ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ವಾರ್ಷಿಕ ತಾಂತ್ರಿಕ ಮತ್ತು ಸಾಂಸ್ಕೃತಿಕ ಉತ್ಸವ ‘ಸಿನರ್ಜಿಯಾ–2026’ ರ ಎರಡನೇ ದಿನವಾದ ನವೆಂಬರ್ 13ರಂದು ಕಾಲೇಜಿನ ಆವರಣದಲ್ಲಿ ‘ಏರೋಫಿಲಿಯಾ–2026’ ಏರ್ ಶೋ ಕಾರ್ಯಕ್ರಮವು ಅತ್ಯಂತ ಆಕರ್ಷಕವಾಗಿ ನಡೆಯಿತು.

ವಿದ್ಯಾರ್ಥಿಗಳು ತಮ್ಮ ಸೃಜನಶೀಲತೆ, ತಾಂತ್ರಿಕ ಕೌಶಲ್ಯ ಮತ್ತು ವೈಜ್ಞಾನಿಕ ಜ್ಞಾನವನ್ನು ಬಳಸಿ ಸ್ವತಃ ವಿನ್ಯಾಸಗೊಳಿಸಿ ತಯಾರಿಸಿದ ವಿವಿಧ ಮಾದರಿಯ ವಿಮಾನಗಳು ಆಕಾಶದಲ್ಲಿ ಹಾರಾಡಿ ನೆರೆದಿದ್ದ ಪ್ರೇಕ್ಷಕರ ಗಮನ ಸೆಳೆದವು. ವಿಮಾನಗಳ ಹಾರಾಟ, ಅವುಗಳ ವಿನ್ಯಾಸ ಮತ್ತು ಕಾರ್ಯವೈಖರಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ವಿಶೇಷ ಆಸಕ್ತಿ ಮತ್ತು ಕುತೂಹಲ ಮೂಡಿಸಿತು.
ಟಿಫ್ ಲ್ಯಾಬ್ಸ್ (TIF Labs) ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಡೇನಿಯಲ್ ಡಿಸೋಜಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳ ಪ್ರಯತ್ನವನ್ನು ಶ್ಲಾಘಿಸಿದರು ಹಾಗೂ ಶುಭ ಹಾರೈಸಿದರು.
ಸುಮಾರು 3,000 ವಿದ್ಯಾರ್ಥಿಗಳು ಈ ರೋಮಾಂಚಕ ಏರ್ ಶೋಗೆ ಸಾಕ್ಷಿಯಾದರು. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ನವೀನ ಚಿಂತನೆ ಮತ್ತು ಸೃಜನಶೀಲತೆಯನ್ನು ಬೆಳೆಸುವುದರ ಜೊತೆಗೆ, ಏರೋಸ್ಪೇಸ್ ಕ್ಷೇತ್ರ ಸೇರಿದಂತೆ ವಿಜ್ಞಾನ ಮತ್ತು ತಂತ್ರಜ್ಞಾನದ ವಿವಿಧ ಕ್ಷೇತ್ರಗಳ ಬಗ್ಗೆ ಆಸಕ್ತಿ ಮೂಡಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು.
ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದ ಜ್ಞಾನವನ್ನು ಪ್ರಾಯೋಗಿಕವಾಗಿ ಅನ್ವಯಿಸುವ ಅವಕಾಶ ಕಲ್ಪಿಸಿದ ಏರೋಫಿಲಿಯಾ–2026 ಕಾರ್ಯಕ್ರಮವು ಸಿನರ್ಜಿಯಾ–2026ರ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿ ಮೂಡಿಬಂದಿತು.

