HomeFresh Newsಕ್ಲಸ್ಟರ್ ಕಿಚನ್ ವಿರೋಧಿಸಿ ಬಿಸಿಯೂಟ ನೌಕರರಿಂದ ರಾಜ್ಯಾದ್ಯಂತ ಪ್ರತಿಭಟನೆ

ಕ್ಲಸ್ಟರ್ ಕಿಚನ್ ವಿರೋಧಿಸಿ ಬಿಸಿಯೂಟ ನೌಕರರಿಂದ ರಾಜ್ಯಾದ್ಯಂತ ಪ್ರತಿಭಟನೆ

ಕ್ಲಸ್ಟರ್ ಕಿಚನ್ ವಿರೋಧಿಸಿ, ಬಿಸಿಯೂಟದ ಸಂಪೂರ್ಣ ಜವಾಬ್ದಾರಿಯನ್ನು ಬಿಸಿಯೂಟ ನೌಕರರಿಗೆ ವಹಿಸಲು ಒತ್ತಾಯಿಸಿ,ಕ್ರಮವತ್ತಾಗಿ ತಿಂಗಳ ವೇತನವನ್ನು ಪಾವತಿಸಲು ಆಗ್ರಹಿಸಿ ಇಂದು(25-11-2026) ರಾಜ್ಯಾದ್ಯಂತ ಬಿಸಿಯೂಟ ನೌಕರರು ಮುಷ್ಕರ ನಡೆಸಿ ಪ್ರತಿಭಟನೆ ನಡೆಸಬೇಕೆಂಬ ತೀರ್ಮಾನದ ಮೇರೆಗೆ ಉಳ್ಳಾಲ ತಾಲೂಕಿನ ನೂರಾರು ಸಂಖ್ಯೆಯ ಬಿಸಿಯೂಟ ನೌಕರರು ಉಳ್ಳಾಲ ತಾಲೂಕು ಕಚೇರಿಯೆದುರು ಆಕ್ರೋಶಭರಿತರಾಗಿ ಘೋಷಣೆಗಳನ್ನು ಕೂಗುವ ಮೂಲಕ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು, ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಒಂದಾದ ಬಿಸಿಯೂಟದಲ್ಲಿ ಕಳೆದ ಹಲವಾರು ವರ್ಷಗಳಿಂದ ದುಡಿಯುತ್ತಿರುವ ಸಾವಿರಾರು ನೌಕರರನ್ನು ಅತ್ಯಂತ ಹೀನಾಯವಾಗಿ ನೋಡಿಕೊಳ್ಳಲಾಗುತ್ತಿದೆ. ಗೌರವಧನದ ಹೆಸರಿನಲ್ಲಿ ಅಗೌರವ, ಅಮಾನವೀಯತೆಯನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪ್ರದರ್ಶಿಸುತ್ತಿದೆ. ಮಹಿಳೆಯರನ್ನು ಮಾತೆ ಮಾತೆ ಎಂದು ಕೊಂಡಾಡುವ ಸರಕಾರಗಳೇ ಮಹಿಳಾ ಕಾರ್ಮಿಕರನ್ನು ತೀವ್ರ ರೀತಿಯಲ್ಲಿ ಶೋಷಿಸುತ್ತಿದೆ. ಕಠಿಣ ಪರಿಶ್ರಮದಿಂದ ದುಡಿಯುವ ಕಾರ್ಮಿಕರಿಗೆ ಬೇಕಾಗಿರುವುದು ಗೌರವಧನವಲ್ಲ,ಬದಲಿಗೆ ಗೌರವಯುತವಾದ ವೇತನ. ಅದನ್ನೂ ಕೂಡ ತಿಂಗಳುಗಟ್ಟಲೆಯಿಂದ ನೀಡದೆ ಸತಾಯಿಸುತ್ತಿರುವುದು ಯಾವ ನ್ಯಾಯ..? 16 ವರ್ಷಗಳ ಹಿಂದೆ ಶಿಕ್ಷಣ ಇಲಾಖೆಯೇ ಯಾವುದೇ ಕಾರಣಕ್ಕೂ ಬಿಸಿಯೂಟ ಯೋಜನೆಯನ್ನು ಖಾಗೀಯವರಿಗೆ ನೀಡಬಾರದು ಎಂದು ಸುತ್ತೋಲೆ ಹೊರಡಿಸಿದ್ದರೂ ಇಂದು ಸರಕಾರವೇ ಖಾಸಗೀಕರಣದತ್ತ ಬಿಸಿಯೂಟ ಯೋಜನೆಯನ್ನು ಕೊಂಡೊಯ್ಯುತ್ತಿದೆ.ಅದರ ಪರಿಣಾಮವೇ ಕ್ಲಸ್ಟರ್ ಕಿಚನ್ ಹೆಸರಿನಲ್ಲಿ ಬಿಸಿಯೂಟ ನೌಕರರ ಬದುಕಿಗೆ ಕೊಳ್ಳಿ ಇಡಲು ಸರಕಾರವೇ ಮುಂದಾಗಿದೆ ಎಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬಿಸಿಯೂಟ ನೌಕರರ ಸಂಘಟನೆಯ ಜಿಲ್ಲಾ ಗೌರವಾಧ್ಯಕ್ಷರಾದ ಪದ್ಮಾವತಿ ಶೆಟ್ಟಿಯವರು,ಬಿಸಿಯೂಟ ನೌಕರರ ಸಂಕಷ್ಟವನ್ನು ಹಾಗೂ ಕೇಂದ್ರ ರಾಜ್ಯ ಸರಕಾರಗಳು ಮಾಡುತ್ತಿರುವ ಅನ್ಯಾಯಗಳನ್ನು ಎಳೆಎಳೆಯಾಗಿ ಬಿಡಿಸಿ ಹೇಳುತ್ತಾ,ಚುನಾವಣಾ ಪೂರ್ವ ಕಾಂಗ್ರೆಸ್ ಹೇಳಿದ ಮಾತಿನಂತೆ ಬಿಸಿಯೂಟ ನೌಕರರ ವೇತನವನ್ನು ರೂ.7000/-ದಷ್ಟಾದರೂ ಹೆಚ್ಚಳ ಮಾಡಬೇಕು, ವೇತನವನ್ನು ಯಾವುದೇ ಕಾರಣಕ್ಕೂ ತಡಮಾಡದೆ ಕ್ರಮವತ್ತಾಗಿ ಪಾವತಿಯಾಗಬೇಕು.ಕ್ಲಸ್ಟರ್ ಕಿಚನ್ ಕೈಬಿಟ್ಟು ಬಿಸಿಯೂಟ ನೌಕರರಿಗೆ ಜವಾಬ್ದಾರಿಯನ್ನು ನೀಡಬೇಕು.ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ತೀವ್ರ ರೀತಿಯ ಪರಿಣಾಮವನ್ನು ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದರು.

ಬಿಸಿಯೂಟ ನೌಕರರ ಹೋರಾಟವನ್ನು ಬೆಂಬಲಿಸಿ ಮಾತನಾಡಿದ CITU ಜಿಲ್ಲಾ ನಾಯಕರಾದ ಜಯಂತ ನಾಯಕ್, ಇಬ್ರಾಹಿಂ ಅಂಬ್ಲಮೊಗರು, ಪ್ರಮೋದಿನಿ, ವಿಲಾಸಿನಿಯವರು ಮಾತನಾಡಿ ವಿವಿಧ ವಿಭಾಗದ ಕಾರ್ಮಿಕರ ಸಂಪೂರ್ಣ ಬೆಂಬಲವನ್ನು ಸಾರಿದರು.

ಪ್ರತಿಭಟನೆಯ ನೇತೃತ್ವವನ್ನು ಬಿಸಿಯೂಟ ನೌಕರರ ಸಂಘಟನೆಯ ಉಳ್ಳಾಲ ತಾಲೂಕು ಮುಖಂಡರಾದ ರತ್ನಮಾಲ,ಬಬಿತಾ,ಲತಾ, ವಿದ್ಯಾ,ಗಾಯತ್ರಿ, ನಳಿನಿ ಮುಂತಾದವರು ವಹಿಸಿದ್ದರು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments