HomeFresh Newsದುಬೈಯಲ್ಲಿ ಮೊಳಗಲಿದೆ ಯಕ್ಷಗಾನದ ಕಹಳೆ, ಸೆ.27ರಂದು “ಶ್ರೀ ಕೃಷ್ಣ ಲೀಲೆ”ಯೊಂದಿಗೆ ಯಕ್ಷ ಸಂಭ್ರಮ–2026

ದುಬೈಯಲ್ಲಿ ಮೊಳಗಲಿದೆ ಯಕ್ಷಗಾನದ ಕಹಳೆ, ಸೆ.27ರಂದು “ಶ್ರೀ ಕೃಷ್ಣ ಲೀಲೆ”ಯೊಂದಿಗೆ ಯಕ್ಷ ಸಂಭ್ರಮ–2026

ದುಬೈ: ಕರಾವಳಿಯ ಶ್ರೀಮಂತ ಜನಪದ ಕಲಾ ಪರಂಪರೆಯಾದ ಯಕ್ಷಗಾನವನ್ನು ಅನಿವಾಸಿ ಕನ್ನಡಿಗರ ನಡುವೆ ನಿರಂತರವಾಗಿ ಪಸರಿಸುತ್ತಾ ಬಂದಿರುವ ಯಕ್ಷ ಮಿತ್ರರು ದುಬೈ, ಯುಎಇ ಸಂಸ್ಥೆಯ 23ನೇ ವರ್ಷದ “ಯಕ್ಷ ಸಂಭ್ರಮ–2026” ಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ.

ಸಾಂಸ್ಕೃತಿಕ ವೈಭವದ ಈ ವಿಶೇಷ ಕಾರ್ಯಕ್ರಮವು ಸೆಪ್ಟೆಂಬರ್ 27ರಂದು ಮಧ್ಯಾಹ್ನ 1:30ಕ್ಕೆ ದುಬೈ ಜುಮೈರಾದ ಎಮಿರೇಟ್ಸ್ ಥಿಯೇಟರ್‌ನಲ್ಲಿ ನಡೆಯಲಿದ್ದು, ಈ ಬಾರಿ “ಶ್ರೀ ಕೃಷ್ಣ ಲೀಲೆ”* ಎಂಬ ಅದ್ಭುತ ಕನ್ನಡ ಪೌರಾಣಿಕ ಯಕ್ಷಗಾನ ಪ್ರಸಂಗ ಪ್ರೇಕ್ಷಕರನ್ನು ರಂಜಿಸಲಿದೆ.

ಯಕ್ಷ ಮಿತ್ರರು ದುಬೈ ತಂಡದ ರೂವಾರಿ ಶ್ರೀ ಚಿದಾನಂದ ಪೂಜಾರಿ ಅವರ ನೇತೃತ್ವದಲ್ಲಿ ಹಾಗೂ ಯಕ್ಷಗುರು ಶ್ರೀ ಕಿಶೋರ್ ಗಟ್ಟಿ ಉಚ್ಚಿಲ ಅವರ ನಿರ್ದೇಶನದಲ್ಲಿ ಯಕ್ಷಗಾನ ಪ್ರದರ್ಶನ ಮೂಡಿಬರಲಿದೆ. ಕರಾವಳಿಯ ಯಕ್ಷಗಾನದ ಸಾಂಪ್ರದಾಯಿಕ ವೈಭವ, ಪೌರಾಣಿಕ ಕಥನ, ಭಾವಾಭಿನಯ, ವೇಷಭೂಷಣ ಮತ್ತು ಸಂಗೀತದ ಸೊಬಗನ್ನು ದುಬೈ ನೆಲದಲ್ಲಿ ಅನಾವರಣಗೊಳಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ತಾರಾಗಣದೊಂದಿಗೆ ಮನಮೋಹಕ ಯಕ್ಷಗಾನ

“ಶ್ರೀ ಕೃಷ್ಣ ಲೀಲೆ” ಯಕ್ಷಗಾನಕ್ಕೆ ತವರೂರಿನ ಪ್ರಸಿದ್ಧ ಕಲಾವಿದರ ಸಾಥ್ ದೊರೆಯಲಿದೆ. ಖ್ಯಾತ ಭಾಗವತರಾದ ಸತೀಶ್ ಶೆಟ್ಟಿ ಬೊಂದೆಲ್ ಅವರ ಕಂಠಸಿರಿಯಲ್ಲಿ ಭಾಗವತಿಕೆ ಮೂಡಿಬರಲಿದ್ದು, ಚೆಂಡೆ–ಮದ್ದಳೆ ವಾದನದಲ್ಲಿ ಸುಬ್ರಹ್ಮಣ್ಯ ಭಟ್ ದೇಲಾಂತಮಜಲು ಹಾಗೂ ಹಿರಣ್ಣಯ್ಯ ಆಚಾರ್ಯ ಅವರು ಕಲಾರಸಿಕರನ್ನು ರಂಜಿಸಲಿದ್ದಾರೆ.

ಯಕ್ಷಗಾನದ ವೈಭವಕ್ಕೆ ಮತ್ತಷ್ಟು ಮೆರುಗು ನೀಡುವ ವೇಷಭೂಷಣದ ಜವಾಬ್ದಾರಿಯನ್ನು ಪ್ರಸಾದ್ ಕಾಯರ್ ಕಟ್ಟೆ ವಹಿಸಲಿದ್ದಾರೆ. ಇವರೊಂದಿಗೆ ಯಕ್ಷ ಮಿತ್ರರು ದುಬೈ ತಂಡದ ಪ್ರತಿಭಾವಂತ ಹವ್ಯಾಸಿ ಕಲಾವಿದರು ರಂಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕರಾವಳಿಯ ಕಲೆ ದುಬೈಯಲ್ಲಿ ಅನಾವರಣ

ಯಕ್ಷಗಾನವು ಕೇವಲ ಮನರಂಜನೆಯ ಕಲೆಯಲ್ಲ; ಅದು ಕರಾವಳಿ ಕರ್ನಾಟಕದ ಸಂಸ್ಕೃತಿ, ಪೌರಾಣಿಕತೆ, ಸಂಗೀತ, ನೃತ್ಯ, ಸಾಹಿತ್ಯ ಮತ್ತು ಅಭಿನಯವನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಅಪೂರ್ವ ಕಲಾಪ್ರಕಾರವಾಗಿದೆ. ವಿದೇಶದಲ್ಲಿ ನೆಲೆಸಿರುವ ಕನ್ನಡಿಗರ ಹೊಸ ಪೀಳಿಗೆಗೆ ಈ ಶ್ರೀಮಂತ ಕಲಾ ಪರಂಪರೆಯನ್ನು ಪರಿಚಯಿಸುವಲ್ಲಿ ಯಕ್ಷ ಮಿತ್ರರು ದುಬೈ ಹಲವು ವರ್ಷಗಳಿಂದ ಮಹತ್ವದ ಪಾತ್ರ ವಹಿಸುತ್ತಿದೆ.

23 ವರ್ಷಗಳ ಸುದೀರ್ಘ ಕಲಾ ಪಯಣದೊಂದಿಗೆ ಯಕ್ಷ ಸಂಭ್ರಮವು ದುಬೈಯ ಕನ್ನಡಿಗರ ಸಾಂಸ್ಕೃತಿಕ ಬದುಕಿನಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದೆ. ಈ ಬಾರಿಯ “ಶ್ರೀ ಕೃಷ್ಣ ಲೀಲೆ” ಪ್ರದರ್ಶನವೂ ಯಕ್ಷಗಾನ ಪ್ರೇಮಿಗಳಿಗೆ ಅಪೂರ್ವ ಕಲಾನುಭವ ನೀಡುವ ನಿರೀಕ್ಷೆ ಮೂಡಿಸಿದೆ.

ಯಕ್ಷಗಾನ ಪ್ರೇಮಿಗಳು, ಕನ್ನಡಾಭಿಮಾನಿಗಳು ಹಾಗೂ ಕಲಾರಸಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ “ಯಕ್ಷ ಸಂಭ್ರಮ–2026”ರ ಸಾಂಸ್ಕೃತಿಕ ವೈಭವವನ್ನು ಸವಿಯುವಂತೆ ಆಯೋಜಕರು ಮನವಿ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments