ವಿಶ್ವ ಚಿತ್ತ ವಿಕಲತೆ ದಿನ (ವಿಶ್ವ ಸ್ಕಿಜೋಪ್ರಿನಿಯಾ ದಿನ) – ಮೇ 24

ಪ್ರತಿ ವರ್ಷ ವಿಶ್ವದಾದ್ಯಂತ ಮೇ 24ರಂದು “ವಿಶ್ವ ಚಿತ್ತವಿಕಲತೆ ದಿನ” ಎಂದು ಆಚರಿಸಿ, ಜನರಲ್ಲಿ ಚಿತ್ತವಿಕಲತೆ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುತ್ತದೆ. ಆರಂಭಿಕ ಹಂತದಲ್ಲಿ ರೋಗವನ್ನು ಗುರುತಿಸಿ, ಸೂಕ್ತ ಚಿಕಿತ್ಸೆಯನ್ನು ನೀಡಿ ರೋಗಿಗೆ ಮತ್ತು ರೋಗಿಯ ಕುಟುಂಬದವರಿಗೆ ಸರಿಯಾದ ಮಾರ್ಗದರ್ಶನವನ್ನು ಸಕಾಲದಲ್ಲಿ ನೀಡಿದ್ದಲ್ಲಿ ಖಂಡಿತವಾಗಿಯೂ ಚಿತ್ತವಿಕಲತೆ ಉಳ್ಳವರು ಎಲ್ಲರಂತೆ ಸುಖ ಜೀವನ ನಡೆಸಿ ಸಮಾಜದ ಒಳಿತಿಗೆ ಸರ್ವತೋಮುಖ ಸಹಕಾರ ನೀಡಬಲ್ಲದು ಎಂಬ ಸಂದೇಶವನ್ನು ಸಮಾಜದ ಎಲ್ಲ ಸ್ತರದ ಜನರಿಗೆ ತಲುಪಿಸುವ ಸದುದ್ದೇಶವನ್ನು ಈ ಆಚರಣೆ ಹೊಂದಿದೆ.

ಏನಿದು ಸ್ಕಿಜೋಪ್ರಿನಿಯಾ?:-

“ಸ್ಕಿಜೋಪ್ರಿನಿಯಾ” ಎಂದು ಆಂಗ್ಲಭಾಷೆಯಲ್ಲಿ ಮತ್ತು “ಚಿತ್ತವೈಕಲ್ಯ” ಎಂದು ಕನ್ನಡದಲ್ಲಿ ಕರೆಯಲ್ಪಡುವ ಈ ರೋಗ ಮೆದುಳು ಮತ್ತು ಮನಸ್ಸಿಗೆ ಸಂಬಂಧಿಸಿದ ರೋಗವಾಗಿದೆ. ನಿಜವಾದ ಅರ್ಥದಲ್ಲಿ ಸ್ಕಿಜೋಪ್ರಿನಿಯಾ ಎಂಬ ಶಬ್ದಕ್ಕೆ ‘ವಿಭಿನ್ನ ವ್ಯಕ್ತಿತ್ವ’ ಅಥವಾ ‘ದ್ವಂದ ವ್ಯಕ್ತಿತ್ವ’ ಎಂಬ ಅರ್ಥವಿದೆ. ಆದರೆ ಈ ರೋಗದಿಂದ ಬಳಲುತ್ತಿರುವವರಲ್ಲಿ ಈ ರೀತಿಯ ವಿಭಿನ್ನ ವ್ಯಕ್ತಿತ್ವ ಕಂಡು ಬರುವುದಿಲ್ಲ. ಮನಸ್ಸಿಗೆ ಸಂಬಂಧಿಸಿದ ರೋಗವಾಗಿದ್ದು, ವ್ಯಕ್ತಿಯು ಭ್ರಮಾಲೋಕದಲ್ಲಿ ವಿಹರಿಸುತ್ತಾ ತನ್ನೊಳಗೆ ಮಾತನಾಡುತ್ತಾ ಯಾವುದೋ ಲೋಕದಲ್ಲಿ ಇದ್ದಂತೆ ಭಾಸವಾಗುತ್ತದೆ. ಹೊರಜಗತ್ತಿನ ಪರಿವೆ ಇಲ್ಲದೆ ಒಬ್ಬನೆ ನಗುತ್ತಾ, ಮಾತನಾಡುತ್ತಾ, ತನ್ನದೇ ಆದ ಭ್ರಮಾ ಲೋಕದಲ್ಲಿ ವಿಹರಿಸುತ್ತಿರುತ್ತಾನೆ. ಆದರೆ ಇತರ ಮಾನಸಿಕ ರೋಗಿಗಳಂತೆ ಈ ರೋಗ ಅಪಾಯಕಾರಿಯಲ್ಲ, ಈ ರೋಗದಿಂದ ಬಳಲುವವರು ಹೆಚ್ಚಾಗಿ ಆಕ್ರಮಣಶೀಲತೆಯನ್ನು ತೋರ್ಪಡಿಸುವುದಿಲ್ಲ.
ಯಾವುದೇ ವಯಸ್ಸಿನಲ್ಲಿ ಈ ರೋಗ ಬರುವ ಸಾಧ್ಯತೆ ಇದ್ದರೂ, ಸಾಮಾನ್ಯವಾಗಿ ಹದಿವಯಸ್ಕರಿಂದ ಮೂವತ್ತರ ಹರೆಯದಲ್ಲಿ ಹೆಚ್ಚು ಕಾಣಸಿಗುತ್ತದೆ. ಮಕ್ಕಳಲ್ಲಿ ಮತ್ತು ಇಳಿವಯಸ್ಸಿನಲ್ಲಿ ಈ ರೋಗ ಬರುವ ಸಾಧ್ಯತೆ ಬಹಳ ಕಡಮೆ.

World Schizophrenia Day – May 24


100ರಲ್ಲಿ ಒಬ್ಬರಿಗೆ ಈ ರೋಗದ ಸಾಧ್ಯತೆ ಇದ್ದು, ಮಹಿಳೆ ಮತ್ತು ಪುರುಷರಲ್ಲಿ ಸಮಾನವಾಗಿ ಕಾಣಸಿಗುತ್ತದೆ, ಆದರೆ ಪುರುಷರಲ್ಲಿ ಮಹಿಳೆಯರಿಗಿಂತ ಮೊದಲೇ ರೋಗದ ಲಕ್ಷಣಗಳು ಕಾಣಿಸಿಕೊಳ್ಳುವುದು. ರೋಗವನ್ನು ಅತೀ ಸುಲಭವಾಗಿ ಗುರುತಿಸಲು ಕಷ್ಟವಾಗಬಹುದು. ಸಾಮಾನ್ಯವಾಗಿ ರೋಗ ಆರಂಭವಾಗಿ ಒಂದೆರಡು ವರ್ಷಗಳು ಕಳೆದ ಬಳಿಕವೇ ಹೆಚ್ಚಾಗಿ ರೋಗವನ್ನು ಪತ್ತೆ ಹಚ್ಚಲಾಗುತ್ತದೆ. ಎಲ್ಲಾ ಜಾತಿ, ಮತ ಮತ್ತು ಪಂಗಡದ ಜನರೂ ಈ ರೋಗಕ್ಕೆ ಸಮಾನವಾಗಿ ತುತ್ತಾಗುತ್ತಾರೆ. ಚಿಕಿತ್ಸೆಗೆ ಚೆನ್ನಾಗಿ ಸ್ಪಂದಿಸುವ ಈ ರೋಗ, ಚಿಕಿತ್ಸೆಗೆ ಒಳಗಾದವರು ನಿಜವಾಗಿಯೂ ಇತರ ಸಾಮಾನ್ಯ ಮನಷ್ಯರಂತೆ ಸುಖ ಜೀವನ ಮತ್ತು ನೆಮ್ಮದಿಯ ಜೀವನ ನಡೆಸಬಲ್ಲರು. ಆದರೆ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳದಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ‘ಚಿತ್ತವಿಕಲತೆ’ ರೋಗದಿಂದ ಬಳಲುತ್ತಿರುವ ಮಂದಿ ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆಯೂ ಇದೆ ಎಂದು ಅಂಕಿಅಂಶಗಳಿಂದ ತಿಳಿದುಬಂದಿದೆ. ಅದೇ ರೀತಿ ಈ ಚಿತ್ತವಿಕಲತೆಯಿಂದ ಬಳಲುತ್ತಿರುವ ರೋಗಿಗಳು ಮಾದಕ ದ್ರವ್ಯ, ಧೂಮಪಾನ ಮುಂತಾದ ಚಟಗಳಿಗೆ ದಾಸರಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ರೀತಿ ಚಿತ್ತವಿಕಲತೆ ಹೊಂದಿದವರು ಮಾದಕದ್ರವ್ಯಗಳಿಗೆ ದಾಸರಾದರೆ, ಅಂತಹ ವ್ಯಕ್ತಿಗಳು ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸದೇ ಇರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ಚಿತ್ತವಿಕಲತೆಗೆ ಒಳಗಾದ ರೋಗಿಗಳಲ್ಲಿ 25 ಶೇಕಡಾ ಮಂದಿ ಸುಲಭವಾಗಿ ಗುಣಮುಖರಾದರೆ, ಮತ್ತುಳಿದ 25 ಶೇಕಡಾ ಮಂದಿ ಸ್ಪಂದಿಸಿ ರೋಗದಿಂದ ವಿಮುಕ್ತರಾಗಿ, ಸಮಾಜದ ಮುಖ್ಯವಾಹಿನಿ ಸೇರಿಕೊಂಡು ಎಲ್ಲರಂತೆ ಬದುಕುತ್ತಾರೆ. ಆದರೆ ಉಳಿದ 25 ಶೇಕಡಾ ಮಂದಿಗೆ ನಿರಂತರವಾದ ಮಾನಸಿಕ ನೆರವು, ನೈತಿಕ ನೆರವು ಮತ್ತು ಕುಟುಂಬದ ಹಾಗೂ ಸ್ನೇಹಿತರ ಹಿತನುಡಿಗಳು ಆಸರೆಯಾಗುತ್ತದೆ. ಶೇಕಡಾ 15 ಮಂದಿಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ನೀಡಬೇಕಾದ ಅನಿವಾರ್ಯತೆ ಇರುತ್ತದೆ, ಮತ್ತು ಉಳಿದ ಕೆಲವು ಮಂದಿ ಹೆಚ್ಚಾಗಿ ‘ಆತ್ಮಹತ್ಯೆ’ಯಿಂದಾಗಿ ಸಾವಿಗೀಡಾಗುತ್ತಾರೆ. ಒಟ್ಟಿನಲ್ಲಿ ಚಿತ್ತವಿಕಲತೆಯಿಂದ ಬಳಲುತ್ತಿರುವವರಿಗೆ ಸೂಕ್ತ ಚಿಕಿತ್ಸೆಯ ಜೊತೆಗೆ, ಗೆಳೆಯರ ಸ್ನೇಹಚಾರದ ಅನಿವಾರ್ಯತೆ ಇದೆ.

World Schizophrenia Day – May 24

ರೋಗ ಲಕ್ಷಣಗಳು ಏನು?

ಸ್ಕಿಜೋಪ್ರಿನಿಯಾ ರೋಗದ ಲಕ್ಷಣಗಳು ಮಾನಸಿಕ ತಜ್ಞರಿಗೆ ಮಾತ್ರ ಸುಲಭವಾಗಿ ಅರ್ಥವಾಗಬಹುದು. ಸಾಮಾನ್ಯ ಜನರಿಗೆ, ಕುಟುಂಬಸ್ಥರಿಗೆ ಈ ರೋಗದ ಲಕ್ಷಣಗಳು ಆರಂಭಿಕ ಹಂತದಲ್ಲಿ ಅರ್ಥವಾಗದೆ ಇರಬಹುದು.

  1. ತನ್ನ ಪಾಡಿಗೆ ತಾನೇ ಮಾತನಾಡುವುದು, ಒಬ್ಬನೆ ನಗುವುದು ಈ ರೋಗದ ಪ್ರಾಥಮಿಕ ಲಕ್ಷಣವಾಗಿರುತ್ತದೆ.
  2. ವಿನಾಕಾರಣ ಭಯ, ನಿದ್ರಾಹೀನತೆ, ನಿರಾಸಕ್ತಿ ಮತ್ತು ಬಾಹ್ಯಜಗತ್ತಿನ ಪರಿವೆ ಇಲ್ಲದಂತೆ ವರ್ತಿಸುವುದು.
  3. ವಿನಾಕಾರಣ ಇತರರ ಮೇಲೆ ಅನುಮಾನ ಪಡುವುದು, ಬೇರೆಯವರಲ್ಲಿ ತನ್ನ ವಿರುದ್ಧ ಹಲ್ಲು ಮಸೆಯುತ್ತಿದ್ದಾರೆ, ಸಂಚು ಹೂಡುತ್ತಿದ್ದಾರೆ, ಹಿಂಬಾಲಿಸುತ್ತಿದ್ದಾರೆ ಮತ್ತು ವಿಷಯಾಂತರ ಮಾಡುತ್ತಿದ್ದಾರೆ ಎಂದೆಲ್ಲಾ ಕಲ್ಪಸಿಕೊಳ್ಳುವುದು.
  4. ಯಾರು ಇಲ್ಲದಿದ್ದರೂ, ಏಕಾಂತದಲ್ಲಿ ಇದ್ದರೂ ಯಾರದ್ದೋ ಮಾತು ಕೇಳಿಸುತ್ತಿದೆ ಎಂದುಕೊಳ್ಳುವುದು.
  5. ತನಗೇನೂ ಆಗಿಲ್ಲ, ರೋಗವಿಲ್ಲ, ಇತರರಲ್ಲಿಯೇ ದೋಷವಿದೆ ಎಂದು ವಾದಿಸಿ ಯಾವುದೇ ಚಿಕಿತ್ಸೆಗೆ ಒಪ್ಪದಿರುವುದು.
  6. ದೈನಂದಿನ ಚಟುವಟಿಕೆಗಳಲ್ಲಿ, ಆಟೋಟಗಳಲ್ಲಿ, ಉದ್ಯೋಗಗಳಲ್ಲಿ ಯಾವುದೇ ಆಸಕ್ತಿ ಇಲ್ಲದೆ, ಕೆಲಸದ ಕ್ಷಮತೆ ಕ್ಷೀಣಿಸುವುದು.
  7. ರೋಗಿಗೆ ತನ್ನಲ್ಲಿರುವ ಮಾನಸಿಕ ತುಮುಲಗಳು, ಭ್ರಮೆಗಳು, ಕೇಳಿಸುವ ಧ್ವನಿಗಳು ಎಲ್ಲವನ್ನೂ ಗ್ರಹಿಸಲು ಸಾಧ್ಯವಾಗದೆ, ತನ್ನ ಸುತ್ತಲಿನ ಪರಿಸರದಲ್ಲಿ ಎಲ್ಲವೂ ತನ್ನ ವಿರುದ್ಧ ನಡೆಯುತ್ತದೆ ಎಂದು ಭಾವಿಸಿಕೊಂಡು ಚಿಂತಿತನಾಗುವುದು.

ಚಿಕಿತ್ಸೆ ಹೇಗೆ ?:-

ಸ್ಕಿಜೋಪ್ರಿನಿಯಾ ಎನ್ನುವ ಚಿತ್ತವಿಕಲತೆಯ ರೋಗದ ಚಿಕಿತ್ಸೆ ಸಂಕೀರ್ಣ ಅಲ್ಲದಿದ್ದರೂ, ರೋಗವನ್ನು ಗುರುತಿಸಬಹುದು, ಅಷ್ಟು ಸುಲಭದ ಮಾತಲ್ಲ. ನುರಿತ ಮನೋವೈದ್ಯರು ಸುಲಭವಾಗಿ ರೋಗವನ್ನು ಗುರುತಿಸಲು ಸಾಧ್ಯವಾಗುತ್ತದೆ. ಆದರೆ ರೋಗಿಯ ಕುಟುಂಬಸ್ಥರಿಗೆ ಈ ರೋಗವನ್ನು ಆರಂಭಿಕದಲ್ಲಿ ಗುರುತಿಸಲು ಸಾಧ್ಯವಾಗದೆ ಇರಬಹುದು. ರೋಗವನ್ನು ಗುರುತಿಸಿದ ಬಳಿಕ ರೋಗಕ್ಕೆ ಚಿಕಿತ್ಸೆಯ ಅವಶ್ಯಕತೆಯನ್ನು ರೋಗಿಗೆ ಮನದಟ್ಟು ಮಾಡುವುದು ಅಷ್ಟು ಸುಲಭದ ಮಾತಲ್ಲ. ಸ್ಕಿಜೋಪ್ರಿನಿಯಾ ಎಂಬ ರೋಗವನ್ನು ವಿಭಿನ್ನ ವ್ಯಕ್ತಿತ್ವದ ಹೊರತಾದ ವಿಚಿತ್ರ ಭಾವನೆ, ಕುತೂಹಲ, ಅನುಮಾನ ಎಲ್ಲವನ್ನೂ ಹೊಂದಿದ, ಮೆದುಳಿಗೆ ಸಂಬಂಧಿಸಿದ ರೋಗ ಎಂದು ಸಂಶೋಧನೆಗಳು ಸಾಬೀತುಪಡಿಸಿದೆ. ಸಾಮಾನ್ಯ ಮನುಷ್ಯನೊಬ್ಬ ದಿನವೊಂದಕ್ಕೆ ಸರಾಸರಿ 16 ಸಾವಿರ ಶಬ್ದವನ್ನು ಮಾತನಾಡುತ್ತಾನೆ ಮತ್ತು ಈ ಚಿತ್ತವಿಕಲತೆ ರೋಗಿಗಳು 25 ಸಾವಿರಕ್ಕೂ ಹೆಚ್ಚು ಶಬ್ದ ಉಲಿಯುತ್ತಾರೆ ಎಂದು ತಿಳಿದು ಬಂದಿದೆ. ಈ ರೀತಿಯ ಭ್ರಮೆಗಳು, ಕೇಳುವ ಧ್ವನಿಗಳು ಮೆದುಳಿನಲ್ಲಿ ಉತ್ಪತ್ತಿಯಾಗುತ್ತದೆ ಎಂದು ಸಂಶೋಧನೆಗಳು ಸಾರಿ ಹೇಳಿದೆ. ಅದೇ ರೀತಿ ಮೆದುಳಿನಲ್ಲಿ ರಚನಾತ್ಮಾಕವಾಗಿ ವ್ಯತ್ಯಾಸ, ನರವಾಹಕ ರಾಸಾಯನಿಕಗಳ ವೈಫರೀತ್ಯ ಮತ್ತು ಮೆದುಳಿನ ಮಾಹಿತಿ ಸಂಸ್ಕರಣೆಯಲ್ಲಿ ದೋಷಗಳು ಈ ಚಿತ್ತವಿಕಲತೆ ರೋಗಿಗಳಲ್ಲಿ ಕಂಡು ಬಂದಿದೆ ಸಂಶೋಧನೆಗಳಿಂದ ಸಾಬೀತಾಗಿದೆ. ಇಷ್ಟೆಲ್ಲಾ ಸಾಬೀತಾದರೂ, ರೋಗಿಗೆ ಚಿಕಿತ್ಸೆಗೆ ಕೊಡಿಸಲು ಕುಟುಂಬಸ್ಥರು ಮತ್ತು ಸಂಬಂಧಿಕರು ಹಿಂದೇಟು ಹಾಕುವುದು ವಿಚಿತ್ರವೇ ಸರಿ. ಒಮ್ಮೆ ಮಾನಸಿಕ ತಜ್ಞರ ಬಳಿ ಹೋಗಿ ಚಿಕಿತ್ಸೆ ಪಡೆದಲ್ಲಿ ಮುಂದೆ ಯಾವಾತ್ತೂ ‘‘ಹುಚ್ಚ’’ ಅಥವಾ ‘‘ಮಾನಸಿಕ’’ ರೋಗಿ ಎಂಬುದಾಗಿ ಹಣೆಪಟ್ಟಿ ಹಾಕಿಸಿಕೊಳ್ಳಲು ತಯಾರಿಲ್ಲದಿರುವುದೇ ಈ ರೋಗದ ಬಹುದೊಡ್ಡ ದುರಂತ ಎಂದರೂ ತಪ್ಪಲ್ಲ. ಅದೇ ರೀತಿ ಚಿತ್ತ ವಿಕಲತೆಯಿಂದ ಬಳಲುತ್ತಿರುವ ರೋಗಿ ಕೂಡ ‘ಚಿಕಿತ್ಸೆ’ಯನ್ನು ತೆಗೆದುಕೊಳ್ಳಲು ಮನಸ್ಸು ಮಾಡುವುದಿಲ್ಲ. ರೋಗಿಗೆ ತನ್ನಲ್ಲಿರುವ ಭ್ರಮೆಗಳು, ಅನುಮಾನಗಳು ಮತ್ತು ಕೇಳಿಸುವ ಧ್ವನಿಗಳು ಮತ್ತು ಮಾನಸಿಕ ತುಮುಲಗಳು ತನ್ನ ಮನಸ್ಸಿನೊಳಗಿನ ಚಿಕಿತ್ಸೆಗೆ ಸ್ಪಂದಿಸುವ ರೋಗದ ಲಕ್ಷಣಗಳು ಎಂಬುದರ ಅರಿವು ಆಗುವುದೇ ಇಲ್ಲ. ತನ್ನ ಸುತ್ತಮುತ್ತಲಿನ ಪರಿಸರದಲ್ಲಿನ ಮತ್ತು ವ್ಯಕ್ತಿಗಳಲ್ಲಿ ಈ ರೀತಿ ನಡೆಯುತ್ತಿದೆ ಎಂದು ಆತ ಭಾವಿಸುತ್ತಾನೆ ಮತ್ತು ತಾನು ಸರಿಯಾಗಿರುವುದು, ತನಗೇಕೆ ಚಿಕಿತ್ಸೆ ಎಂದು ರೋಗಿ ವಾದಿಸುತ್ತಾನೆ ಮತ್ತು ಚಿಕಿತ್ಸೆಗೆ ಮುಂದಾಗುವುದಿಲ್ಲ ಮತ್ತೂ ವಿರೋಧಿಸುತ್ತಲೇ ಇರುತ್ತಾನೆ. ಒಟ್ಟಿನಲ್ಲಿ ರೋಗಿಯನ್ನು ಚಿಕಿತ್ಸೆಗೆ ಒಳಗಾಗುವಂತೆ ಮತ್ತು ರೋಗಿಯ ಕುಟುಂಬಸ್ಥರರನ್ನು ರೋಗಿಗೆ ಸೂಕ್ತ ಚಿಕಿತ್ಸೆ ಒದಗಿಸುವಂತೆ ಪರಿವರ್ತನೆ ಮಾಡುವ ಗುರುತರ ಜವಾಬ್ದಾರಿ ಮನೋವೈದ್ಯರಿಗೆ ಇದೆ. ಅದೇ ರೀತಿ ರೋಗಿಯ ಚಿಕಿತ್ಸೆಗೆ ಪೂರಕವಾದ ವಾತಾವರಣವನ್ನು ಕಲ್ಪಸುವ ಗುರುತರವಾದ ಹೊಣೆಗಾರಿಕೆ, ಕುಟುಂಬಸ್ಥರಿಗೆ, ವೈದ್ಯರಿಗೆ ಮತ್ತು ಸಮಾಜಕ್ಕೆ ಇದೆ.

World Schizophrenia Day – May 24

ಸ್ಕಿಜೋಪ್ರಿನಿಯಾ ರೋಗಕ್ಕೆ ಹೊಸ ಹೊಸ ಔಷಧಿಗಳು ಮಾರುಕಟ್ಟೆಗೆ ಬಂದಿದೆ. ಎಲ್ಲಾ ಔಷಧಿಗಳು ಪರಿಣಾಮಕಾರಿಯಾಗಿರುತ್ತದೆ. ಮನೋವೈದ್ಯರ ನಿರ್ದೇಶನದಂತೆ ಸೂಕ್ತ ಔಷಧಿಯನ್ನು ಸಕಾಲದಲ್ಲಿ ಸೂಕ್ತ ಪ್ರಮಾಣದಲ್ಲಿ ತೆಗೆದುಕೊಂಡಲ್ಲಿ, ರೋಗವನ್ನು ಸಂಪೂರ್ಣವಾಗಿ ಗುಣಪಡಿಸಿ ರೋಗಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರಬಹುದು. ರೋಗಿಗೆ ಬೇಕಾದ ಚಿಕಿತ್ಸೆಯ ಕ್ರಮ, ಔಷಧಿ ಮತ್ತು ಮಾನಸಿಕ ನೆರವು ಇತ್ಯಾದಿಗಳನ್ನು ವೈದ್ಯರೇ ನಿರ್ಧರಿಸುತ್ತಾರೆ. ಇದರ ಜೊತೆಗೆ ವಿದ್ಯುತ್ಕಂಪನ ಚಿಕಿತ್ಸೆ, ನ್ಯೂರೋಮೋಡುಲೇಷನ್, ಅನುಸರಣೆ ಚಿಕಿತ್ಸೆ ಕೂಡಾ ಲಭ್ಯವಿದೆ.

ಕೊನೆ ಮಾತು :-
ಯೋಚನಾ ಲಹರಿ,ಭಾವನೆಗಳ ದಿಕ್ಕು ತಪ್ಪಿಸುವ,ಗೊಂದಲ,ಭ್ರಮೆಗಳ ಸುನಾಮಿ ಅಲೆಗಳನ್ನೇ ಸ್ರಷ್ಟಿಸುವ, ವ್ಯಕ್ತಿತ್ವದ ಬುನಾದಿಯನ್ನೇ ಅಲುಗಾಡಿಸುವ,ಆಹಾರ,ನಿದ್ರೆ,ವಿಶ್ರಾಂತಿಯನ್ನು ಏರುಪೇರಾಗಿಸುವ,,ಸಂಬಂಧಗಳಲ್ಲಿ ಅಪಾರ್ಥ ಕಲ್ಪಿಸುವ,ಅಪನಂಬಿಕೆ ಹಾಗೂ ಸಂಶಯದ ಬೀಜ ಬಿತ್ತುವ, ಒಮ್ಮೆ ವಿರಾಗಿ,ಮತ್ತೊಮ್ಮೆ ಬೈರಾಗಿ,ಮಗದೊಮ್ಮೆ ಹುಚ್ಚನಾಗಿ ಪ್ರಕಟಗೊಳ್ಳುವ,ಬುದ್ದಿ ಕೌಶಲಗಳು ಪ್ರಕಟಣೆಗೆ ತಡೆ ಒಡ್ಡುವ,ನಗು ಅಳು ಕೋಪ ತಾಪ ಭಯ ಸಂತೋಷಗಳನ್ನು ಒಟ್ಟು ಮಾಡಿ ಕಲಸು ಮೇಲೋಗರ ಮಾಡಿ, ಮನಸೆಂಬ ಮಾನಸ ಸರೋವರದಲ್ಲಿ ಸುನಾಮಿಯ ಅಲೆಯನ್ನೇ ಸ್ರಷ್ಟಿಸಿ ವ್ಯಕ್ತಿಯನ್ನು ಸಂಪೂರ್ಣ ಪರಾವಲಂಬಿ ಮಾಡಿ ಪರಪೀಡಕನಂತೆ ಚಿತ್ರಣ ನೀಡುವ,ವಿಚಿತ್ರ,ವಿಸ್ಮಯಕಾರಿ,ವಿಕ್ಷಿಪ್ತ,ಛಿದ್ರ ಮನಸ್ಕತೆ ಮನೋರೋಗವೇ ಸ್ಕೀಜೋಫ್ರೀನಿಯಾ ಎಂದರೆ ತಪ್ಪಾಗಲಾರದು.

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲವೂ ವೇಗವಾಗಿ ನಡೆಯುತ್ತದೆ. ಜೀವನದ ಆಟದಲ್ಲಿ ಹಿತವಾದ ಪೈಪೋಟಿ ಅತೀ ಅಗತ್ಯ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ವಿಪರೀತವಾದ ಮಾನಸಿಕ ಒತ್ತಡ, ಮತ್ತು ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮ ಮೆದುಳು ಮತ್ತು ಮನಸ್ಸಿಗೆ ವಿಪರೀತವಾದ ಒತ್ತಡ ಬೀಳುವುದು ಸಹಜ. ಇದು ಒಂದು ಹಂತದಲ್ಲಿ ಇದ್ದರೆ ತೊಂದರೆ ಇಲ್ಲ. ಈ ಸ್ಪರ್ಧೆ ಮತ್ತು ಒತ್ತಡ ವಿಪರೀತವಾದಲ್ಲಿ ಮೆದುಳಿನಲ್ಲಿ ರಚನಾತ್ಮಕ ಬದಲಾವಣೆಯಾಗಿ, ರಸದೂತಗಳು ಮತ್ತು ನರವಾಹಕ ರಾಸಾಯನಿಕಗಳಲ್ಲಿ ಏರುಪೇರು ಉಂಟಾಗಿ ಮೆದುಳಿನ ಕಾರ್ಯಕ್ಷಮತೆ ಮತ್ತು ಮಾಹಿತಿ ಸಂಸ್ಕರಣೆಯಲ್ಲಿ ಏರುಪೇರು ಉಂಟಾಗಿ ಚಿತ್ತವಿಕಲತೆ ರೋಗ ಅಥವಾ ‘ಸ್ಕಿಜೋಪ್ರಿನಿಯಾ’ ರೋಗ ಬರುವ ಸಾಧ್ಯತೆ ಉಂಟಾಗಬಹುದು. ಆದರೆ ದುರಂತವೆಂದರೆ ದೃಶ್ಯಮಾಧ್ಯಮಗಳಲ್ಲಿ ಮತ್ತು ಸಮಾಜಗಳಲ್ಲಿ ಈ ಸ್ಕಿಜೋಪ್ರಿನಿಯಾ ರೋಗದ ಬಗ್ಗೆ ವರ್ಣರಂಜಿತ ವಿವರಣೆ, ಕ್ರೌರ್ಯ, ಕೊಲೆ, ಅಪವಾದಗಳ ಜೊತೆಗೆ ಚಿತ್ರಿಸಿದ ಕಾರಣದಿಂದಾಗಿ, ಎಲ್ಲಾ ಮನುಷ್ಯರು ಈ ರೋಗದ ಮತ್ತು ರೋಗಿಯ ಬಗ್ಗೆ ಅನುಕಂಪ ಮತ್ತು ಸಹಾನುಭೂತಿ ಬೆಳೆಸಿಕೊಂಡಿರುವುದೇ ಬಹುದೊಡ್ಡ ವಿಪರ್ಯಾಸ. ಆದರೆ ನಿಜವಾಗಿಯೂ ಈ ರೋಗದ ಮತ್ತು ರೋಗಿಯ ಬಗ್ಗೆ ಕಾಳಜಿ ಇದ್ದಲ್ಲಿ ಅಂತಹ ರೋಗಿಗಳಿಗೆ ಎಲ್ಲರಂತೆ ಸಮಾಜದಲ್ಲಿ ಸಹಜವಾದ ಮತ್ತು ಗೌರವಯುತವಾದ ಜೀವನ ನಡೆಸಲು ಪೂರಕವಾದ ವಾತಾವರಣ ನಿರ್ಮಿಸುವುದು ನಮ್ಮೆಲ್ಲರ ಆದ್ಯಕರ್ತವ್ಯವಾಗಿದೆ. ಅದರಲ್ಲಿಯೇ ನಮ್ಮೆಲ್ಲರ ಹಿತ ಮತ್ತು ವಿಶ್ವದ ಶಾಂತಿ ಅಡಗಿದೆ.

ಡಾ|| ಮುರಲೀ ಮೋಹನ್ ಚೂಂತಾರು
BDS MDS DNB MBA MOSRCSEd
ಸುರಕ್ಷಾದಂತ ಚಿಕಿತ್ಸಾಲಯ
ಹೊಸಂಗಡಿ – 671 323

Related Posts

Leave a Reply

Your email address will not be published.