HomeFresh Newsಸಂತ ಅಲೋಶಿಯಸ್ ಗೊನ್ಝಾಗ ಶಾಲೆಯಲ್ಲಿ ‘ಟ್ಯಾಲೆಂಟ್ ಥ್ರಿಲ್ಸ್ – ಗೊನ್ಝಾಗಗಾಟ್ ಟ್ಯಾಲೆಂಟ್’ ಪ್ರತಿಭಾ ಸಂಭ್ರಮ

ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯಲ್ಲಿ ‘ಟ್ಯಾಲೆಂಟ್ ಥ್ರಿಲ್ಸ್ – ಗೊನ್ಝಾಗಗಾಟ್ ಟ್ಯಾಲೆಂಟ್’ ಪ್ರತಿಭಾ ಸಂಭ್ರಮ

ಮಂಗಳೂರು: ವಿದ್ಯಾರ್ಥಿಗಳಲ್ಲಿರುವ ಸೃಜನಶೀಲತೆ, ಆತ್ಮವಿಶ್ವಾಸ ಮತ್ತು ವೈವಿಧ್ಯಮಯ ಪ್ರತಿಭೆಗಳಿಗೆವೇದಿಕೆ ಕಲ್ಪಿಸುವ ಉದ್ದೇಶದಿಂದ ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯಲ್ಲಿ ‘ಟ್ಯಾಲೆಂಟ್ ಥ್ರಿಲ್ಸ್ – ಗೊನ್ಝಾಗ ಗಾಟ್ ಟ್ಯಾಲೆಂಟ್’ ಪ್ರತಿಭಾ ಸಂಭ್ರಮಕ್ಕೆ ಅದ್ದೂರಿ ಚಾಲನೆ ನೀಡಲಾಯಿತು. ಒಂದನೇ ತರಗತಿಯಿಂದ ಹನ್ನೆರಡನೇ ತರಗತಿಯವರೆಗಿನ ವಿದ್ಯಾರ್ಥಿಗಳ ಪ್ರತಿಭೆಗಳನ್ನು ಅನಾವರಣಗೊಳಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.


ಶಾಲೆಯ ಪ್ರಾಂಶುಪಾಲರಾದ ವಂ. ಫಾ. ರೋಹನ್ ಡಿ’ಅಲ್ಮೇಡಾ ಎಸ್‌ .ಜೆ ಅವರ ಉಪಸ್ಥಿತಿಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ದೂರದರ್ಶನ ನಿರೂಪಕ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕಾರ್ಯಕ್ರಮ ನಿರೂಪಕ ಮತ್ತು ನೃತ್ಯ ಸಂಯೋಜಕರಾದ ಶ್ರೀ ವಿ.ಜೆ. ಡಿಕ್ಸನ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.

ಉಪ ಪ್ರಾಂಶುಪಾಲೆಯರಾದ ಶ್ರೀಮತಿ ಲಾರೆಲ್ ಡಿಸೋಜಾ ಹಾಗೂ ಶ್ರೀಮತಿ ಅಪರ್ಣಾ ಸುರೇಶ್, ಶೈಕ್ಷಣಿಕ ಸಂಯೋಜಕಿಯರಾದ ಶ್ರೀಮತಿ ದೀಪಾ ಕರ್ಕಡ, ಶ್ರೀಮತಿ ದೀಪ್ತಿ ಸಹನಾ ಕರ್ಕಡ ಹಾಗೂ ಶ್ರೀಮತಿ ಕ್ಯಾರಲ್ ರೋಡ್ರಿಗಸ್, ಪೋಷಕ-ಶಿಕ್ಷಕ ಕಾರ್ಯಕಾರಿ ಸಮಿತಿಯ ಉಪಾಧ್ಯಕ್ಷೆಯಾದ ಶ್ರೀಮತಿ ರೀನಾ ನೊರೊನ್ಹಾ, ಜಂಟಿ ಕಾರ್ಯದರ್ಶಿ ಶ್ರೀಮತಿ ಕ್ವಿನ್ನಿ ಫೆರ್ನಾಂಡಿಸ್ ಹಾಗೂ ಕಾರ್ಯಕ್ರಮದ ಸಂಯೋಜಕಿಯರು ಉಪಸ್ಥಿತರಿದ್ದರು. ಹತ್ತನೇ ತರಗತಿಯ ದಿಥಾನ್ ಫೆರ್ನಾಂಡಿಸ್ ಕಾರ್ಯಕ್ರಮವನ್ನು ನಿರೂಪಿಸಿದರು.


ಮುಖ್ಯ ಅತಿಥಿ ಶ್ರೀ ವಿ.ಜೆ. ಡಿಕ್ಸನ್ ಅವರು ಶಾಲೆಯು ಪ್ರತಿಭೆಗಳನ್ನು ಗುರುತಿಸಿ ಪೋಷಿಸುವ ವಿಶಿಷ್ಟ ಪರಂಪರೆಯನ್ನು ಶ್ಲಾಘಿಸಿ, ಈ ಸಂಸ್ಥೆಯ ಪ್ರತಿಭಾವಂತರು ಜಾಗತಿಕ ಮಟ್ಟದಲ್ಲಿಯೂ ತಮ್ಮ ಛಾಪು ಮೂಡಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು, ಆತ್ಮವಿಶ್ವಾಸ, ದೃಢಸಂಕಲ್ಪ ಮತ್ತು ಧೈರ್ಯದೊಂದಿಗೆ ಮುನ್ನಡೆಯಬೇಕು ಎಂದು ಪ್ರೇರಣಾದಾಯಕ ಸಂದೇಶ ನೀಡಿದರು.


ಮೂರು ದಿನಗಳ ಈ ಪ್ರತಿಭಾ ಸಂಭ್ರಮದಲ್ಲಿ ವಿವಿಧ ವಯೋಮಾನದ ವಿದ್ಯಾರ್ಥಿಗಳಿಗಾಗಿ ವೈವಿಧ್ಯಮಯ ಸೃಜನಾತ್ಮಕ ಸ್ಪರ್ಧೆಗಳು ಹಾಗೂ ಪ್ರತಿಭಾ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಪ್ರತಿದಿನದ ಸಮಾರೋಪದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಸನ್ಮಾನಿಸಲಾಗುವುದು.


ಸಮಾರೋಪದಲ್ಲಿ ಪ್ರಾಂಶುಪಾಲರಾದ ವಂ. ಫಾ. ರೋಹನ್ ಡಿ’ಅಲ್ಮೇಡಾ ಎಸ್‌ಜೆ ಅವರು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿ, ವಿದ್ಯಾರ್ಥಿಗಳ ಉತ್ಸಾಹಭರಿತ ಪಾಲ್ಗೊಳ್ಳುವಿಕೆ, ಗುಣಮಟ್ಟ ಮತ್ತು ಬದ್ಧತೆಯನ್ನು ಶ್ಲಾಘಿಸಿದರು.


ಕಾರ್ಯಕ್ರಮದ ಯಶಸ್ಸಿಗಾಗಿ ಶ್ರಮಿಸಿದ ಶಿಕ್ಷಕರ ಕಾರ್ಯವನ್ನೂ ಪ್ರಶಂಸಿಸಿದರು. ಶ್ರೀಮತಿ ಜೆವಿಟಾ ಫೆರ್ನಾಂಡಿಸ್ ಅವರು
ವಂದನಾರ್ಪಣೆ ಸಲ್ಲಿಸಿದರು.


‘ಟ್ಯಾಲೆಂಟ್ ಥ್ರಿಲ್ಸ್ – ಗೊನ್ಝಾಗ ಗಾಟ್ ಟ್ಯಾಲೆಂಟ್’ ಕೇವಲ ಪ್ರತಿಭಾ ಸ್ಪರ್ಧೆಯಲ್ಲ, ಅದು ಪ್ರತಿಭೆ, ಆತ್ಮವಿಶ್ವಾಸ, ಧೈರ್ಯ ಮತ್ತು ಅಭಿವ್ಯಕ್ತಿಯ ಸಂತಸದ ಸಂಭ್ರಮವಾಗಿದೆ. ಆತ್ಮವಿಶ್ವಾಸವುಳ್ಳ ಯುವ ಪ್ರತಿಭೆಗಳನ್ನು ರೂಪಿಸಿ, ಅವರ ಕನಸುಗಳಿಗೆ ರೆಕ್ಕೆ ನೀಡುವ ಶಾಲೆಯ ಬದ್ಧತೆಯನ್ನು ಈ ಕಾರ್ಯಕ್ರಮವು ಮತ್ತೊಮ್ಮೆ ಅನಾವರಣಗೊಳಿಸಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments