HomeFresh Newsಉದ್ಯಾವರ ಮಟ್ಟು ಕೊಪ್ಪಳದಲ್ಲಿ ಶ್ರೀರಾಮ ಭಜನಾ ಮಂದಿರದ ವತಿಯಿಂದ ಶ್ರದ್ಧಾ-ಭಕ್ತಿಯ ಸಮುದ್ರ ಪೂಜೆ

ಉದ್ಯಾವರ ಮಟ್ಟು ಕೊಪ್ಪಳದಲ್ಲಿ ಶ್ರೀರಾಮ ಭಜನಾ ಮಂದಿರದ ವತಿಯಿಂದ ಶ್ರದ್ಧಾ-ಭಕ್ತಿಯ ಸಮುದ್ರ ಪೂಜೆ

ಉದ್ಯಾವರ (ಮಟ್ಟು ಕೊಪ್ಪಳ): ಸಾವಿರಾರು ವರ್ಷಗಳಿಂದ ಸಮುದ್ರ ತಾಯಿಯ ಮಡಿಲಲ್ಲಿ ಬದುಕು ಕಟ್ಟಿಕೊಂಡಿರುವ ಕರಾವಳಿಯ ಮೀನುಗಾರ ಸಮುದಾಯವು ತಮ್ಮ ಜನ್ಮಧಾತ್ರಿಗೆ ಪ್ರೀತಿ, ಗೌರವ ಮತ್ತು ಕೃತಜ್ಞತೆ ಅರ್ಪಿಸುವ ಪವಿತ್ರ ಸಂಪ್ರದಾಯವಾದ ಸಮುದ್ರ ಪೂಜೆಯನ್ನು ಉದ್ಯಾವರ ಮಟ್ಟು ಕೊಪ್ಪಳದಲ್ಲಿ ಶ್ರೀರಾಮ ಭಜನಾ ಮಂದಿರದ ನೇತೃತ್ವದಲ್ಲಿ ಶ್ರದ್ಧಾ-ಭಕ್ತಿಯಿಂದ ನೆರವೇರಿತು.
ಮೀನುಗಾರರಿಗೆ ಸಮುದ್ರವು ಕೇವಲ ಕಡಲ ನೀರಲ್ಲ; ಅದು ತಮ್ಮನ್ನು ಹೆತ್ತ ತಾಯಿಯಂತೆ ಪೊರೆಯುವ ಜನ್ಮಧಾತ್ರಿ, ಅಪಾರ ಸಂಪತ್ತನ್ನು ತನ್ನ ಒಡಲಲ್ಲಿ ಇರಿಸಿಕೊಂಡಿರುವ ರತ್ನಾಕರ ಹಾಗೂ ನಿತ್ಯ ಜೀವನೋಪಾಯಕ್ಕೆ ಆಧಾರವಾಗಿರುವ ಜೀವದಾತ.
ಮಳೆಗಾಲದ ಆರ್ಭಟದ ಬಳಿಕ ರೌದ್ರರೂಪದಲ್ಲಿದ್ದ ಸಮುದ್ರವು ಶ್ರಾವಣ ಪೂರ್ಣಿಮೆಯ ವೇಳೆಗೆ ಶಾಂತಸ್ವರೂಪಕ್ಕೆ ತಿರುಗುವ ಸಂದರ್ಭದಲ್ಲಿ, ಆಳ ಸಮುದ್ರ ಮೀನುಗಾರಿಕೆ ಆರಂಭಿಸುವ ಮುನ್ನ ಕಡಲಮ್ಮನಿಗೆ ವಿಶೇಷ ಪೂಜೆ ಸಲ್ಲಿಸುವುದು ಕರಾವಳಿಯ ಮೀನುಗಾರ ಸಮುದಾಯದಲ್ಲಿ ಅನಾದಿಕಾಲದಿಂದ ನಡೆದುಬಂದಿರುವ ಪವಿತ್ರ ಸಂಪ್ರದಾಯವಾಗಿದೆ.
ಸಮುದ್ರಕ್ಕೆ ಕ್ಷೀರಾರ್ಪಣೆ
ಪೂಜಾ ಕಾರ್ಯಕ್ರಮದಲ್ಲಿ ಶ್ರೀರಾಮ ಭಕ್ತರು ವಿಶಾಲ ಸಮುದ್ರಕ್ಕೆ ಹಾಲು, ಅರಶಿನ, ಕುಂಕುಮ, ತೆಂಗಿನಕಾಯಿ ಹಾಗೂ ಫಲ-ತಾಂಬೂಲಗಳನ್ನು ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು.
ಗಾಳಿ, ಬಿರುಗಾಳಿ ಹಾಗೂ ಸುಂಟರಗಾಳಿಯಂತಹ ನೈಸರ್ಗಿಕ ವಿಕೋಪಗಳಿಂದ ರಕ್ಷಣೆ ದೊರೆಯಲಿ, ಸಮೃದ್ಧ ಮೀನುಗಾರಿಕೆ ಲಭಿಸಲಿ ಹಾಗೂ ಕುಟುಂಬಗಳ ಜೀವನೋಪಾಯ ಸುಗಮವಾಗಿ ಸಾಗಲಿ ಎಂದು ಕಡಲಮ್ಮನಲ್ಲಿ ಪ್ರಾರ್ಥಿಸಲಾಯಿತು.
ಪ್ರಕೃತಿಯನ್ನೇ ದೇವರೆಂದು ಭಾವಿಸಿ ಆರಾಧಿಸುವ ಭಾರತೀಯ ಸನಾತನ ಸಂಸ್ಕೃತಿಯ ಸುಂದರ ಕ್ಷಣಗಳಿಗೆ ಮಟ್ಟು ಕೊಪ್ಪಳದ ಕಡಲತೀರ ಸಾಕ್ಷಿಯಾಯಿತು.
ಪೂಜಾ ಕೈಂಕರ್ಯ
ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ಸೀತಾರಾಮ ಭಾಗವತ ತಂತ್ರಿಗಳು ವಿಧಿ-ವಿಧಾನಗಳೊಂದಿಗೆ ನೆರವೇರಿಸಿಕೊಟ್ಟರು.
ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ರಾಜೇಶ್ ಡಿ. ಸುವರ್ಣ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂದಿರದ ಸರ್ವ ಸದಸ್ಯರು, ಭಜನಾ ಮಂಡಳಿ, ಮಹಿಳಾ ಮಂಡಳಿ, ಭಕ್ತ ಮಂಡಳಿ ಸೇರಿದಂತೆ ಊರ-ಪರಊರಿನ ನೂರಾರು ಶ್ರೀರಾಮ ಭಕ್ತರು ಉಪಸ್ಥಿತರಿದ್ದು, ಸಮುದ್ರ ಮಾತೆಯ ಆರಾಧನೆಯಲ್ಲಿ ಭಕ್ತಿಭಾವದಿಂದ ಪಾಲ್ಗೊಂಡರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments