HomeFresh Newsರಸರಾಗ ಚಕ್ರವರ್ತಿ ಬಿರುದಾಂಕಿತ ಹಿರಿಯ ಭಾಗವತ ದಿನೇಶ್ ಅಮ್ಮಣ್ಣಾಯರು ವಿಧಿವಶ

ರಸರಾಗ ಚಕ್ರವರ್ತಿ ಬಿರುದಾಂಕಿತ ಹಿರಿಯ ಭಾಗವತ ದಿನೇಶ್ ಅಮ್ಮಣ್ಣಾಯರು ವಿಧಿವಶ

ಮಂಗಳೂರು: ತೆಂಕುತಿಟ್ಟು ಯಕ್ಷಗಾನ ಪರಂಪರೆಯ ಹಿರಿಯ ಭಾಗವತ, ’ರಸರಾಗ ಚಕ್ರವರ್ತಿ’ ಎಂಬ ಬಿರುದು ಹೊಂದಿದ್ದ, ದಿನೇಶ್ ಅಮ್ಮಣ್ಣಾಯರು ನಿಧನರಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆ ಗುರುವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.

ತಮ್ಮ ಕಂಚಿನ ಕಂಠ ಹಾಗೂ ವಿಶಿಷ್ಟ ರಾಗ ಸಂಯೋಜನೆಯ ಮೂಲಕ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಕಲಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಅವರ ಅಗಲಿಕೆಯಿಂದ ಯಕ್ಷಗಾನ ಲೋಕಕ್ಕೆ ಭಾರಿ ನಷ್ಟವಾಗಿದೆ. ಪೌರಾಣಿಕ ಮತ್ತು ತುಳು ಪ್ರಸಂಗಗಳೆರಡರಲ್ಲೂ ತಮ್ಮ ಛಾಪು ಮೂಡಿಸಿರುವ ಇವರು, ಯಕ್ಷಗಾನ ಕ್ಷೇತ್ರದಲ್ಲಿ ಚಿರಪರಿಚಿತ ಹೆಸರು.

ಯಕ್ಷಗಾನ ಕ್ಷೇತ್ರದ ಹಿರಿಯ ಕಲಾವಿದರಾದ, ತೆಂಕುತಿಟ್ಟು ಪರಂಪರೆಯಲ್ಲಿ ತುಳು ಯಕ್ಷಗಾನವನ್ನು ಉತ್ತುಂಗಕ್ಕೇರಿಸಿದ ದಾಮೋದರ ಮಂಡೆಚ್ಚರ ಗರಡಿಯಲ್ಲಿ ಪಳಗಿದ ದಿನೇಶ್ ಅಮ್ಮಣ್ಣಾಯರು, ತಮ್ಮ ವೃತ್ತಿಜೀವನವನ್ನು ಪುತ್ತೂರು ಮೇಳದಲ್ಲಿ ಚಂಡೆ ಮತ್ತು ಮದ್ದಳೆ ವಾದಕರಾಗಿ ಆರಂಭಿಸಿದ್ದು ವಿಶೇಷ. ಹಿಮ್ಮೇಳ ವಾದನದ ಅನುಭವದೊಂದಿಗೆ ಭಾಗವತಿಕೆಯತ್ತ ಹೊರಳಿದ ಅವರು, ತಮ್ಮದೇ ಆದ ವಿಶಿಷ್ಟ ಶೈಲಿಯನ್ನು ರೂಪಿಸಿಕೊಂಡು ಯಶಸ್ವಿಯಾಗಿ ಅಗ್ರಮಾನ್ಯ ಸ್ಥಾನಕ್ಕೇರಿದ್ದರು.

ಅಮ್ಮಣ್ಣಾಯರು ಕೇವಲ ಪೌರಾಣಿಕ ಪ್ರಸಂಗಗಳಿಗಷ್ಟೇ ಅಲ್ಲದೆ, ಅನೇಕ ತುಳು ಪ್ರಸಂಗಗಳಿಗೂ ಧ್ವನಿಯಾಗಿ ಅಪಾರ ಜನಮನ್ನಣೆ ಗಳಿಸಿದವರು. ಅದರಲ್ಲೂ ’ಕಾಡಮಲ್ಲಿಗೆ’, ’ಕಚ್ಚೂರ ಮಾಲ್ದಿ’, ’ಪಟ್ಟದ ಪದ್ಮಲೆ’ ಹಾಗೂ ’ಮಾನಿಷಾದ’ ದಂತಹ ಪ್ರಸಂಗಗಳನ್ನು ತಮ್ಮ ಗಾಯನದಿಂದ ಜನಪ್ರಿಯಗೊಳಿಸಿದ ಕೀರ್ತಿ ಅವರದ್ದಾಗಿತ್ತು. ಅಲ್ಲದೆ, ’ಸತ್ಯಹರಿಶ್ಚಂದ್ರ’ ಪ್ರಸಂಗದ ಹಾಡುಗಳಿಗೆ ಅಭಿಮಾನಿಗಳು ಸಹಸ್ರಾರು.

ಅವರ ಅನುಪಮ ಕಲಾ ಸೇವೆಗೆ ಉಡುಪಿ ತುಳುಕೂಟವು ಪ್ರತಿಷ್ಠಿತ ’ಸಾಮಗ ಪ್ರಶಸ್ತಿ’ ನೀಡಿ ಗೌರವಿಸಿತ್ತು. ಮಲ್ಪೆ ರಾಮದಾಸ ಸಾಮಗ, ಅಳಕೆ ರಾಮಯ್ಯ ರೈ, ಕೋಳ್ಯೂರು ರಾಮಚಂದ್ರ ರಾವ್ ಅವರಂತಹ ಮೇರು ಕಲಾವಿದರ ಒಡನಾಟದಲ್ಲಿ ತಮ್ಮ ಕಲಾ ಅನುಭವವನ್ನು ಶ್ರೀಮಂತಗೊಳಿಸಿಕೊಂಡ ಅಮ್ಮಣ್ಣಾಯರು, ಇತ್ತೀಚೆಗೆ ಎಡನೀರು ಮೇಳದಲ್ಲಿ ತಿರುಗಾಟ ಪೂರ್ಣಗೊಳಿಸಿ ವಿಶ್ರಾಂತ ಜೀವನ ನಡೆಸುತ್ತಿದ್ದರು. ಹವ್ಯಾಸಿ ಭಾಗವತರಾಗಿಯೂ ತಮ್ಮ ಕಲಾ ಸೇವೆಯನ್ನು ಮುಂದುವರೆಸಿದ್ದರು.

ತನ್ನದೇ ಆದ ಗಾಯನ ಶೈಲಿಯಿಂದ ಮನೆಮಾತಾಗಿದ್ದ ಅಮ್ಮಣ್ಣಾಯರು ತನ್ನ ಪುತ್ರಿಯ ಮನೆಯಲ್ಲಿ ನಿಧನರಾಗಿದ್ದು, ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಇವರ ಆಗುಲುವಿಕೆಗೆ ಯಕ್ಷಾರಾಧಕರು, ಹಾಗೂ ಗಣ್ಯಾತಿಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments