ಮಂಗಳೂರಿನ ವಾಮಂಜೂರಿನ ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜು (ಸ್ವಾಯತ್ತ), ಇದರ 2026ನೇ ಸಾಲಿನ ಸ್ನಾತಕೋತ್ತರ ಪದವಿ ಪ್ರದಾನ ಸಮಾರಂಭವು ನವೆಂಬರ್ 14, 2026ರಂದು ಕಾಲೇಜಿನ ಕಲಾಂ ಸಭಾಂಗಣದಲ್ಲಿ ನಡೆಯಿತು. ಸಮಾರಂಭದಲ್ಲಿ 120 ಎಂಬಿಎ, 120 ಎಂಸಿಎ ಹಾಗೂ 3 ಎಂಬಿಎ (ಐಇವಿ) ಸೇರಿದಂತೆ ಒಟ್ಟು 243 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಪ್ರಮಾಣಪತ್ರಗಳನ್ನು ಪ್ರದಾನ ಮಾಡಲಾಯಿತು.



ಎನ್ಆರ್ಐ ಉದ್ಯಮಿ ಹಾಗೂ ಸಮಾಜಸೇವಕ ಮೈಕೆಲ್ ಡಿಸೋಜ ಅವರು ಮುಖ್ಯ ಅತಿಥಿಗಳಾಗಿ, ಸ್ವಿಂಕ್ಪೇ ಫಿನ್ಟೆಕ್ ಪ್ರೈವೇಟ್ ಲಿಮಿಟೆಡ್ನ ಅಸೋಸಿಯೇಟ್ ವೈಸ್ ಪ್ರೆಸಿಡೆಂಟ್ ಹಾಗೂ ಕಾಲೇಜಿನ ಹಳೆಯ ವಿದ್ಯಾರ್ಥಿ ಹಿತೇಶ್ ಎನ್. ಕಾಮತ್ ಅವರು ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು. ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಹಾಗೂ ಎಸ್ಜೆಇಸಿ ಅಧ್ಯಕ್ಷರಾದ ಅತಿ ವಂದನೀಯ ಡಾ. ಪೀಟರ್ ಪೌಲ್ ಸಲ್ದಾನ್ಹಾ ಅವರು ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ನಿರ್ದೇಶಕರಾದ ವಂ. ಫಾ. ವಿಲ್ಫ್ರೆಡ್ ಪ್ರಕಾಶ್ ಡಿಸೋಜ ಸ್ವಾಗತಿಸಿದರು. ಪ್ರಾಂಶುಪಾಲರಾದ ಡಾ. ರಿಯೋ ಡಿಸೋಜ ಅತಿಥಿಗಳನ್ನು ಪರಿಚಯಿಸಿದರು.





ಗೌರವ ಅತಿಥಿ ಹಿತೇಶ್ ಕಾಮತ್ ಅವರು ತಮ್ಮ ಭಾಷಣದಲ್ಲಿ, ಶೈಕ್ಷಣಿಕ ಅಂಕಗಳು ಉದ್ಯೋಗ ಪ್ರವೇಶಕ್ಕೆ ಸಹಕಾರಿಯಾದರೂ, ಪರಿಶ್ರಮ, ಬದ್ಧತೆ ಮತ್ತು ಸತತ ಪ್ರಯತ್ನಗಳೇ ಯಶಸ್ಸಿನ ದಾರಿ ಎಂದು ತಿಳಿಸಿದರು. ಕೃತಕ ಬುದ್ಧಿಮತ್ತೆಯ ಯುಗದಲ್ಲಿ ತಂತ್ರಜ್ಞಾನವನ್ನು ಅವಲಂಬಿಸುವುದಕ್ಕಿಂತ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಸ್ವತಂತ್ರವಾಗಿ ಆಲೋಚಿಸುವ ಸಾಮರ್ಥ್ಯ ಬೆಳೆಸಿಕೊಳ್ಳುವಂತೆ ಪದವೀಧರರಿಗೆ ಕರೆ ನೀಡಿದರು.


ಮುಖ್ಯ ಅತಿಥಿ ಮೈಕೆಲ್ ಡಿಸೋಜ ಅವರು ಪದವೀಧರರನ್ನು ಅಭಿನಂದಿಸಿ, ಜೀವನದಲ್ಲಿ ವಿನಯ, ತಾಳ್ಮೆ ಮತ್ತು ದೃಢಸಂಕಲ್ಪದಿಂದ ಮುನ್ನಡೆಯುವಂತೆ ಸಲಹೆ ನೀಡಿದರು. ಪದವಿ ವೃತ್ತಿಜೀವನದ ಆರಂಭವಷ್ಟೇ ಆಗಿದ್ದು, ವ್ಯಕ್ತಿತ್ವ ಮತ್ತು ಉತ್ತಮ ಮನೋಭಾವವೇ ಭವಿಷ್ಯವನ್ನು ರೂಪಿಸುತ್ತವೆ ಎಂದು ಹೇಳಿದರು. ವಿಫಲತೆಗಳಿಂದ ಪಾಠ ಕಲಿಯುವ ಹಾಗೂ ಆರ್ಥಿಕ ಶಿಸ್ತನ್ನು ಬೆಳೆಸಿಕೊಳ್ಳುವ ಮಹತ್ವವನ್ನು ತಿಳಿಸಿದರು.

ಸಮಾರಂಭದಲ್ಲಿ ಪದವೀಧರರಿಗೆ ಪದವಿ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಬಳಿಕ ಪ್ರಾಂಶುಪಾಲರಾದ ಡಾ. ರಿಯೋ ಡಿ’ಸೋಜಾ ಅವರು ಪದವೀಧರರಿಗೆ ಪ್ರಮಾಣವಚನ ಬೋಧಿಸಿದರು. ಎಂಬಿಎ ವಿಭಾಗದಿಂದ ರಿಯಾ ಮೊನಾಲಿಸಾ ಡಿ’ಸೋಜಾ ಹಾಗೂ ಎಂಸಿಎ ವಿಭಾಗದಿಂದ ಚೈತನ್ಯ ಪಿ. ಪದವೀಧರರ ಪರವಾಗಿ ಮಾತನಾಡಿ, ಕಾಲೇಜು, ಬೋಧಕವರ್ಗ ಹಾಗೂ ಪೋಷಕರಿಗೆ ಕೃತಜ್ಞತೆ ಸಲ್ಲಿಸಿದರು.
ಅಧ್ಯಕ್ಷೀಯ ಭಾಷಣ ಮಾಡಿದ ಬಿಷಪ್ ಅತಿ ವಂದನೀಯ ಡಾ. ಪೀಟರ್ ಪೌಲ್ ಸಲ್ದಾನ್ಹಾ ಅವರು, ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಪ್ರೀತಿ, ದಯೆ, ಉತ್ತಮ ಗುಣಗಳು ಮತ್ತು ಪರಸ್ಪರ ಸಹಕಾರದ ಮೌಲ್ಯಗಳು ಎಂದಿಗೂ ಶಾಶ್ವತ ಎಂದು ಹೇಳಿದರು. ‘ಉಬುಂಟು’ ಎಂಬ ಆಫ್ರಿಕನ್ ತತ್ವವನ್ನು ಉಲ್ಲೇಖಿಸಿ, ಪರಸ್ಪರ ಸಂಬಂಧ, ಗೌರವ ಮತ್ತು ಸಾಮೂಹಿಕ ಬೆಳವಣಿಗೆಯ ಮಹತ್ವವನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಪಿಎಚ್.ಡಿ ಪದವಿ ಪಡೆದ ಬೋಧಕ ಸದಸ್ಯರನ್ನು, ಶೈಕ್ಷಣಿಕ ಹಾಗೂ ಕ್ರೀಡಾ ಸಾಧಕರನ್ನು ಮತ್ತು ವಿಶ್ವವಿದ್ಯಾಲಯದ ರ್ಯಾಂಕ್ ವಿಜೇತರನ್ನು ಗೌರವಿಸಲಾಯಿತು. ಮುಖ್ಯ ಅತಿಥಿ ಹಾಗೂ ಗೌರವ ಅತಿಥಿಗಳನ್ನು ಸನ್ಮಾನಿಸಲಾಯಿತು. ವಂ. ಫಾ. ಕೆನ್ನೆತ್ ಆರ್. ಕ್ರಾಸ್ತಾ, ಸಹಾಯಕ ನಿರ್ದೇಶಕರು, ವಿವಿಧ ಡೀನ್ಗಳು, ವಿಭಾಗ ಮುಖ್ಯಸ್ಥರು, ಸಂಚಾಲಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಚಾಲಕಿ ಡಾ. ಸುಮಂಗಲಾ ಎನ್. ವಂದಿಸಿದರು.
ಅನಂತ್ ರೋಹಿತ್ ಭಟ್ ಹಾಗೂ ಐಶ್ವರ್ಯ ಆರ್. ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರಗೀತೆಯೊಂದಿಗೆ ಸಮಾರಂಭ ಮುಕ್ತಾಯಗೊಂಡಿತು.
2026ನೇ ಸಾಲಿನ ಎಲ್ಲಾ ಪದವೀಧರರ ಉಜ್ವಲ ಭವಿಷ್ಯಕ್ಕೆ ಎಸ್ಜೆಇಸಿ ಶುಭ ಹಾರೈಸಿತು.

