ಶಿರ್ವ:- ಭಾರತೀಯ ಪರಂಪರೆಯಲ್ಲಿ ಗುರುವಿಗೆ ವಿಶೇಷ ಗೌರವದ ಸ್ಥಾನವಿದೆ. ವಿದ್ಯಾರ್ಥಿಗಳ ಮೂಲ ಸಮಸ್ಯೆಯನ್ನು ಅರಿತು ಅದನ್ನು ವಸ್ತುನಿಷ್ಠವಾಗಿ ಪರಿಹರಿಸುವುದು ಶಿಕ್ಷಕರಿಂದ ಮಾತ್ರ ಸಾಧ್ಯ ಶಿಕ್ಷಣ ಸಂಸ್ಥೆಯ ಉನ್ನತಿಯಲ್ಲಿ ಶಿಕ್ಷಕರ ಪರಿಶ್ರಮ ಪ್ರಮುಖವಾಗಿದೆ. ಉತ್ತಮ ಶಿಕ್ಷಕರಿಂದ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಯ ಜೊತೆಗೆ ಶಿಕ್ಷಣ ಸಂಸ್ಥೆಯ ಕೀರ್ತಿಯೂ ಹೆಚ್ಚಾಗುತ್ತದೆ. ಗುರು ಶಿಷ್ಯರ ನಡುವಿನ ಅವಿನಾಭಾವ ಸಂಬಂದಗಳೇ ವಿದ್ಯಾರ್ಥಿಯ ಜ್ಞಾನಾರ್ಜನೆಗೆ ಪೂರಕ ಎಂದು ಶಿರ್ವ ವಿದ್ಯಾವರ್ಧಕ ಸಂಘದ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಪ್ರೊ.ವೈ.ಭಾಸ್ಕರ ಶೆಟ್ಟಿ ನುಡಿದರು.

ಅವರು ಬಂಟಕಲ್ಲು ರೋಟರಿ ಭವನದಲ್ಲಿ ಶಿರ್ವ ರೋಟರಿ ವತಿಯಿಂದ ಏರ್ಪಡಿಸಿದ ಶಿಕ್ಷಕರ ದಿನಾಚರಣೆ ಸಮಾರಂಭವನ್ನು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಸರ್ವಪಳ್ಳಿ ರಾಧಾಕೃಷ್ಣನ್ ಇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ವಯೋನಿವೃತ್ತಿಹೊಂದಿದ ಶಿಕ್ಷಕರುಗಳಾದ ಶಿರ್ವ ಹಿಂದೂ ಪ.ಪೂ.ಕಾಲೇಜಿನ ಪ್ರಾಚಾರ್ಯ ಭಾಸ್ಕರ ಮೇರ, ಪಡುಬೆಳ್ಳೆ ಶ್ರೀನಾರಾಯಣ ಗುರು ಪ್ರೌಢ ಶಾಲಾ ಶಿಕ್ಷಕಿ ಅರುಂಧತಿ ಪ್ರಭು, ಶಿರ್ವ ಸಂತ ಮೇರಿ ಕಾಲೇಜಿನ ಉಪನ್ಯಾಸಕ ಡಾ.ವಿಟ್ಸಲ್ ನಾಯಕ್, ಪಡುಬಿದ್ರಿ ಕೆ.ಪಿ.ಎಸ್.ನ ನಿವೃತ್ತ ಶಿಕ್ಷಕಿ ಜೆಸಿಂತಾ ಡಿಸೋಜಾ ಇವರನ್ನು ಸನ್ಮಾನಿಸಿ ಮಾತನಾಡುತ್ತ, ತರಗತಿಯ ಎಲ್ಲಾ ವಿದ್ಯಾರ್ಥಿಗಳನ್ನು ಸಮಾನವಾಗಿ ಕಾಣುವಂತಹ ಶಿಕ್ಷಕರು ಅಧಿಕ ಗೌರವಕ್ಕೆ ಪಾತ್ರರಾಗುತ್ತಾರೆ ಎಂದರು.
ಈ ಸಂದರ್ಭದಲ್ಲಿ ಸಮಾರಂಭದಲ್ಲಿ ಉಪಸ್ಥಿತರಿದ್ದ ಇತರ ಶಿಕ್ಷಕರನ್ನೂ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಶಿರ್ವ ರೋಟರಿ ಅಧ್ಯಕ್ಷೆ ಜೆಸಿಂತಾ ಡಿಸೋಜಾ ವಹಿಸಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು.
ಸನ್ಮಾನಿತರನ್ನು ಜೆ.ಕೆ.ಆಳ್ವ, ಹೊನ್ನಯ್ಯ ಶೆಟ್ಟಿಗಾರ್, ಮೌರಿಸ್ ಡೇಸಾ, ಮೈಕಲ್ ಮತಾಯಸ್ ಪರಿಚಯಿಸಿದರು.
ರೋಟರಿ ವಲಯ ಸೇನಾನಿ ವಿಷ್ಣುಮೂರ್ತಿ ಸರಳಾಯ ಶುಭ ಹಾರೈಸಿದರು.
ಹಿರಿಯ ಸದಸ್ಯ ಬಿ.ಪುಂಡಲೀಕ ಮರಾಠ ನಿರೂಪಿಸಿದರು. ಕಾರ್ಯದರ್ಶಿ ವಿಲಿಯಮ್ ಮಚಾದೋ ಧನ್ಯವಾದವಿತ್ತರು.
ಶಿರ್ವ ರೋಟರಿಗೆ ೧೯ ಜಿಲ್ಲಾ ಪ್ರಶಸ್ತಿಗಳು ಹಾಗೂ ಒಂದು ಅಂತಾರಾಷ್ಟ್ರೀಯ ಪ್ರಶಸ್ತಿ ಹಸ್ತಾಂತರ:- ೫೭ ವರ್ಷಗಳ ಸೇವಾ ಇತಿಹಾಸ ಹೊಂದಿರುವ ಶಿರ್ವ ರೋಟರಿ ಸಂಸ್ಥೆಗೆ ೨೦೨೫-೨೬ನೇ ಸಾಲಿನಲ್ಲಿ ಸಾಧಿಸಿದ ಸೇವಾ ಕಾರ್ಯಯೋಜನೆಗಳನ್ನು ಪರಿಗಣಿಸಿ ಅಂತಾರಾಷ್ಟ್ರೀಯ ರೋಟರಿಯಿಂದ “ಕ್ಲಬ್ ಎಕ್ಸಲೆನ್ಸ್ ಅವಾರ್ಡ್” ಹಾಗೂ ನಾಲ್ಕು ಕಂದಾಯ ಜಿಲ್ಲೆಗಳನ್ನು ಒಳಗೊಂಡ ರೋಟರಿ ಅ.ಜಿಲ್ಲೆ.೩೧೮೨ ರಲ್ಲಿ ಸಾಧಿಸಿದ ಸಮಾಜಮುಖಿ ಸೇವಾ ಯೋಜನೆಗಳನ್ನು ಪರಿಗಣಿಸಿ ೧೯ ಜಿಲ್ಲಾ ಅವಾರ್ಡ್‌ಗಳನ್ನು ಈ ಸಂದರ್ಭದಲ್ಲಿ ೨೦೨೫-ಸಾಲಿನ ರೋಟರಿ ವಲಯ ಐದರ ಸಹಾಯಕ ಗವರ್ನರ್ ವಿಶ್ವೇಶ್ ಶೆಣೈ ಹಾಗೂ ವಲಯ ಕಾರ್ಯದರ್ಶಿ ಆಲ್ವಿನ್ ನೇರಿ ಪಿಂಟೊ ಇವರು ನಿಕಟಪೂರ್ವ ಅಧ್ಯಕ್ಷ ವಿಲಿಯಮ್ ಮಚಾದೋ ಹಾಗೂ ಕಾರ್ಯದರ್ಶಿ ಹೊನ್ನಯ್ಯ ಶೆಟ್ಟಿಗಾರ್ ಇವರಿಗೆ ಹಸ್ತಾಂತರಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ರೋಟರಿ ಪ್ರತಿಷ್ಟಾನಕ್ಕೆ ದೇಣಿಗೆ ನೀಡಿದ ರಿಚಾರ್ಡ್ ಪೌಲ್ ಫೆರಾವೊ ಇವರಿಗೆ “ಪೌಲ್ ಹ್ಯಾರಿಸ್ ಫೆಲೊ”ಗೌರವ, ಮತ್ತು ರಫಾಯಲ್ ಮತಾಯಸ್ ಇವರಿಗೆ ಎಂಪಿಹೆಚ್ ಎಫ್ ಗೌರವ ಪ್ರದಾನ ಮಾಡಲಾಯಿತು.


