟ್ರೋಕ್ನ ಪರಿಣಾಮದಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಇಂದು ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

