HomeFresh Newsನಿನ್ನಿಕಲ್ಲು ಪಾದೆ ಅಭಿವೃದ್ಧಿ ಸಮಿತಿಗೆ ವಿಜಿತ್ ಕುಮಾರ್ ಶೆಟ್ಟಿ ಸಂಚಾಲಕರಾಗಿ ನೇಮಕ

ನಿನ್ನಿಕಲ್ಲು ಪಾದೆ ಅಭಿವೃದ್ಧಿ ಸಮಿತಿಗೆ ವಿಜಿತ್ ಕುಮಾರ್ ಶೆಟ್ಟಿ ಸಂಚಾಲಕರಾಗಿ ನೇಮಕ

ಪಡುಬಿದ್ರಿ: ತುಳುನಾಡಿನ ಧಾರ್ಮಿಕ, ಸಾಂಸ್ಕೃತಿಕ ಹಾಗೂ ನೈಸರ್ಗಿಕ ಪರಂಪರೆಯ ಪ್ರಮುಖ ತಾಣವಾಗಿರುವ ನಿನ್ನಿಕಲ್ಲು ಪಾದೆಯ ಅಭಿವೃದ್ಧಿ ಮತ್ತು ಸಂರಕ್ಷಣೆಗೆ ಮತ್ತಷ್ಟು ವೇಗ ನೀಡುವ ಉದ್ದೇಶದಿಂದ ತುಳುವರ್ಲ್ಡ್ ಫೌಂಡೇಶನ್, ಕಟೀಲ್ ವತಿಯಿಂದ ವಿಜಿತ್ ಕುಮಾರ್ ಶೆಟ್ಟಿ ದೊಡ್ಡಮನೆ, ಕೊರಂಗ್ರಪಾಡಿ ಅವರನ್ನು ನಿನ್ನಿಕಲ್ಲು ಪಾದೆ ಅಭಿವೃದ್ಧಿ ಸಮಿತಿಯ ಸಂಚಾಲಕರಾಗಿ ನೇಮಕ ಮಾಡಲಾಗಿದೆ.
ಈ ನೇಮಕವನ್ನು ತುಳುವರ್ಲ್ಡ್ ಫೌಂಡೇಶನ್‌ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯಲ್ಲಿ ಫೌಂಡೇಶನ್‌ನ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು, ಕಾರ್ಯದರ್ಶಿ ವಸಂತ ರೈ ಕುತ್ತೇತ್ತೂರು, ಪ್ರಧಾನ ಸಂಚಾಲಕ ಪ್ರಮೋದ್ ಸಪ್ರೆ, ನಿರ್ದೇಶಕ ಡಾ. ರಾಜೇಶ್ ಕೃಷ್ಣ ಆಳ್ವ, ತುಳುವ ಮಹಾಸಭೆ ಕೇಂದ್ರೀಯ ಸಮಿತಿ ಅಧ್ಯಕ್ಷ ಡಾ. ಅವಿನ್ ಬಿ.ಆರ್. ಆಳ್ವ, ಕೇಂದ್ರೀಯ ಸಮಿತಿ ಕಾರ್ಯದರ್ಶಿ ಅರವಿಂದ್ ಬೆಲ್ಚಾಡ ಹಾಗೂ ಕೇಂದ್ರೀಯ ಸಮಿತಿ ಸಂಚಾಲಕ ವಿಶ್ವನಾಥ ಆಚಾರ್ಯ ಉಪಸ್ಥಿತರಿದ್ದರು.
ವಿಜಿತ್ ಕುಮಾರ್ ಶೆಟ್ಟಿ ಅವರು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಿ.), ಉಡುಪಿ ಇದರ ಅಧ್ಯಕ್ಷರಾಗಿದ್ದು, ಉಡುಪಿ ಗ್ರಾಮೀಣ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟಬಲ್ ಟ್ರಸ್ಟ್‌ನ ಖಜಾಂಜಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಮಾಜಿಕ, ಧಾರ್ಮಿಕ ಹಾಗೂ ಸಂಘಟನಾ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅವರು ವಿವಿಧ ಸಮಾಜಮುಖಿ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದಾರೆ.
ನಿನ್ನಿಕಲ್ಲು ಪಾದೆಯ ಅಭಿವೃದ್ಧಿ, ಸಂರಕ್ಷಣೆ ಹಾಗೂ ಸಮಗ್ರ ಅಭ್ಯುದಯಕ್ಕಾಗಿ ಅಗತ್ಯ ಕಾರ್ಯಕ್ರಮಗಳನ್ನು ರೂಪಿಸುವುದು, ಸ್ಥಳೀಯರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಕಾರವನ್ನು ಸಂಘಟಿಸುವುದು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಸಮನ್ವಯಗೊಳಿಸುವ ಜವಾಬ್ದಾರಿಯನ್ನು ನೂತನ ಸಂಚಾಲಕರಾಗಿ ವಿಜಿತ್ ಕುಮಾರ್ ಶೆಟ್ಟಿ ಅವರು ನಿರ್ವಹಿಸಲಿದ್ದಾರೆ.
ನವೆಂಬರ್ 2, 3 ಮತ್ತು 4ರಂದು ನಿನ್ನಿಕಲ್ಲು ಪಾದೆಯಲ್ಲಿ ನಡೆಯಲಿರುವ ಅಷ್ಟಮಂಗಳ ಚಿಂತನೆಯ ಹಿನ್ನೆಲೆಯಲ್ಲಿ ಈ ನೇಮಕವು ವಿಶೇಷ ಮಹತ್ವವನ್ನು ಪಡೆದುಕೊಂಡಿದೆ. ನಿನ್ನಿಕಲ್ಲು ಪಾದೆಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವವನ್ನು ಮತ್ತಷ್ಟು ಎತ್ತಿಹಿಡಿಯುವುದರೊಂದಿಗೆ, ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಮತ್ತು ಸಂರಕ್ಷಣಾ ಕಾರ್ಯಗಳಿಗೆ ಸೂಕ್ತ ರೂಪುರೇಷೆ ರೂಪಿಸುವ ನಿಟ್ಟಿನಲ್ಲಿ ಅಷ್ಟಮಂಗಳ ಚಿಂತನೆ ನಡೆಯಲಿದೆ.
ಈ ಸಂದರ್ಭದಲ್ಲಿ ನಿನ್ನಿಕಲ್ಲು ಪಾದೆಯ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ವಿಚಾರಗಳ ಕುರಿತು ಚಿಂತನೆ ನಡೆಯಲಿದ್ದು, ಅದರ ಮುಂದುವರಿದ ಕಾರ್ಯಯೋಜನೆಗಳನ್ನು ರೂಪಿಸುವಲ್ಲಿ ನೂತನ ಅಭಿವೃದ್ಧಿ ಸಮಿತಿ ಪ್ರಮುಖ ಪಾತ್ರ ವಹಿಸಲಿದೆ.
ತುಳುನಾಡಿನ ಧಾರ್ಮಿಕ, ಸಾಂಸ್ಕೃತಿಕ ಹಾಗೂ ನೈಸರ್ಗಿಕ ಪರಂಪರೆಯ ಮಹತ್ವದ ತಾಣವಾಗಿ ನಿನ್ನಿಕಲ್ಲು ಪಾದೆಯನ್ನು ಅಭಿವೃದ್ಧಿಪಡಿಸುವ ತುಳುವರ್ಲ್ಡ್ ಫೌಂಡೇಶನ್, ಕಟೀಲ್‌ನ ಆಶಯಕ್ಕೆ ವಿಜಿತ್ ಕುಮಾರ್ ಶೆಟ್ಟಿ ಅವರ ಸಾಮಾಜಿಕ ಅನುಭವ, ಸಂಘಟನಾ ಸಾಮರ್ಥ್ಯ ಹಾಗೂ ವಿವಿಧ ಕ್ಷೇತ್ರಗಳೊಂದಿಗಿನ ಸಂಪರ್ಕಗಳು ಹೆಚ್ಚಿನ ಬಲ ನೀಡಲಿವೆ.
ವಿಜಿತ್ ಕುಮಾರ್ ಶೆಟ್ಟಿ ಅವರ ನೇಮಕವನ್ನು ತುಳುವ ಮಹಾಸಭೆಯ ಅಂತರರಾಷ್ಟ್ರೀಯ, ರಾಷ್ಟ್ರೀಯ, ಜಿಲ್ಲಾ ಹಾಗೂ ವಲಯ ಸಮಿತಿಗಳ ಪದಾಧಿಕಾರಿಗಳು ಮತ್ತು ನಿನ್ನಿಕಲ್ಲು ಪಾದೆ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments