HomeFresh Newsಝೀ" ಕನ್ನಡದ ಜನಪ್ರಿಯ ಸಂಗೀತ ರಿಯಾಲಿಟಿ ಶೋ "ಸ  ರಿ  ಗ  ಮ  ಪ  ಲಿಟಲ್...

ಝೀ” ಕನ್ನಡದ ಜನಪ್ರಿಯ ಸಂಗೀತ ರಿಯಾಲಿಟಿ ಶೋ “ಸ  ರಿ  ಗ  ಮ  ಪ  ಲಿಟಲ್ ಚಾಂಪ್ಸ್” ಮಿಂಚುತ್ತಿರುವ ಗೊನ್ಝಾಗ ಶಾಲೆಯ ಹೆಮ್ಮೆಯ ಪ್ರತಿಭೆ  ಅಶ್ಮಿತ್ 

ಮಂಗಳೂರು :   “ಝೀ” ಕನ್ನಡದ ಜನಪ್ರಿಯ ಸಂಗೀತ ರಿಯಾಲಿಟಿ ಶೋ “ಸ  ರಿ  ಗ  ಮ ಪ   ಲಿಟಲ್ ಚಾಂಪ್ಸ್” ವೇದಿಕೆಯಲ್ಲಿ  ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿ ಅಶ್ಮಿತ್ ಎ.ಜೆ ಅವರು ತಮ್ಮ ಅದ್ಭುತ ಗಾಯನದ ಮೂಲಕ ಕರ್ನಾಟಕದಾದ್ಯಂತ ಮನೆಮಾತಾಗಿದ್ದಾರೆ. ತಮ್ಮ ಮಧುರ ಕಂಠದ ಮೂಲಕ ತೀರ್ಪುಗಾರರು ಹಾಗೂ ಪ್ರೇಕ್ಷಕರ ಮನಸೂರೆಗೊಂಡಿರುವ ಅಶ್ಮಿತ್, ಪ್ರತಿಯೊಂದು ಪ್ರದರ್ಶನದಲ್ಲೂ ತಮ್ಮ ವಿಶಿಷ್ಟ ಪ್ರತಿಭೆಯನ್ನು ಸಾಬೀತುಪಡಿಸುತ್ತಿದ್ದಾರೆ.

ಬಾಲ್ಯದಿಂದಲೇ ಸಂಗೀತದತ್ತ ವಿಶೇಷ ಆಸಕ್ತಿ ಹೊಂದಿದ್ದ ಅಶ್ಮಿತ್ ಅವರಿಗೆ ಪೋಷಕರಾದ ಜಯರಾಮ್ ಕೆ. ಹಾಗೂ ರೇವತಿ ಕೆ. ಅವರ ನಿರಂತರ ಪ್ರೋತ್ಸಾಹವೇ ಯಶಸ್ಸಿನ ಮೊದಲ ಮೆಟ್ಟಿಲಾಗಿದೆ . ಖ್ಯಾತ ಸಂಗೀತ ಶಿಕ್ಷಕಿ ಸಂಧ್ಯಾ ಎಸ್. ಭಟ್ ಅವರಿಂದ ಶಾಸ್ತ್ರೀಯ ಸಂಗೀತದ ತರಬೇತಿ ಪಡೆದಿರುವ ಅವರು, ವಿದ್ವಾನ್ ವೇಣುಗೋಪಾಲ್ ಶಾನಭೋಗ್ ಅವರಿಂದ ವಯೋಲಿನ್ ಅಭ್ಯಾಸ ನಡೆಸುತ್ತಿದ್ದಾರೆ . ಗಾಯನದ ಜೊತೆಗೆ ವಯೋಲಿನ್, ತಬಲಾ, ಮೃದಂಗ, ಚೆಂಡೆ ಹಾಗೂ ಗಿಟಾರ್ ವಾದನದಲ್ಲಿಯೂ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ.ಸಂಗೀತ ಕ್ಷೇತ್ರದಲ್ಲಿನ ಸಾಧನೆಗಾಗಿ ಹೊಯ್ಸಳ ಪ್ರಶಸ್ತಿ, ಕೆಳದಿ ಚೆನ್ನಮ್ಮ ಪ್ರಶಸ್ತಿ ಹಾಗೂ ಚಿನ್ನರ ಸೌರಭ ರಾಜ್ಯ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಗೌರವ ತಮ್ಮಮುಡಿಗೇರಿಸಿಕೊಂಡಿದ್ದಾರೆ.  

ಸಾರ್ವಜನಿಕ ಸಂಗೀತ ಕಾರ್ಯಕ್ರಮಗಳಲ್ಲಿಯೂ ಅವರ ಗಾಯನ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ.ಅಶ್ಮಿತ್ ಕೇವಲ ಸಂಗೀತದಲ್ಲಷ್ಟೇ ಅಲ್ಲ, ಶಿಕ್ಷಣ ಹಾಗೂ ಸಹಪಠ್ಯ ಚಟುವಟಿಕೆಗಳಲ್ಲಿಯೂ ಮುಂಚೂಣಿಯಲ್ಲಿದ್ದಾರೆ. ಭಾರತ್ ಸ್ಕೌಟ್ಸ್ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ ಘಟಕದ ಸಕ್ರಿಯ ಸದಸ್ಯರಾಗಿರುವ ಅವರು ದೇಶಭಕ್ತಿ ಗೀತೆಗಳ ಏಕಗಾನ ಮತ್ತು ಗುಂಪುಗಾನ ಸ್ಪರ್ಧೆಗಳಲ್ಲಿ ತಾಲೂಕು, ಜಿಲ್ಲಾ, ವಲಯ ಹಾಗೂ ರಾಜ್ಯ ಮಟ್ಟದಲ್ಲಿ ಅನೇಕ ಪ್ರಶಸ್ತಿಗಳನ್ನು ಗೆದ್ದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.ಖ್ಯಾತ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಅವರು ಅಶ್ಮಿತ್ ಅವರ ಗಾಯನವನ್ನು ಶ್ಲಾಘಿಸಿ, “ಇವರು ಒಂದು ಸಂಗೀತ ವಾದ್ಯದಂತೆ ಹಾಡಬಲ್ಲ ಅಪರೂಪದ ಪ್ರತಿಭೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿರುವುದು ಈ ಕಿರಿಯ ಪ್ರತಿಭೆಯ ಗರಿಮೆಯನ್ನು ಹೆಚ್ಚಿಸಿದೆ. 

ಈ ಸಂದರ್ಭದಲ್ಲಿ ಅಶ್ಮಿತ್ ಅವರ ತಂದೆ ಜಯರಾಮ ಕೆ  ತನ್ನ ಮಗನ ಕುರಿತು  ಭಾವುಕರಾಗಿ ಮಾತನಾಡಿ, “ಹಿಂದೆ ನನ್ನನ್ನು ನನ್ನ ಹೆಸರಿನಿಂದ ಗುರುತಿಸುತ್ತಿದ್ದರು. ಇಂದು ಜನರು ‘ಅಶ್ಮಿತ್ ಅವರ ತಂದೆ’ ಎಂದು ಕರೆಯುವುದು ನನ್ನ ಜೀವನದ ಅತ್ಯಂತ ಹೆಮ್ಮೆಯ ಕ್ಷಣವಾಗಿದೆ” ಎಂದು ಸಂತಸ ವ್ಯಕ್ತಪಡಿಸಿದರು.ಸಂತ  ಅಲೋಶಿಯಸ್ ಗೊನ್ಝಾಗ  ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಅಶ್ಮಿತ್ ಅವರ ಈ ಅದ್ವಿತೀಯ ಸಾಧನೆಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದು, ಪ್ರಾಂಶುಪಾಲರಾದ ಫಾ. ರೋಹನ್ ಡಿ ಅಲ್ಮೇಡ ಎಸ್. ಜೆ ಅವರು ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲೂ ಸಾಧನೆ ಮಾಡಿ ಪೋಷಕರ ಹಾಗೂ ಕರ್ನಾಟಕದ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೇರಿಸಲಿ ಎಂದು ಮನದಾಳದಿಂದ ಶುಭ ಹಾರೈಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments