ನಾಗೂರು: ಯೋಗಬ್ರಹ್ಮ ಪರಮಪೂಜ್ಯ ಶ್ರೀ ಋಷಿಪ್ರಭಾಕರ ಗುರೂಜಿಯವರ ಆಶೀರ್ವಾದದಿಂದ ಹಾಗೂ ಆಚಾರ್ಯ ಕೇಶವಜೀ ಬೆಳ್ನಿ ಅವರ ನೇತೃತ್ವದಲ್ಲಿ ಸಿದ್ಧ ಸಮಾಧಿ ಯೋಗ ಬೈಂದೂರು ವಲಯದ ಸಾಧಕರ ವತಿಯಿಂದ ನಾಗೂರು ಲಲಿತ ಕೃಷ್ಣ ಸಭಾಭವನದಲ್ಲಿ ಗುರುಪೂರ್ಣಿಮೆ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮದಲ್ಲಿ ಭಜನೆ, ಸತ್ಸಂಗ, ಗುರುಗಳ ಮಹತ್ವದ ಕುರಿತು ಪ್ರವಚನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಬಳಿಕ ಶ್ರೀ ದತ್ತಾತ್ರೇಯ ಗುರುಗಳ ಬೆಳ್ಳಿ ಪಾದುಕೆಗೆ ಪಂಚಾಮೃತ ಅಭಿಷೇಕ ಹಾಗೂ ಷೋಡಶೋಪಚಾರ ಮಹಾಮಂಗಳಾರತಿ ನೆರವೇರಿಸಲಾಯಿತು. ನಂತರ ಭಕ್ತರಿಗೆ ತೀರ್ಥಪ್ರಸಾದ ಮತ್ತು ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

ಕಾರ್ಯಕ್ರಮದಲ್ಲಿ ಉಪ್ಪುಂದ ಮಾದಯ್ಯ ಶೆಟ್ರ ಮನೆ ಶ್ರೀ ಸೀತಾರಾಮ ಶೆಟ್ಟಿಯವರು ಭಾಗವಹಿಸಿದ್ದರು. ಕಾರ್ಯಕ್ರಮದ ಯಶಸ್ವಿ ಆಯೋಜನೆಗೆ ಶ್ರೀ ರತ್ನಾಕರ ಉಡುಪ ಅವರು ಸ್ಥಳಾವಕಾಶ ಕಲ್ಪಿಸಿದರು.
ತ್ರಾಸಿ, ಮರವಂತೆ, ಶಿರೂರು ಹಾಗೂ ಮುರುಡೇಶ್ವರದವರೆಗೆ ವಿವಿಧ ಭಾಗಗಳಿಂದ ಆಗಮಿಸಿದ್ದ ಸಿದ್ಧ ಸಮಾಧಿ ಯೋಗದ ಸಾಧಕರು ಹಾಗೂ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


