ಉಳ್ಳಾಲ: ಬಿಪರ್ ಜಾಯ್ ಚಂಡಮಾರುತ: ಬಿರುಸುಗೊಂಡ ಸಮುದ್ರದ ಅಲೆ, ಬೀಚ್‌ಗೆ ತೆರಳದಂತೆ ಮುನ್ನೆಚ್ಚರಿಕೆ

ಉಳ್ಳಾಲ: ಅರಬ್ಬೀ ಸಮುದ್ರದಲ್ಲಿ ಬಿಪರ್ ಜಾಯ್ ಚಂಡಾಮಾರುತ ಹಿನ್ನೆಲೆಯಲ್ಲಿ ಉಳ್ಳಾಲ, ಸೋಮೇಶ್ವರ, ಉಚ್ಚಿಲ ಸಮುದ್ರತೀರದಲ್ಲಿ ಸಮುದ್ರದ ಅಲೆಗಳ ಅಬ್ಬರ ಇಂದು ನಸುಕಿನಿಂದ ಹೆಚ್ಚಾಗಿದೆ.

ಜಿಲ್ಲಾಡಳಿತದ ಆದೇಶದಂತೆ ಉಳ್ಳಾಲ, ಸೋಮೇಶ್ವರ ಸಮುದ್ರ ತೀರದಲ್ಲಿ ಬರುವ ಪ್ರವಾಸಿಗರನ್ನು ಬಂದೋಬಸ್ತ್ ನಲ್ಲಿರುವ ಹೋಂಗಾರ್ಡ್ಸ್ ವಾಪಸ್ಸು ಕಳುಹಿಸುತ್ತಿದ್ದಾರೆ. ಇಂದು ನಸುಕಿನಿಂದ ಚಂಡಾಮಾರುತದ ಪ್ರಭಾವ ಉಳ್ಳಾಲದ ಸಮುದ್ರ ತೀರದ ಪ್ರದೇಶಗಳಿಗೆ ಗೋಚರಿಸಲು ಆರಂಭವಾಗಿದೆ. ಬೃಹತ್ ಗಾತ್ರದ ಅಲೆಗಳು ಸಮುದ್ರದ ಅಂಚಿಗೆ, ಬಂಡೆಕಲ್ಲುಗಳಿಗೆ ಬಹುವೇಗಗಳಲ್ಲಿ ಅಪ್ಪಳಿಸುತ್ತಿದೆ. ಉಳ್ಳಾಲದ ಕೋಟೆಪುರ, ಕೋಡಿ, ಮೊಗವೀರ ಪಟ್ಣ, ಕೈಕೋ, ಹಿಲೆರಿಯಾನಗರ, ಸುಭಾಷನಗರ, ಕೈಕೊ, ಸಮ್ಮರ್ ಸ್ಯಾಂಡ್, ಸೋಮೇಶ್ವರ, ಉಚ್ಚಿಲ, ಬಟ್ಟಂಪಾಡಿ ಸಮುದ್ರ ತೀರದ ಜನರಿಗೆ ಸ್ಥಳೀಯಾಡಳಿತ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ. ಮುಂಜಾಗ್ರತಾ ಕ್ರಮವಾಗಿ ಸ್ಥಳೀಯ ಠಾಣಾ ಪೊಲೀಸರು, ಹೋಂಗಾರ್ಡ್ಸ್ ಸ್ಥಳದಲ್ಲಿ ನಿಯೋಜಿಸಲಾಗಿದೆ. ಸಮುದ್ರ ತೀರಕ್ಕೆ ಬರುವ ಪ್ರವಾಸಿಗರನ್ನು ವಾಪಸ್ಸು ಕಳುಹಿಸಲಾಗುತ್ತಿದೆ.

ಅರಬ್ಬಿ ಸಮುದ್ರದಲ್ಲಿ ರೂಪುಗೊಳ್ಳುತ್ತಿರುವ ಬಿಪರ್‌ ಜಾಯ್ ಎಂಬ ಚಂಡ ಮಾರುತ, ಉತ್ತರ ದಿಕ್ಕಿನತ್ತ ಚಲಿಸಿದರೆ ಗೋವಾ, ಮುಂಬೈ ಕರಾವಳಿಗೆ ಅಪ್ಪಳಿಸಲಿದೆ. ಜೊತೆಯಲ್ಲೇ ಕೇರಳದಿಂದ ಮಹಾರಾಷ್ಟ್ರದ ಸಾಗರ ತೀರದ ಉದ್ದಕ್ಕೂ ಭಾರೀ ಮಳೆ ಆಗಲಿದೆ. ಕರ್ನಾಟಕದ ಕರಾವಳಿಯಲ್ಲಿ ಜೂನ್ 8 ರಿಂದ ಜೂನ್ 10ರವರೆಗೆ ಪ್ರಕ್ಷುಬ್ಧ ವಾತಾವರಣ ಇರಲಿದೆ. ಚಂಡಮಾರುತಕ್ಕೆ ಬಿಪರ್‌ಜಾಯ್ ಎಂಬ ಹೆಸರನ್ನು ಬಾಂಗ್ಲಾ ದೇಶ ಸೂಚಿಸಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿತ್ತು.

Related Posts

Leave a Reply

Your email address will not be published.