HomeFresh Newsಉಡುಪಿಯ ಯಕ್ಷಗಾನ ಕಲಾರಂಗ : ಯಕ್ಷನಿಧಿ ಕಲಾವಿದರ ಸಮಾವೇಶ

ಉಡುಪಿಯ ಯಕ್ಷಗಾನ ಕಲಾರಂಗ : ಯಕ್ಷನಿಧಿ ಕಲಾವಿದರ ಸಮಾವೇಶ

ಉಡುಪಿಯ ಯಕ್ಷಗಾನ ಕಲಾರಂಗ ಕಳೆದ 23 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಯಕ್ಷನಿಧಿ ಕಲಾವಿದರ 2023ರ ಸಮಾವೇಶವು ಜೂನ್ 1 ರ ಗುರುವಾರದಂದು ಉಡುಪಿಯ ಪೂರ್ಣಪ್ರಜ್ಞ ಸಭಾಂಗಣದಲ್ಲಿ ಸಂಪನ್ನಗೊಂಡಿತು. ಸಮಾವೇಶವನ್ನು ಖ್ಯಾತ ಕಥಕ್ ಕಲಾವಿದೆ ವಿದುಷಿ ಮಧು ನಟರಾಜ್ ಅವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅದಮಾರು ಎಜುಕೇಶನ್ ಸೊಸೈಟಿಯ ಆಡಳಿತಾಧಿಕಾರಿ ಡಾ. ಎ. ಪಿ. ಭಟ್, ಕಲಾವಿದರಾದ ಆರ್ಗೋಡು ಮೋಹನದಾಸ್ ಶೆಣೈ, ಕೊಂಡದಕುಳಿ ರಾಮಚಂದ್ರ ಹೆಗಡೆ, ಸರಪಾಡಿ ಅಶೋಕ್ ಶೆಟ್ಟಿ, ಕೆ. ಸದಾಶಿವ ರಾವ್ ಉಪಸ್ಥಿತರಿದ್ದರು.


ಉದ್ಘಾಟನೆಯ ಬಳಿಕ ವಿದುಷಿ ಮಧು ನಟರಾಜ ತಂಡದವರಿಂದ ಕಥಕ್ ನೃತ್ಯದ ಪ್ರಾತ್ಯಕ್ಷಿಕೆ ಮತ್ತು ಸಂವಾದ ಕಾರ್ಯಕ್ರಮ ಜರಗಿತು. ಸಂವಾದದಲ್ಲಿ ಕೊಂಡದಕುಳಿ ರಾಮಚಂದ್ರ ಹೆಗಡೆ, ಪ್ರತಿಭಾ ಎಂ.ಎಲ್. ಸಾಮಗ, ಆರ್ಗೋಡು ಮೋಹನದಾಸ್ ಶೆಣೈ, ಪಾಲ್ಗೊಂಡರು. ಈ ಕಾರ್ಯಕ್ರಮವನ್ನು ವಿದ್ಯಾಪ್ರಸಾದ್ ನಿರೂಪಿಸಿದರು.

ಪೂರ್ವಾಹ್ನ 8.30 ರಿಂದ ಡಾ. ಶೈಲಜಾ, ಡಾ. ರಾಜೇಶ್ ನಾವುಡ ಹಾಗೂ ಡಾ. ಸುನೀಲ್ ಮುಂಡ್ಕೂರ್ ತಂಡದವರಿಂದ ಕಲಾವಿದರ ಆರೋಗ್ಯ ತಪಾಸಣಾ ಕಾರ್ಯಕ್ರಮ ನಡೆಯಿತು.
ತದನಂತರ ಅಪರಾಹ್ನ 12.00 ಗಂಟೆಯಿಂದ ಪ್ರೊ. ಎಂ. ಎಲ್. ಸಾಮಗರ ಅಧ್ಯಕ್ಷತೆಯಲ್ಲಿ ಕಾಲಮಿತಿ ಪ್ರದರ್ಶನ-ಸುಖ ಕಷ್ಟ ಎಂಬ ವಿಷಯದ ಕುರಿತು ಅನಿಸಿಕೆಯ ಅಭಿವ್ಯಕ್ತಿ ಕಾರ್ಯಕ್ರಮ ಜರಗಿತು. ಈ ಕಾರ್ಯಕ್ರಮಕ್ಕೆ ಡಾ. ಜಿ.ಎಲ್. ಹೆಗಡೆ ಅಭ್ಯಾಗತರಾಗಿ ಭಾಗವಹಿಸಿದ್ದರು. ಕಲಾವಿದರುಗಳಾದ ನೀಲ್ಕೋಡು ಶಂಕರ ಹೆಗಡೆ, ವಾಸುದೇವ ರಂಗಾ ಭಟ್ ಆಜ್ರಿ ಗೋಪಾಲ ಗಾಣಿಗ, ಸರಪಾಡಿ ಅಶೋಕ್ ಶೆಟ್ಟಿ, ಮಾಧವ ನಾಗೂರು, ತಾರಾನಾಥ ವರ್ಕಾಡಿ, ರಾಘವೇಂದ್ರ ಮಯ್ಯ, ಲಕ್ಷ್ಮಣ ಮರಕಡ, ನರಸಿಂಹ ಚಿಟ್ಟಾಣಿ, ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ ಹಾಗೂ ಆರ್ಗೋಡು ಮೋಹನದಾಸ್ ಶೆಣೈ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಡಾ. ಜೆ. ಎನ್. ಭಟ್ ಕಲಾವಿದರ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಕಿವಿಮಾತುಗಳನ್ನು ಹೇಳಿದರು. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕಲಾವಿದರಿಗೆ ಶುಭಹಾರೈಸಿದರು.


ಸಮಾವೇಶದ ಪ್ರಧಾನ ಸಮಾರಂಭ ಅಪರಾಹ್ನ 2.30ಕ್ಕೆ ಉಡುಪಿ ಶಾಸಕ ಯಶಪಾಲ್ ಸುವರ್ಣರ ಅಧ್ಯಕ್ಷತೆಯಲ್ಲಿ ಜರಗಿತು. ಮಾಜಿ ಶಾಸಕ ಕೆ. ರಘುಪತಿ ಭಟ್, ಉದ್ಯಮಿ ಪಿ. ಪುರುಷೋತ್ತಮ ಶೆಟ್ಟಿ, ಕೆನರಾ ಬಸ್ಸು ಮಾಲಕರ ಸಂಘದ ಕಾರ್ಯದರ್ಶಿ ಕುಯಿಲಾಡಿ ಸುರೇಶ್ ನಾಯಕ್, ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ. ಜಿ. ಎಲ್ ಹೆಗಡೆ, ಮೊಗವೀರ ಮಹಾಸಭಾದ ಅಧ್ಯಕ್ಷ ಜಯ ಕೋಟ್ಯಾನ್ ಅಭ್ಯಾಗತರಾಗಿ ಭಾಗವಹಿಸಿದ್ದರು. ಸಂಸ್ಥೆಯ ಉಪಾಧ್ಯಕ್ಷರುಗಳಾದ ಎಸ್. ವಿ. ಭಟ್, ಪಿ. ಕಿಶನ್ ಹೆಗ್ಡೆ, ವಿ. ಜಿ. ಶೆಟ್ಟಿ ಉಪಸ್ಥಿತರಿದ್ದರು. ಈ ವೇಳೆ ಯಕ್ಷನಿಧಿಗೆ ದೊಡ್ಡ ಮೊತ್ತ ನೀಡಿದ ಕಲಾವಿದ ನೀಲ್ಕೋಡು ಶಂಕರ ಹೆಗಡೆಯವರನ್ನು ಗೌರವಿಸಲಾಯಿತು. 17 ಮಂದಿ ಕಲಾವಿದರಿಗೆ ಗೃಹನಿರ್ಮಾಣ ಉಡುಗೊರೆಯಾಗಿ ತಲಾ ರೂ. 10,000/- ದೊಂದಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಆರಂಭದಲ್ಲಿ ವರದಿ ವರ್ಷದಲ್ಲಿ ಅಗಲಿದೆ ಹದಿನೇಳು ಕಲಾವಿದರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸುಮಾರು 40 ವೃತ್ತಿಮೇಳಗಳ 650 ಯಕ್ಷನಿಧಿಯ ಸದಸ್ಯ ಕಲಾವಿದರು ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಯಾಗಲು ಕಾರಣರಾದರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೂ ಉಪಯುಕ್ತ ಉಡುಗೊರೆ ವಿತರಿಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments