ಶೃಂಗೇರಿ ಶ್ರೀ ಶಾರದಾ ಪೀಠದ ಸ್ವಾಮೀಗಳ ಆಗಮನ : ಶಿವಪಾಡಿವರೆಗೆ ಜನಸಾಗರದೊಂದಿಗೆ ಸಾಗಿದ ಶೋಭಯಾತ್ರೆ

ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 22, 2023 ರಂದು ಪ್ರಾರಂಭಗೊಂಡ ಅತಿರುದ್ರ ಮಹಾಯಾಗ ಹತ್ತು ದಿನಗಳನ್ನು ಸಂಪೂರ್ಣವಾಗಿ ಪೂರೈಸಿದ್ದು, ಮಾರ್ಚ್ 04 ರ ಹನ್ನೊಂದನೇ ದಿನದ ಅತಿರುದ್ರ ಮಹಾಯಾಗದಲ್ಲಿ ಮುಂಜಾನೆಯ ಸಕಲ ಪೂಜಾ ಕಾರ್ಯಗಳು ಪೂರ್ಣಗೊಂಡ ಬಳಿಕ ಸಂಜೆ ಶ್ರೀ ಕ್ಷೇತ್ರ ಶಿವಪಾಡಿಗೆ ಶೃಂಗೇರಿ ಶ್ರೀ ಶಾರದಾ ಪೀಠದ ಶ್ರೀಮಜ್ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರ ಬೃಹತ್ ಶೋಭಾಯಾತ್ರೆ ನಡೆಯಿತು.

ವಾದ್ಯ, ಚೆಂಡೆಗಳ ಘೋಷದೊಂದಿಗೆ ಮಣಿಪಾಲದ ಸಿಂಡಿಕೇಟ್ ಸರ್ಕಲ್ ನಿಂದ ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನದವರೆಗೆ ಶೃಂಗೇರಿ ಸ್ವಾಮೀಗಳ ಭವ್ಯ ಮೆರವಣಿಗೆ ಮಾಡಲಾಯಿತು. ಶೃಂಗೇರಿ ಶ್ರೀ ಶಾರದಾ ಪೀಠದ ಸ್ವಾಮೀಗಳ ದರ್ಶನಕ್ಕಾಗಿ ಸಹಸ್ರಾರು ಜನರು ರಸ್ತೆಯ ಬದಿಯಲ್ಲಿ ನಿಂತುಕೊಂಡಿದ್ದರು. ಭಕ್ತಾಭಿಮಾನಿಗಳ ಕಾಲ್ನಡಿಗೆಯಲ್ಲಿ ಸಾಗುತ್ತಿದ್ದ ಶೋಭಯಾತ್ರೆಯಲ್ಲಿ 3 ವರ್ಷದ ಮಗುವೊಂದು ತಲೆ ಮೇಲೆ ಕೇಸರಿ ಪೇಟವನ್ನು ಧರಿಸಿ ಶೃಂಗೇರಿ ಶಾರದಾ ಪೀಠದ ಸ್ವಾಮೀಗಳ ದಿವ್ಯ ಶೋಭಯಾತ್ರೆಯ ಕಾಲ್ನಡಿಗೆಯಲ್ಲಿ ತಾನೂ ಭಾಗಿಯಾಗಿ ನೆರೆದವರ ಗಮನ ಸೆಳೆಯಿತು.


ಈ ಶೋಭಯಾತ್ರೆಯಲ್ಲಿ ಅತಿರುದ್ರ ಮಹಾಯಾಗ ಸಮಿತಿಯ ಅಧ್ಯಕ್ಷರಾದ ಶಾಸಕ ಕೆ. ರಘುಪತಿ ಭಟ್, ಶ್ರೀ ಉಮಾಮಹೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರಾದ ಮಹೇಶ್ ಠಾಕೂರ್, ಮಹಾಯಾಗದ ಸರ್ವ ಸದಸ್ಯರು, ಶ್ರೀ ಉಮಾಮಹೇಶ್ವರ ದೇವಸ್ಥಾನದ ಟ್ರಸ್ಟಿಗಳು ಮತ್ತು ಭಗವದ್ ಭಕ್ತರು ಸಾಕ್ಷಿಯಾದರು. ಶ್ರೀಮಜ್ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರು ಶಿವಪಾಡಿಗೆ ಆಗಮಿಸಿದ ಬಳಿಕ ಸಭಾಮಂಟಪದಲ್ಲಿ ಧೂಳಿಪಾದ ಪೂಜೆ ನೆರವೇರಿತು.

